ಬಿಜೆಪಿಗೆ ದೇಶವನ್ನು ಆಳುವ ಯೋಗ್ಯತೆ ಇಲ್ಲ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.26-ನಂಬಿಕೆ ದ್ರೋಹ ಮಾಡಿದ ಪಕ್ಷ ದ್ರೋಹಿಗಳಿಗೆ ಸರಿಯಾದ ಶಿಕ್ಷೆಯಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು 71ನೇ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಪಕ್ಷದಲ್ಲಿದ್ದು ರಾಜಕೀಯವಾಗಿ ಬೆಳೆದ ಬಳಿಕ ನಂಬಿಕೆ ದ್ರೋಹ ಮಾಡಿ ಹೋಗಿದ್ದಾರೆ. ಅವರಿಗೆ ಸರಿಯಾದ ಶಿಕ್ಷೆ ಯಾಗಬೇಕು. ಪಕ್ಷ ದ್ರೋಹಿಗಳಿಗೆ ಪಾಠವಾಗಬೇಕು ಎಂದರು.
ಬಿಜೆಪಿಯವರು ಸಂವಿಧಾನವನ್ನು ವಿರೋಧಿಸಿದ್ದರು. ಅವರಿಗೆ ದೇಶವನ್ನು ಆಳುವ ಯೋಗ್ಯತೆ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸ್ವಾತಂತ್ರ್ಯನಂತರ ಸಂಸತ್‍ನಲ್ಲಿ ಸಂವಿಧಾನ ಮಂಡನೆಯಾದಾಗ ಆಗಿನ ಜನಸಂಘ ವಿರೋಧ ಮಾಡಿತ್ತು.

ಈಗ ಅದೇ ಸಂವಿಧಾನ ದಿನಾಚರಣೆಯನ್ನು ಮಾಡುತ್ತಿದ್ದಾರೆ.ಆರ್‍ಎಸ್‍ಎಸ್ ಮತ್ತು ಜನಸಂಘಗಳು  ಸಂವಿಧಾನದ ಮೇಲೆ ನಂಬಿಕೆಯಿಟ್ಟವರಲ್ಲ. ಅವರಿಗೆ ಮನುವಾದ, ಮನುಸ್ಮೃತಿ ಮೇಲಷ್ಟೇ ನಂಬಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ವರ್ಗವನ್ನು ಗುರಿಯಾಗಿಟ್ಟುಕೊಂಡು ಕಾನೂನು ರೂಪಿಸುತ್ತದೆ. ಸಂವಿಧಾನದಲ್ಲಿ ಎಲ್ಲರೂ ಸಮಾನರು. ಆದರೆ ಸಮಾನತೆಯ ಆಶಯವನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ.

ಕಾಂಗ್ರೆಸ್ಸಿಗರು ಸಂವಿಧಾನವನ್ನು ರಕ್ಷಣೆ ಮಾಡಬೇಕು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶ ಅಪಾಯದಲ್ಲಿದೆ. ಹಲವರ ಪ್ರಾಣತ್ಯಾಗ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಶ್ರೇಷ್ಠ ಸಂವಿಧಾನವನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯವನ್ನು ಹೈಕಮಾಂಡ್ ಶೀಘ್ರದಲ್ಲೇ ಬಗೆಹರಿಸಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Facebook Comments