ಭೂ ಸುಧಾರಣಾ ಕಾಯ್ದೆಯ ಹಿಂದೆ 60 ಸಾವಿರ ಕೋಟಿ ಭ್ರಷ್ಟಚಾರ..! : ಸಿದ್ದರಾಮಯ್ಯ ಬಾಂಬ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಜು.15- ರಾಜ್ಯ ಸರ್ಕಾರ ಸುಘ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವ ಭೂ ಸುಧಾರಣಾ ಕಾಯ್ದೆಯ ಹಿಂದೆ ಸುಮಾರು 60 ಸಾವಿರ ಕೋಟಿ ರೂಪಾಯಿಯ ವ್ಯವಹಾರವಿದ್ದು, ಇದು ಗಣಿಹಗರಣಕ್ಕಿಂತ ದೊಡ್ಡ ಭ್ರಷ್ಟಚಾರವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1961ರ ಭೂ ಸುಧಾರಣಾ ಕಾಯ್ದೆಯನ್ನು ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು 1974ರ ಮಾರ್ಚ್ 1ರಲ್ಲಿ ಜಾರಿಗೆ ತಂದರು.

ಅಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಕಾಯ್ದೆಯಲ್ಲಿದ್ದ ಸೆಕ್ಷನ್ 63, 79ಎ,ಬಿ,ಸಿ ಮತ್ತು 80ನ್ನು ರದ್ದು ಗೊಳಿಸುವ ಸುಗ್ರೀವಾಜ್ಞೆಯನ್ನು ಮಾರ್ಚ್ 13ರಂದು ಜಾರಿಗೆ ತರಲಾಗಿದೆ. ಇದು ಕರಾಳದಿನ ಎಂದು ಹೇಳಿದರು.

ಭೂ ಸುಧಾರಣಾ ಕಾಯ್ದೆಯಿಂದಕ್ರಾಂತಿಕಾರಕ ಬದಲಾವಣೆಯಾಗಿತ್ತು, 25 ಲಕ್ಷ ಗೇಣಿದಾರರಿಗೆ ಸಾಮಾಜಿಕ ನ್ಯಾಯ ಸಿಕ್ಕಿತ್ತು. ಸ್ವಾತಂತ್ರ ಹೋರಾಟದ ಜೊತೆ ಉಳುವವನೆ ಭೂಮಿ ಒಡೆಯನಾಗಬೇಕು ಎಂಬ ಹೋರಾಟವೂ ಮೊದಲು ನಡೆದಿತ್ತು ಎಂದು ಹೇಳಿದರು.

ಕಾಯ್ದೆಯ ಸೆಕ್ಷನ್ 63ರಲ್ಲಿ ಪ್ರತಿಯೊಬ್ಬರು ಭೂಮಿ ಹೊಂದಲು ಮಿತಿ ನಿಗದಿ ಪಡಿಸಲಾಗಿತ್ತು. ನೆರೆಯ ಕೇರಳದಲ್ಲಿ 20, ತಮಿಳುನಾಡಿನಲ್ಲಿ 30, ಆಂಧ್ರಪ್ರದೇಶದಲ್ಲಿ 54 ಎಕರೆ ಹೊಂದಲು ಅವಕಾಶ ಇದೆ. ಕರ್ನಾಟಕದಲ್ಲಿ 118 ಎಕರೆ ಹೊಂದಲು ಅವಕಾಶ ಇತ್ತು. ಅದನ್ನು ಕಾಯ್ದೆ ತಿದ್ದುಪಡಿ ಮೂಲಕ 436 ಎಕರೆಗೆ ಹೆಚ್ಚಿಸಲಾಗಿದೆ.

ಸೆಕ್ಷನ್ 79ಎ ಅಡಿಯಲ್ಲಿ ಕೃಷಿಯೇತರ ಆದಾಯ 25 ಲಕ್ಷ ಮೀರಿದವರು ಕೃಷಿ ಭೂಮಿ ಖರೀದಿಸಬಾರದು ಎಂದಿದೆ. ಸೆಕ್ಷನ್ 79ಬಿ ರೈತರಲ್ಲದವರು ಕೃಷಿ ಭೂಮಿ ಖರೀದಿಸಬಾರದು ಎಂದಿದೆ. 97ಸಿ ಭೂಮಿ ಖರೀದಿಸುವವರು ಸಲ್ಲಿಸುವ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದರೆ ಶಿಕ್ಷೆಗೆ ಗುರಿ ಪಡಿಸಲು ಅವಕಾಶ ಇದೆ.

