“ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸಿಕೊಟ್ಟೆ, ಬೇಲಿ ಹಾರಿ ಕದ್ದು ಹೋಗಿದ್ದಾರೆ”

ಈ ಸುದ್ದಿಯನ್ನು ಶೇರ್ ಮಾಡಿ

ಕಾಗವಾಡ,ನ.30- ಬೇಲಿ ಹಾರಿ ಜಿಗಿದು ಕದ್ದು ಹೋದ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಕಾಗವಾಡ ಮತಕ್ಷೇತ್ರದ ಊಗಾರಕುರ್ದದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪರ ಮತಯಾಚನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರಾಗಿ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀಮಂತ ಪಾಟೀಲ ನಂಬಿಕೆಗೆ ಅರ್ಹರಲ್ಲ.

ಅವರ ಮೇಲೆ ಮೊದಲಿನಿಂದಲೂ ಅನುಮಾನವಿತ್ತು. ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಬಂದಾಗ ಅವರಿಗೆ ಟಿಕೆಟ್ ನೀಡಿದ್ದೆವು. ಆದರೆ ಬೇಲಿ ಹಾರಿ ಜಿಗಿದು ಕದ್ದು ಹೋಗಿದ್ದಾರೆ ಎಂದರು. ವಿಶ್ವಾಸಯಾಚನೆ ಸಂದರ್ಭದಲ್ಲಿ ನಾವೆಲ್ಲ ರೆಸಾರ್ಟ್‍ನಲ್ಲಿದ್ದೆವು. ನಮ್ಮ ಸಕ್ಕರೆ ಕಾರ್ಖಾನೆಯಲ್ಲಿ ವಿದ್ಯುತ್ ಘಟಕ ಉತ್ಪಾದನೆ ಸಂಬಂಧ ಕೆಲಸವಾಗಬೇಕು ಎಂದು ಶ್ರೀಮಂತ ಪಾಟೀಲ್ ಹೇಳಿದರು.

ನಾನು ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರ ಮೇಲೆ ಒತ್ತಡ ತಂದು ಅವರ ಕೆಲಸ ಮಾಡಿಸಿಕೊಟ್ಟೆ. ಕೆಲಸ ಮಾಡಿಸಿಕೊಂಡ ಮೇಲೆ ಬೇಲಿ ಜಿಗಿದು ಕದ್ದು ಮುಂಬೈಗೆ ಹೋದರು. ಅನಾರೋಗ್ಯ ಎಂದು ಆಸ್ಪತ್ರೆ ಸೇರಿದರು. ಆದರೆ ಇವರು ಸೇರಿದ ಆಸ್ಪತ್ರೆಯಲ್ಲಿ ಹೃದಯ ತಪಾಸಣೆ ಘಟಕವೇ ಇರಲಿಲ್ಲ. ಈ ರೀತಿ ಮೋಸ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು. ಅನರ್ಹ ಶಾಸಕರನ್ನು ಸೋಲಿಸಬೇಕು ಎಂದು ಹೇಳಿದರು.

ಡಿ.9ರ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. ಜಿಡಿಪಿ ಕುಸಿತಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಆಡಳಿತಗಾರರಲ್ಲ. ಉತ್ತಮ ಆರ್ಥಿಕ ತಜ್ಞರೂ ಅಲ್ಲ. ಕೇವಲ ಭಾಷಣಕಾರರು. ದೇಶದ ಆರ್ಥಿಕ ಮಟ್ಟ ಕುಸಿಯುತ್ತಿದೆ. ಇದಕ್ಕೆ ಅವರೇ ನೇರ ಹೊಣೆ ಎಂದರು.

Facebook Comments