ಮಂಗಳೂರು ಗೋಲಿಬಾರ್ : ನ್ಯಾಯಾಂಗ ತನಿಖೆ ಸೂಕ್ತ ಎಂದ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.23- ಮಂಗಳೂರು ಗೋಲಿಬಾರ್ ಘಟನೆಯನ್ನು ಸಿಐಡಿ ತನಿಖೆಗೆ ಬದಲಾಗಿ ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ಮಂಗಳೂರಿಗೆ ಇಂದು ಭೇಟಿ ನೀಡಿದ  ಅವರು, ಗಲಭೆ ಪೀಡಿತ ಪ್ರದೇಶಗಳಿಗೆ ತೆರಳಿ, ಗೋಲಿಬಾರ್‍ನಲ್ಲಿ ಮೃತರಾದ ಕುಟುಂಬ ಸದಸ್ಯರನ್ನು ಭೇಟಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಲಿಬಾರ್ ನಡೆಸಿರುವುದು ಪೊಲೀಸರು.

ಘಟನೆ ಬಗ್ಗೆ ಪೊಲೀಸರಿಂದಲೇ ತನಿಖೆ ನಡೆಸಿದರೆ ನ್ಯಾಯ ಸಿಗುವುದಿಲ್ಲ.ಹೀಗಾಗಿ ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮೊದಲಿನಿಂದಲೂ ಹೇಳುತ್ತಿದ್ದೇನೆ, ಈಗಲೂ ಅದೇ ಒತ್ತಾಯಕ್ಕೆ ಬದ್ಧನಾಗಿದ್ದೇನೆ ಎಂದರು. ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕೇಂದ್ರ ಸರ್ಕಾರವೇ ಕಾರಣ.

ಪೌರತ್ವ ತಿದ್ದುಪಡಿ ವಿವಾದಿತ ಕಾಯ್ದೆ ಜಾರಿಗೊಳಿಸಿದ್ದರಿಂದಾಗಿ ಜನ ಸ್ವಪ್ರೇರಣೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್‍ನ ಹಸ್ತಕ್ಷೇಪ ಇಲ್ಲ ಎಂದು ತಿಳಿಸಿದರು. ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ಅವರಿಗೆ ಬಡವರು, ದಲಿತರ ಬಗ್ಗೆ ಕಾಳಜಿ ಇಲ್ಲ, ಹಾಗಾಗಿ ಅವಹೇಳನಕಾರಿಯಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

Facebook Comments