ಸೆಕ್ಷನ್ 80 ಕೃಷಿಕರಲ್ಲದವರು ಭೂಮಿ ಖರೀದಿಸುವಂತಿಲ್ಲ ಎಂದಿತ್ತು. ಈಗ ಎಲ್ಲಾ ಸೆಕ್ಷನ್‍ಗಳನ್ನು ಪೂರ್ವಾನ್ವಯವಾಗುವಂತೆ ಸಂಪೂರ್ಣವಾಗಿ ರದ್ದು ಮಾಡಿದ್ದಾರೆ. ಸೆಕ್ಷನ್ 79 ಎ,ಬಿ ಅಡಿ 13814 ಪ್ರಕರಣಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ದಾಖಲಾಗಿ ವಿಚಾರಣೆ ನಡೆಯುತ್ತಿದ್ದವು.

ಬೆಂಗಳೂರು ನಗರದಲ್ಲಿ 1080 ಪ್ರಕರಣಗಳು ಬಾಕಿ ಇವೆ. ಈ ಹಿಂದೆ ಕೃಷಿಯೇತರ ಆದಾಯ ಮಿತಿಯನ್ನು 25 ಲಕ್ಷಕ್ಕೆ ಹೆಚ್ಚಿಸುವ ಮುನ್ನಾ 1129 ಹಳೆ ಕೇಸುಗಲಿದ್ದವು, ಆದಾಯ ಮಿತಿ ಹೆಚ್ಚಿಸಿದ ಬಳಿಕ 12685 ಹೊಸ ಕೇಸುಗಳು ದಾಖಲಾಗಿವೆ.

ಈಗ ಎಲ್ಲವೂ ರದ್ದಾಗಿವೆ. ಪ್ರತಿ ಪ್ರಕರಣದಲ್ಲಿ 4 ಎಕರೆ ಎಂದು ಅಂದಾಜಿಸಿದರು 52 ಸಾವಿರ ಎಕರೆ ಪ್ರದೇಶಗಳ ಭೂ ತಕರಾರುಗಳು ರದ್ದುಗೊಂಡಿವೆ. ಬೆಂಗಳೂರಿನಲ್ಲಿ ಭೂಮಿ ಬೆಲೆ ಕೋಟ್ಯಂತರ ರೂಪಾಯಿ ಇದೆ.

ಒಟ್ಟು ಭೂಮಿಯ ಮೌಲ್ಯ ಸುಮಾರು 45 ರಿಂದ 50 ಸಾವಿರ ಕೋಟಿಯಷ್ಟಿದೆ. ಇನ್ನೂ ಸಹಕಾರ ಸಂಘಗಳು ಮತ್ತು ಮಧ್ಯವರ್ತಿಗಳ ಮೂಲಕ ಅಕ್ರಮವಾಗಿ ಖರೀದಿಸಿರುವ ಭೂಮಿಯ ಬಗ್ಗೆ ಸರ್ಕಾರವೇ ಸಮೀಕ್ಷೆ ನಡೆಸಿದ್ದು, ಅದರ ಮೌಲ್ಯ ಸುಮಾರು 10 ಸಾವಿರ ಕೋಟಿ ರೂಪಾಯಿಯಾಗಲಿದೆ. ಇದು ಗಣಿಹಗರಣಕ್ಕಿಂತ ದೊಡ್ಡ ಭ್ರಷ್ಟಚಾರ.

ಗಣಿಹಗರಣದಲ್ಲಿ ನಿರ್ದೀಷ್ಟ ಆರೋಪಿಗಳಿದ್ದರು. ಇಲ್ಲಿ ಸರ್ಕಾರವೇ ಶಾಮೀಲಾಗಿದೆ. ಶ್ರೀಮಂತರ, ರಿಯಲ್ ಎಸ್ಟೇಟ್ ಉದ್ಯಮಿಗಳ ಲಾಬಿಗೆ ಮಣಿದಿದೆ. ಭೂಮಿ ಖರೀದಿಸುವ ಶ್ರೀಮಂತರಿಗೆ ಈ ಕಾಯ್ದೆಯಿಂದ ಲಾಭವಾಗಲಿದೆ. ಕೊರೊನಾ ಸಂದರ್ಭದಲ್ಲಿ ಜನ ಹೋರಾಟ ಮಾಡಲಾಗುವುದಿಲ್ಲ ಎಂಬ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಕಾಯ್ದೆ ಜಾರಿಗೆ ತರಲಾಗಿದೆ.

