ಎಸ್‍ಡಿಪಿಐ ನಿಷೇಧಿಸಲು ಅಭ್ಯಂತರವಿಲ್ಲ.., ಆದರೆ ಆರ್‌ಎಸ್‌ಎಸ್‌ ಕಥೆ ಏನು?: ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.18-ಯಾವುದೇ ಸಂಘಟನೆ ಅಥವಾ ಪಕ್ಷದ ಮುಖಂಡರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದನ್ನು ಸಹಿಸುವುದಿಲ್ಲ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಎಸ್‍ಡಿಪಿಐನಂತೆ ಆರ್‍ಎಸ್‍ಎಸ್ ಕೂಡ ಕಾನೂನು ಬಾಹಿರ ಚಟುವಟಿಕೆಗಳು ನಡೆಸಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಸ್‍ಡಿಪಿಐ ನಿಷೇಧಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಇದೇ ರೀತಿ ಚಟುವಟಿಕೆಗಳನ್ನು ಆರ್‍ಎಸ್‍ಎಸ್ ಮಾಡಿಲ್ಲವೇ ಎಂದು ಪ್ರಶ್ನಿಸಿದರು. ಸಂಸದ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಲಾಗಿತ್ತು ಎಂಬ ಮಾಹಿತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರ ಮೇಲೆ ದಾಳಿ ನಡೆದರೂ ಅದು ತಪ್ಪು. ಬಿಜೆಪಿ-ಕಾಂಗ್ರೆಸ್ ಎಂಬ ಬೇಧವಿಲ್ಲ. ಎಲ್ಲರೂ ಒಂದೇ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ನೆರೆ ಹಾವಳಿಯಿಂದ ಜನ ಸಂಕಷ್ಟದಲ್ಲಿದ್ದಾಗ ರಾಜ್ಯಕ್ಕೆ ಭೇಟಿ ನೀಡಲಿಲ್ಲ. ಈಗ ಪುರುಷಾರ್ಥಕ್ಕೆ ಬಂದಿದ್ದಾರೆ. ಸುಳ್ಳು ಹೇಳಿ ಜನರ ದಾರಿ ತಪ್ಪಿಸಲು ಬಂದಿರಬಹುದು ಎಂದು ಲೇವಡಿ ಮಾಡಿದರು. ಮಹದಾಯಿ ವಿವಾದ ಬಗೆಹರಿಸುತ್ತೇವೆ ಎಂದು ಚುನಾವಣೆ ವೇಳೆ ಭರವಸೆ ನೀಡಿದ್ದರು. ಆದರೆ ಈ ವಿಷಯದಲ್ಲಿ ಗೊಂದಲ ನೀತಿ ಅನುಸರಿಸಲಾಗುತ್ತಿದೆ.

ಅಮಿತ್ ಷಾ ಹುಬ್ಬಳ್ಳಿ ಪ್ರವಾಸ ಕೈಗೊಳ್ಳುತ್ತಿದ್ದು, ಅಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ನೆರೆ ಹಾವಳಿಗೆ ಸಮರ್ಪಕ ಪರಿಹಾರ ಕೊಟ್ಟಿಲ್ಲ. ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆಗೆ ಅವಕಾಶ ಕೊಡುತ್ತಿಲ್ಲ. ಈಗ ಅಮಿತ್‍ಷಾ ಹಾಗೂ ಯಡಿಯೂರಪ್ಪ ಅವರು ಒಂದೇ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳುತ್ತಿದ್ದಾರೆ. ಅವರೊಂದಿಗೆ ನಳೀನ್‍ಕುಮಾರ್ ಕಟೀಲ್ ಸಹ ಇದ್ದಾರೆ. ಕಾಂಗ್ರೆಸ್‍ನಲ್ಲಿ ಯಾವುದೇ ವಿಷಯವಾದರೂ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ. ಆದರೆ ಬಿಜೆಪಿಯಲ್ಲಿ ಅಂತಹ ವಾತಾವರಣವೇ ಇಲ್ಲ ಎಂದು ಹೇಳಿದರು.

ವಿರೋಧ ಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಎರಡನ್ನೂ ಬೇರ್ಪಡಿಸಬಾರದು ಎಂದು ಹೈಕಮಾಂಡ್ ಮುಂದೆ ನನ್ನ ಅಭಿಪ್ರಾಯ ಹೇಳಿದ್ದೇನೆ. ಮಹಾರಾಷ್ಟ್ರದಲ್ಲಿ ಈ ರೀತಿ ಮಾಡಲಾಗಿದೆ. ಆದರೆ ಅಲ್ಲಿನ ವಾತಾವರಣ, ಇಲ್ಲಿಯ ವಾತಾವರಣವೇ ಬೇರೆ ಇದೆ ಎಂದರು.

ವಿಪಕ್ಷ ನಾಯಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಅದನ್ನು ಅಂಗೀಕರಿಸುವುದು, ತಿರಸ್ಕರಿಸುವುದು ಹೈಕಮಾಂಡ್‍ಗೆ ಬಿಟ್ಟ ವಿಷಯ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷರು ಇರಬೇಕು ಎಂದು ಹೇಳಿದ್ದೇನೆ. ಆದರೆ ನಾಲ್ವರನ್ನು ನೇಮಕ ಮಾಡುವಂತೆ ಹೇಳಿಲ್ಲ ಎಂದು ಹೇಳಿದರು.

Facebook Comments