“ನಮ್ಮ ಬಳಿ ದುಡ್ಡಿಲ್ಲ, ಅದಕ್ಕೆ ಉಪ ಚುನಾವಣೆಯಲ್ಲಿ ಸೋತಿದ್ದೇವೆ” : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.14- ನಮ್ಮ ಬಳಿ ದುಡ್ಡಿಲ್ಲ. ಉಪ ಚುನಾವಣೆಯಲ್ಲಿ ದುಡ್ಡು ಖರ್ಚು ಮಾಡದ ಕಾರಣಕ್ಕಾಗಿ ನಾವು ಸೋಲು ಕಂಡಿದ್ದೇವೆ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ. ಹೈಕಮಾಂಡ್‍ನ ಆಹ್ವಾನದ ಮೇರೆಗೆ ದೆಹಲಿಗೆ ಆಗಮಿಸಿರುವ ಅವರು, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿ ಅನರ್ಹರಾದವರು ಉಪ ಚುನಾವಣೆಯಲ್ಲಿ ಗೆಲ್ಲಲು ಕೋಟ್ಯಂತರ ರೂ. ಖರ್ಚು ಮಾಡಿದ್ದಾರೆ. ಆದರೆ, ನಾವು ದುಡ್ಡು ಖರ್ಚು ಮಾಡಲಿಲ್ಲ. ನಮ್ಮ ಸಿದ್ಧಾಂತ, ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದೇವೆ ಎಂದರು. ರಾಜಕಾರಣಿಗಳು ಭ್ರಷ್ಟರಾಗಿದ್ದೇವೆ. ಹಾಗೆಯೇ ಚುನಾವಣೆ ವೇಳೆ ಜನರನ್ನೂ ಕೂಡ ಭ್ರಷ್ಟರನ್ನಾಗಿ ಮಾಡುತ್ತಿದ್ದೇವೆ. ಈ ವ್ಯವಸ್ಥೆಯ ಬಗ್ಗೆ ಗಂಭೀರ ಚಿಂತನೆ ಅಗತ್ಯ ಇದೆ ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷ ಗೆಲ್ಲುತ್ತದೆ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ನಡೆದ ಉಪ ಚುನಾವಣೆಯಲ್ಲಿ ಬಹಳಷ್ಟು ಮಂದಿ ಕಾಂಗ್ರೆಸಿಗರು ಗೆದ್ದಿದ್ದರು ಎಂದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ 16 ಇಲಾಖೆಗಳಿವೆ. ಒಬ್ಬ ಮಂತ್ರಿ 16 ಇಲಾಖೆಗಳ ಮೇಲೆ ನಿಗಾ ವಹಿಸಲು ಸಾಧ್ಯವೇ ? ಕಳೆದ ಆರು ತಿಂಗಳಿನಿಂದಲೂ ಇದೇ ರೀತಿ ಆಡಳಿತ ನಡೆಯುತ್ತಿದೆ. ಆಡಳಿತ ಯಂತ್ರ ಸಹಜವಾಗಿ ಕುಸಿದು ಹೋಗಿದೆ ಎಂದು ಆರೋಪಿಸಿದರು.

ವಿಪಕ್ಷ ಸ್ಥಾನದ ಕುರಿತು ಗೊಂದಲ ಉಂಟಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಜೆಡಿಎಸ್ ಬಿಟ್ಟಿದ್ದಕ್ಕೆ ಪಶ್ಚಾತ್ತಾಪವೂ ಇಲ್ಲ. ಖುಷಿಯೂ ಇಲ್ಲ ಎಂದರು.
ಜಿಲ್ಲಾ ಮಂತ್ರಿಗಳು ಜಿಲ್ಲೆಗಳಿಗೆ ತೆರಳಿ ಸಭೆಗಳನ್ನು ನಡೆಸುತ್ತಿಲ್ಲ.

ಸರ್ಕಾರ ಜೀವಂತ ಇದೆಯೋ ಇಲ್ಲವೋ ಎಂಬ ಬಗ್ಗೆ ಅನುಮಾನ ಜನ ಸಾಮಾನ್ಯರನ್ನು ಕಾಡುತ್ತಿದೆ. ಯಾವ ಕೆಲಸಗಳು ನಡೆಯುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ಕೇಂದ್ರದಿಂದ ಸೂಕ್ತ ನೆರವು ಸಿಗದೇ ಇದ್ದರೂ ಯಡಿಯೂರಪ್ಪ ಅವರ ಮಂತ್ರಿ ಮಂಡಲ ಬಾಯಿ ಬಿಡುತ್ತಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

Facebook Comments