ನಕಲಿ ಪ್ರಮಾಣಪತ್ರ ಪಡೆಯಲು ಭ್ರಷ್ಟಚಾರ ನಡೆಯುತ್ತಿತ್ತು, ಅಧಿಕಾರಿಗಳು ದುಡ್ಡು ಮಾಡಿಕೊಳ್ಳುತ್ತಿದ್ದರು ಎಂದು ನೆಪ ಹೇಳಿ ಸೆಕ್ಷನ್‍ಗಳನ್ನು ರದ್ದು ಮಾಡಿ ಕಾಯ್ದೆಯನ್ನು ನಿಷ್ಕ್ರೀಯಗೊಳಿಸಲಾಗಿದೆ. ದೇಶಕ್ಕೆ ಮಾದರಿಯಾದ ಕಾನೂನನ್ನು ಕುಂಟು ನೆಪ ಹೇಳಿ ರದ್ದು ಮಾಡಿರುವುದು ಸರಿಯಲ್ಲ.

ಭ್ರಷ್ಟಚಾರ ಇಲ್ಲೊಂದೆ ಕಡೆ ನಡೆಯುತ್ತಿಲ್ಲ. ಉಪನೋಂದಣಿ ಕಚೇರಿ, ಪೊಲೀಸ್ ಎಲ್ಲಾ ಕಡೆ ನಡೆಯುತ್ತದೆ, ಸರ್ಕಾರ ಇರುವುದೇಕೆ. ಭ್ರಷ್ಟಚಾರವನ್ನು ನಾಶ ಮಾಡಲಾಗುವುದಿಲ್ಲ, ಕನಿಷ್ಠ ನಿಯಂತ್ರಿಸಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ 87 ಲಕ್ಷ ಕೃಷಿ ಕುಟುಂಬಗಳಿವೆ, ಸುಮಾರು 4 ಕೋಟಿ ಜನ ಅವಲಂಬಿತರಿದ್ದಾರೆ . ಸರ್ಕಾರದ ಸುಗ್ರೀವಾಜ್ಞೆಯಿಂದ ಅಷ್ಟು ಮಂದಿ ತೊಂದರೆಗೆ ಒಳಗಾಗುತ್ತಾರೆ. ಕಾರ್ಪೊರೇಟ್ ಕಂಪೆನಿಗಳು ನೂರಾರು ಎಕರೆ ಖರೀದಿಸಿ ಮೋಜಿಗಾಗಿ ಫಾರಂಹೌಸ್ ಮಾಡಿಕೊಳ್ಳುತ್ತವೆ, ಇಲ್ಲ ರಿಯಲ್ ಎಸ್ಟೇಟ್ ಮಾಡುತ್ತವೆ. ಭೂಮಿ ಕಳೆದುಕೊಂಡ ರೈತರು ಮುಂದಿನ ದಿನಗಳಲ್ಲಿ ಕಾರ್ಪೊರೇಟ್ ಕಂಪೆನಿಗಳ ಬಾಗಿಲು ಕಾಯಬೇಕಾಗುತ್ತದೆ, ಆಹಾರ ಉತ್ಪಾದನೆ ಕುಂಠಿತಗೊಂಡು ಸ್ವಾವಲಂಬನೆ ಸಾಶವಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.

ಅಂಬಾನಿ, ಅದಾನಿ ಅಂತವರಿಗೆ ಹೊಲ ಉಳಲು ಬರುತ್ತದೆಯೇ ಅವರೆಲ್ಲಾ ವ್ಯವಸಾಯ ಮಾಡುತ್ತಾರೆಯೇ. ಅಕ್ಕಿ, ರಾಗಿ, ಕಬ್ಬು ಬೆಳೆಯುತ್ತಾರೆಯೇ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ರೈತ, ಜನ ವಿರೋಧಿ ಕಾನೂನು ಜಾರಿಗೆ ತರುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕುಮ್ಮಕ್ಕಿದೆ. ಮೋದಿ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. ಎಲ್ಲವನೂ ಖಾಸಗೀಕರಣ ಮಾಡುತ್ತಿದ್ದಾರೆ.

ಸರ್ಕಾರಿ ಸ್ವಾಮ್ಯದಲ್ಲಿ ಇದ್ದರೆ ಮೀಸಲಾತಿ ಕೊಡಬೇಕು. ಖಾಸಗಿಕರಣ ಮಾಡಿದರೆ ಮೀಸಲಾತಿ ಕೊಡಬೇಕಿಲ್ಲ. ನೇರವಾಗಿ ಮೀಸಲಾತಿ ತೆಗೆದರೆ ಫಲಾನುಭವಿಗಳು ಬೀದಿಗೆ ಬರುತ್ತಾರೆ ಎಂಬ ಭಯದಿಂದ ಹಿಂಬಾಗಿಲ ಮೂಲಕ ಮೀಸಲಾತಿ ತೆಗೆದು ಹಾಕುತ್ತಾರೆ. ಇದರಿಂದ ಹಿಂದೆ ಇದ್ದ ಜಹಗೀರ್‍ದಾರ್ ಪದ್ಧತಿಯನ್ನು ಮತ್ತೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಎಪಿಎಂಸಿ ಕಾಯ್ದೆ, ಎಸ್ಮಾ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಅವು ಕೂಡ ಜನವಿರೋಧಿಯಾಗಿವೆ. ಈಗ ಹೊಸದಾಗಿ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜನ್ನು ಖಾಸಗೀಕರಣ ಮಾಡುವ ಕಾಯ್ದೆಯನ್ನು ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ.

ವಿಧಾನಸಭೆ ಅಧಿವೇಶನ ನಡೆಸಿ ಈ ಬಗ್ಗೆ ಚರ್ಚೆ ನಡೆಸಲಿ. ಅದನ್ನು ಬಿಟ್ಟು ಸರ್ವಾಧಿಕಾರಿ ಧೋರಣೆ ಮೂಲಕ ಕಾನೂನು ಜಾರಿಗೆ ತರುವುದನ್ನು ಕಾಂಗ್ರೆಸ್ ಪಕ್ಷ ಒಕ್ಕೊರಲಿನಿಂದ ವಿರೋಧಿಸುತ್ತದೆ.

ರೈತ ಸಂಘಟನೆಗಳು, ದಲಿತ ಸಂಘಟನೆಗಳು ಮತ್ತು ಬೇರೆ ಪಕ್ಷಗಳ ಜೊತೆ ಚರ್ಚೆ ಮಾಡುತ್ತೇವೆ. ಗ್ರಾಮೀಣ ಮಟ್ಟದಿಂದ ಹೋರಾಟ ರೂಪಿಸುತ್ತೇನೆ. ಸುಗ್ರೀವಾಜ್ಞೆ ವಾಪಾಸ್ ಆಗುವವರೆಗೆ ಹೋರಾಟ ಮುಂದುವರೆಯಲಿದೆ. ಬಿಜೆಪಿ ಅಜೆಂಡಾ ಜಾರಿಯಾಗಲು ಬಿಡುವುದಿಲ್ಲ ಎಂದು ಹೇಳಿದರು.

ಕೊರೊನಾ ಸೋಂಕು ದಿನಕ್ಕೆ ಎರಡು ಮೂರು ಸಾವಿರ ಜನರಿಗೆ ಹರಡುತ್ತಿದೆ, 80ಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ. ಕೊರೊನಾ ನಿಯಂತ್ರಣ ತುರ್ತುಗಿ ನಡೆಯಬೇಕು.

ಅದನ್ನು ಬಿಟ್ಟು ಜನ ವಿರೋಧಿಗಳಾಗಿರುವ, ಕಾರ್ಪೊರೇಟ್ ವಲಯಕ್ಕೆ ಲಾಭ ಮಾಡಿಕೊಡುವ ಈ ಕಾಯ್ದೆಗಳ ತಿದ್ದುಪಡಿ ಮಾಡುವ ಉದ್ದೇಶ ಏನಿತ್ತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Facebook Comments

Sri Raghav

Admin