“ನನ್ನಿಂದಲೇ ಕಾಂಗ್ರೆಸ್‌ಗೆ ವೋಟ್‍ ಬರುತ್ತವೆ, ಅದಕ್ಕೆ ಜೆಡಿಎಸ್-ಬಿಜೆಪಿಗೆ ನನ್ನ ಕಂಡರೆ ಭಯ”

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ನ.27- ಸಿದ್ದರಾಮಯ್ಯ ಅವರಿಂದಾಗಿ ಕಾಂಗ್ರೆಸ್ ಹೆಚ್ಚು ವೋಟ್‍ಗಳು ಬರುತ್ತವೆ ಎಂದು ಜೆಡಿಎಸ್ ಮತ್ತು ಬಿಜೆಪಿಯವರಿಗೆ ನನ್ನ ಕಂಡರೆ ಭಯ ಇದೆ. ಅದಕ್ಕಾಗಿ ಪದೇ ಪದೇ ನನ್ನನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹರಿಹರ ತಾಲೂಕಿನ ಕುಮಾರಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಬಹಳಷ್ಟು ನಾಯಕರಿದ್ದಾರೆ. ಎಲ್ಲರನ್ನೂ ಬಿಟ್ಟು, ನನ್ನನ್ನೇ ಗುರಿಯಾಗಿಸಿಕೊಂಡು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಸೋಲುವ ಆತಂಕ ಇದೆ. ಹಾಗಾಗಿ ಹತಾಶೆಯಿಂದ ನನ್ನ ಮೇಲೆ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಹದಿನೈದು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದರೆ ಆಶ್ಚರ್ಯಪಡಬೇಕಿಲ್ಲ. 12 ಕ್ಷೇತ್ರಗಳನ್ನು ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಜೆಡಿಎಸ್ ಬಿಟ್ಟು, ಕಾಂಗ್ರೆಸ್ ಸೇರಿದ್ದು ಯಾವುದೇ ಅಧಿಕಾರ, ಆಮಿಷಕ್ಕಾಗಿ ಅಲ್ಲ. ಉಪಮುಖ್ಯಮಂತ್ರಿಯಾಗಿದ್ದ ನನ್ನನ್ನು ಜೆಡಿಎಸ್‍ನಿಂದ ಉಚ್ಚಾಟನೆ ಮಾಡಲಾಗಿತ್ತು.

ಒಂದು ವರ್ಷ ಅಹಿಂದ ಸಮುದಾಯಗಳನ್ನು ಸಂಘಟನೆ ಮಾಡುತ್ತಿದ್ದೆ. ಕಾಂಗ್ರೆಸ್ ಅಧಿಕಾರದಲ್ಲಿರಲಿಲ್ಲ. ಸೋನಿಯಾಗಾಂಧಿಯವರು ಅಹಮದ್ ಪಟೇಲ್ ಅವರ ಮೂಲಕ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದರು. ಬಿ.ಸಿ.ಪಾಟೀಲ್ ಹಾಗೂ ಇತರ 17 ಮಂದಿಯಂತೆ ನಾನು ಸಚಿವ ಸ್ಥಾನಕ್ಕಾಗಿಯೋ ಅಥವಾ ಹಣಕ್ಕಾಗಿಯೋ ಪಕ್ಷ ಬಿಡಲಿಲ್ಲ ಎಂದರು.

