ಜನರ ಸಮಸ್ಯೆ ಚರ್ಚೆಯಾಗುವುದು ಬೇಕಿಲ್ಲ: ಸರ್ಕಾರದ ನಡೆಗೆ ಸಿದ್ದು ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.18- ರಾಜ್ಯ ಸರ್ಕಾರಕ್ಕೆ ಅಧಿವೇಶನ ನಡೆಸಿ ಜನರ ಸಮಸ್ಯೆ ಚರ್ಚೆಯಾಗುವುದು ಬೇಕಿಲ್ಲ. ಅದಕ್ಕಾಗಿ ವಿಧಾನಮಂಡಲ ಅಧಿವೇಶನ ಕರೆಯಲು ಹಿಂದೆ-ಮುಂದೆ ನೋಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನಗರದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಕರ್ತ ಚಂದ್ರಶೇಖರ್ ರಾವ್ ಅವರ ನೆನಪು ಮಾಸುವ ಮುನ್ನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ವರ್ಷಕ್ಕೆ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕೆಂಬ ಕಾನೂನನ್ನು ನಾವೇ ಮಾಡಿಕೊಂಡಿದ್ದೇವೆ.

ಆದರೆ, ಅದು ಸರಿಯಾಗಿ ಪಾಲನೆಯಾಗುತ್ತಿಲ್ಲ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗ 35ರಿಂದ 40 ದಿನಗಳ ವರೆಗೆ ಕಲಾಪ ನಡೆಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರದಲ್ಲಿ ಅದೂ ನಡೆದಿಲ್ಲ ಎಂದು ಅಸಹನೆ ವ್ಯಕ್ತಪಡಿಸಿದರು. ವಿಧಾನಮಂಡಲದಲ್ಲಿ ಸುದೀರ್ಘ ಚರ್ಚೆಗಳು ನಡೆಯಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಆದರೆ, ಅಂತಹ ಯಾವುದೇ ಬೆಳವಣಿಗೆಗಳು ನಡೆಯುತ್ತಿಲ್ಲ. ಇದು ಕೆಟ್ಟ ಬೆಳವಣಿಗೆ ಎಂದರು.

ವಿಧಾನಸೌಧ ಎಂದರೆ ನಗೆಪಾಟಲಿಗೀಡಾಗುವಂತಹ ಸ್ಥಳವಾಗಿದೆ. ಪ್ರಜಾಪ್ರಭುತ್ವದ ತಳಹದಿಯ ಮೇಲೆ ಉತ್ತಮ ಚರ್ಚೆಗಳು ನಡೆಯಬೇಕಾದ ಜಾಗದಲ್ಲಿ ಬರೀ ಗಲಾಟೆ, ಗದ್ದಲಗಳಿಂದಾಗಿ ಕೆಟ್ಟ ಹೆಸರು ಬಂದಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು. ಒಬ್ಬ ತಂದೆ ವಿಧಾನಸೌಧವನ್ನು ತನ್ನ ಮಗನಿಗೆ ತೋರಿಸಿದಾಗ ಮಗು ಅದೇ ಪೇಪರ್ ಎರಚಾಡುತ್ತಾರಲ್ಲಾ, ಕಿರುಚಾಡುತ್ತಾರಲ್ಲಾ ಅದೇ ಜಾಗಾನ ಎಂದು ಮರಳಿ ಪ್ರಶ್ನಿಸುತ್ತಾನೆ. ಆ ಮಟ್ಟಿಗೆ ಕಲಾಪ ವ್ಯಂಗ್ಯಕ್ಕೆ ಗುರಿಯಾಗಿದೆ. ಜನರ ತೆರಿಗೆ ಹಣಕ್ಕೆ ಬೆಲೆ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸುಮಾರು ಎರಡು ಲಕ್ಷ ಕೋಟಿ ದಾಟಿದ ಬಜೆಟ್ ಮಂಡನೆಯಾಗುತ್ತದೆ. ಅನುದಾನ ಸರಿಯಾಗಿ ಹಂಚಿಕೆಯಾಗಬೇಕು. ಅಭಿವೃದ್ಧಿ ಕೆಲಸಗಳಾಗಬೇಕು. ಇದಕ್ಕಾಗಿ ಬಜೆಟ್ ಮೇಲೆ ಚರ್ಚಿಸಲು ಕನಿಷ್ಠ 15 ದಿನ ಕಲಾಪ ನಡೆಯಬೇಕು. ಬೇಡಿಕೆಗಳ ಮೇಲೆ ಪ್ರತ್ಯೇಕವಾಗಿ ಚರ್ಚೆಯಾಗಬೇಕು. ಆದರೆ, ಬಹಳಷ್ಟು ಮಂದಿಗೆ ಗಂಭೀರ ಚರ್ಚೆ ಬೇಕಿಲ್ಲ. ಎಷ್ಟು ಬೇಗ ಅಧಿವೇಶನ ಮುಗಿಸಿ ಹೊರ ಹೋಗುತ್ತೇವೋ ಎಂದು ಕಾಯುತ್ತಿರುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಲ್ಲಿನ ನೆರೆ ಸಮಸ್ಯೆಗೆ ಸರಿಯಾದ ಅನುದಾನ ಹಂಚಿಕೆಯಾಗಿಲ್ಲ. ಈ ಕುರಿತು ಬಿಜೆಪಿಯವರು ಕಾಲಹರಣ ಮಾಡಿದರೇ ಹೊರತು ವಾಸ್ತವಾಂಶಗಳ ಚರ್ಚೆಗೆ ಬರಲಿಲ್ಲ ಎಂದು ಹೇಳಿದರು. ಚಂದ್ರಶೇಖರ್ ಅವರು ಜಾತ್ಯಾತೀತ ವ್ಯಕ್ತಿ. ತಮ್ಮ ಪತ್ರಿಕೋದ್ಯಮ ಜೀವನದಲ್ಲಿ ಸತ್ಯಾಂಶಗಳನ್ನು ನೇರ ಹಾಗೂ ನಿಷ್ಠೂರವಾಗಿ ದಾಖಲಿಸಿದ್ದಾರೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ನನಗೂ ಹೃದಯಾಘಾತವಾಗಿದ್ದು, ಅದನ್ನು ಕುಯ್ದು ಸರಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೂ ಆಗಿದೆ. ಅವರಿಗೆ ಕೇವಲ ಸ್ಟಂಟ್ ಅಳವಡಿಸಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಪತ್ರಕರ್ತರಾದ ಭಾಸ್ಕರ್, ಕೆ.ಎನ್.ನಾಗೇಶ್, ನಿವೃತ್ತ ಪ್ರಾಂಶುಪಾಲ ಸಿ.ಯು.ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments