ಸಿದ್ದರಾಮಯ್ಯ-ಸದಾನಂದಗೌಡ ನಡುವೆ ಗೊಬ್ಬರದ ವಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಮತ್ತೊಮ್ಮೆ ಟ್ವಿಟರ್ ವಾರ್ ನಡೆದಿದ್ದು, ಒಬ್ಬರನ್ನೊಬ್ಬರು ತೀವ್ರವಾಗಿ ಟೀಕಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದ ಡಿ.ವಿ.ಸದಾನಂದಗೌಡರು, ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿತಿಮಿತ ಕಳೆದುಕೊಂಡಿದ್ದಾರೆ, ಕಾಂಗ್ರೆಸ್‍ನಲ್ಲಿ ಒಂಬಂಟಿಯಾಗಿದ್ದಾರೆ ಎಂದು ಟೀಕಿಸಿದ್ದರು.

ಅದಕ್ಕೆ ಟ್ವಿಟರ್‍ನಲ್ಲಿ ಉತ್ತರಿಸಿದ ಸಿದ್ದರಾಮಯ್ಯ ಅವರು, ನನ್ನ ಮಾನಸಿಕ ಸ್ಥಿತಿಯ ಬಗ್ಗೆ ಬಡಬಡಿಸುತ್ತಿರುವ ಸದಾನಂದಗೌಡರ ಬಗ್ಗೆ ಅನುಕಂಪವಿದೆ. ಮೊದಲು ಮುಖ್ಯಮಂತ್ರಿ ಸ್ಥಾನ, ನಂತರ ರೈಲ್ವೆ, ಕಾನೂನು, ಅಂಕಿಅಂಶ…. ಹೀಗೆ ಎಲ್ಲಾ ಕಡೆಗಳಲ್ಲಿ ತಿರಸ್ಕøತಗೊಂಡ ಅವರು ಪಕ್ಷದಲ್ಲೀಗ ಗೊಬ್ಬರವಾಗಿ ಹೋಗಿದ್ದಾರೆ. ಈ ಹತಾಶೆ ಅವರಿಂದ ಇಂತಹ ಹೇಳಿಕೆಗಳನ್ನು ಹೊರಡಿಸಿದೆ ಎಂದು ತಿರುಗೇಟು ನೀಡಿದ್ದಾರೆ.

ಏಕಾಂಗಿಯಾಗಿ ಹೋಗಿರುವ ಡಿ.ವಿ.ಸದಾನಂದಗೌಡ ಅವರನ್ನು ರಾಜ್ಯ ಬಿಜೆಪಿಯಲ್ಲಿ ಯಾರೂ ಗಂಭೀರವಾಗಿ ಸ್ವೀಕರಿಸುತ್ತಿಲ್ಲ. ಇದಕ್ಕಾಗಿ ಅವರು ತಮ್ಮ ಜೋಕುಗಳಿಗೆ ತಾವೇ ನಕ್ಕು ರಾಜ್ಯದ ಜನರಿಗೆ ಆಗಾಗ್ಗೆ ಮನರಂಜನೆ ನೀಡುತ್ತಿರುತ್ತಾರೆ ಎಂದು ಕಟುಕಿದ್ದಾರೆ.

ರಾಜ್ಯದ ಬಿಜೆಪಿ ನಾಯಕರೆಲ್ಲರೂ ನನ್ನ ಮೇಲೆಯೇ ಮುಗಿ ಬೀಳುತ್ತಿರುವುದನ್ನು ನೋಡಿದರೆ ನನ್ನನ್ನು ಅತಿ ಹೆಚ್ಚು ಟೀಕಿಸಿದವರಿಗೆ ಏನೋ ಬಹುಮಾನ ಕೊಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿರಬಹುದು. ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ಅಷ್ಟೊಂದು ಭಯ ಎಂದು ಅವರು ಟ್ವಿಟರ್‍ನಲ್ಲಿ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ಟ್ವಿಟ್‍ಗೆ ಟ್ವಿಟರ್‍ನಲ್ಲೇ ಪ್ರತಿಕ್ರಿಯಿಸಿರುವ ಸದಾನಂದಗೌಡರು, ಅಳಿಯದಿರೋ : ಇಂದೋ ನಾಳೆಯೋ ನೀವೂ ಕೆಳಗುರುಳಿ ಗೊಬ್ಬರದೊಳೊಂದಾಗುವಾ ಮುಂದೆ ಕಾದಿಹುದು ಎಂದು ಕುವೆಂಪು ಅವರ ಕವನದ ಸಾಲನ್ನು ಉಲ್ಲೇಖಿಸಿದ್ದಾರೆ.

ನಾನು ಗೊಬ್ಬರ ಹೌದು. ಸ್ವಪಕ್ಷಿಯರ ರಕ್ತಹೀರಿ ಪಿಎಫ್‍ಐನ ಸಮರ್ಥಕ ನೀವಲ್ಲವೇ ಎಂದು ಸದಾನಂದಗೌಡರು ತಿರುಗೇಟು ನೀಡಿದ್ದಾರೆ. ವೃಕ್ಷಕ್ಕೆಲಿಯದು ಹೂವಿನ ಹಬ್ಬ ? ಗೊಬ್ಬರದ ಜೀವವನ್ನೇ ಹೀರಿ ಕೊಬ್ಬಿಹ ಹೂವೇ ಕಬ್ಬಕ್ಕೆ ನೀಂ ಮಾತ್ರ ವಸ್ತುವೇಂ? ನಿನ್ನಂತೆ ಗೊಬ್ಬರಂ ಕಬ್ಬಕ್ಕೆ ಸಾಮಗ್ರಿಯಾಗಬಾರದೆ ಹೇಳು ? ಎಂದು ಕಾವ್ಯಾತ್ಮಕವಾಗಿ ಸಿದ್ದರಾಮಯ್ಯ ಅವರಿಗೆ ಪ್ರತಿಕ್ರಿಯಿಸಿದ್ದಾರೆ.

Facebook Comments