ಜೆಡಿಎಸ್‍ನ ಶಾಸಕ ಶ್ರೀನಿವಾಸಗೌಡ ಅವರಿಗೆ ಬಿಜೆಪಿಯ ಅಶ್ವಥ್‍ನಾರಾಯಣ, ಸಿ.ಪಿ.ಯೋಗೇಶ್ವರ್, ಅರವಿಂದ ಲಿಂಬಾವಳಿ, ಎಸ್.ಆರ್.ವಿಶ್ವನಾಥ್ ಅವರು ಐದು ಕೋಟಿ ರೂ. ಕೊಟ್ಟು ಇನ್ನು 25 ಕೋಟಿ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಈ ಬಗ್ಗೆ ಶ್ರೀನಿವಾಸಗೌಡ ವಿಧಾನಸಭೆಯಲ್ಲೇ ಹೇಳಿಕೆ ನೀಡಿದ್ದಾರೆ.  ಯಡಿಯೂರಪ್ಪ ಅವರೇ ದೇವದುರ್ಗದಲ್ಲಿ ಜೆಡಿಎಸ್ ಶಾಸಕರ ಪುತ್ರನ ಜೊತೆ ಹಣಕಾಸಿನ ವ್ಯವಹಾರದ ಬಗ್ಗೆ ಮಾತುಕತೆ ನಡೆಸಿದ್ದರು. ಅದೇ ರೀತಿ ಎಲ್ಲಾ ಶಾಸಕರಿಗೆ ಹಣ ಕೊಟ್ಟಿದ್ದಾರೆ. ಆದರೆ ಇದನ್ನು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ ಎಂದು ಬಿ.ಸಿ.ಪಾಟೀಲ್‍ಗೆ ತಿರುಗೇಟು ನೀಡಿದರು.

17 ಮಂದಿ ರಾಜೀನಾಮೆ ನೀಡುವಾಗಲೇ ಚುನಾವಣೆಯ ಎಲ್ಲಾ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳಬೇಕು. ಸಚಿವ ಸ್ಥಾನ ನೀಡಬೇಕು ಎಂದು ಒಪ್ಪಂದವಾಗಿತ್ತು. ಅದರಂತೆ ಬಿಜೆಪಿ ಈಗ ಉಪಚುನಾವಣೆಯಲ್ಲಿ ಅನರ್ಹರ ಪರವಾಗಿ ಹಣದ ಹೊಳೆ ಹರಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಬಿಜೆಪಿಯಿಂದಾಗಿ ಪ್ರಜಾಪ್ರಭುತ್ವ ಕಗ್ಗೊಲೆಯಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಸುಪ್ರೀಂಕೋರ್ಟ್‍ನಿಂದ ಕಪಾಳಮೋಕ್ಷ ಆಗಿದೆ. ಬಹುಮತವಿಲ್ಲದೆ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ವಿಶ್ವಾಸಮತ ಯಾಚಿಸದೆ ಅಧಿಕಾರ ನಡೆಸಲಾರಂಭಿಸಿದರು. ಇದು ಸಂವಿಧಾನದ ಉಲ್ಲಂಘನೆ ಮತ್ತು ರಾಜ್ಯಾಂಗಕ್ಕೆ ಮಾಡಿದ ಅಪಚಾರ. ಪ್ರಧಾನಿ ನರೇಂದ್ರ ಮೋದಿಯವರೇ ಇದರಲ್ಲಿ ಭಾಗಿಯಾಗಿರುವುದು ದುರಂತ. ದೇಶದ ಪ್ರಧಾನಿಯಾಗಿ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ರಾಷ್ಟ್ರಪತಿ ಆಳ್ವಿಕೆ ವಾಪಸ್ ಪಡೆಯಲು ಶಿಫಾರಸು ಮಾಡಿದ್ದು ದುರಂತ ಎಂದು ಸಿದ್ದರಾಮಯ್ಯ ಟೀಕಿಸಿದರು.

ಚುನಾವಣಾ ಆಯೋಗ ಕೂಡ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ.. ಮುಖ್ಯಮಂತ್ರಿ ಯಡಿಯೂರಪ್ಪ ಜಾತಿ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಬೇಕಿದ್ದ ಆಯೋಗ, ಕಾಂಗ್ರೆಸ್ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಹೋದಲ್ಲೆಲ್ಲಾ ಯಡಿಯೂರಪ್ಪ ಅವರು ಮತದಾರರ ಮೇಲೆ ಪರಿಣಾಮ ಬೀರುವಂತಹ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಇದು ನೀತಿಸಂಹಿತೆ ಉಲ್ಲಂಘನೆಯಾಗಿದ್ದರೂ ಆಯೋಗ ಮೌನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಖರ್ಚು ಮಾಡಲು ನಮ್ಮ ಬಳಿ ಹಣವಿಲ್ಲ. ಆದರೂ ಜನ ನಮ್ಮ ಪರವಾಗಿ ನಿಂತಿದ್ದಾರೆ, ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ ಎಂದು ಅವರು ಹೇಳಿದರು.

Facebook Comments