“ಬಿಕಾಂ ಓದಲಾಗದ ಅದಾನಿ ಶ್ರೀಮಂತರಾಗಲು ಮೋದಿಯ ಕುಮ್ಮಕ್ಕೆ ಕಾರಣ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿ ಅಲ್ಲ, ಭ್ರಷ್ಟ ಜನತಾ ಪಾರ್ಟಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಸೇರಿದ ನಾಯಕರನ್ನು ಸ್ವಾಗತಿಸಿ ಮಾತನಾಡಿದ ಅವರು, ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿ ಅವರಿಗೆ ಪತ್ರ ಬರೆದು ದೂರು ನೀಡಿದೆ.

ಬಿಜೆಪಿಯವರು ಅತ್ಯಂತ ಭ್ರಷ್ಟರು. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಚಿವರಾಗಿದ್ದವರು. ಭ್ರಷ್ಟಚಾರದ ಆರೊಪ ಕೇಳಿ ಬಂದಾಗ ಆಯೋಗ ರಚನೆ ಮಾಡಿ ತನಿಖೆ ಮಾಡಿಸಬೇಕು. ಆದರೆ ಈ ಸರ್ಕಾರ ಆ ರೀತಿ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಜನರನ್ನು, ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಬಂಡವಾಳ ಶಾಹಿಗಳ ಪರ ಇರುವ ಬಿಜೆಪಿ, ತಳ ಸಮುದಾಯ, ಬಡವರು, ರೈತರು, ಮಹಿಳೆಯರು, ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಹೊಂದಿಲ್ಲ. ಬಿಜೆಪಿಯವರು ಅಲ್ಪಸಂಖ್ಯಾತರ ವಿರುದ್ಧವಾಗಿ ಕಿಡಿಕಾರುತ್ತಾರೆ. ಚರ್ಚೆಗಳಿಗೆ ನುಗ್ಗಿ ದಾಳಿ ಮಾಡುವುದನ್ನು ಆರಂಭಿಸಿದ್ದಾರೆ. ದೇಶದಲ್ಲಿ ಶೇ.2ರಷ್ಟು ಕ್ರಿಶ್ಚಿಯನ್ನರಿದ್ದಾರೆ. ಸಂವಿಧಾನ ಎಲ್ಲಾ ಧರ್ಮಗಳಿಗೆ ತಮ್ಮ ಆಚರಣೆಗಳನ್ನು ಪಾಲಿಸಲು ಅವಕಾಶ ನೀಡಿದೆ. ಆದರೆ ಬಿಜೆಪಿಯವರು ಅಲ್ಪಸಂಖ್ಯಾತರ ವಿರೋಧಿಗಳಾಗಿದ್ದಾರೆ ಎಂದರು.

ಮೋದಿ ಸುಳ್ಳು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸಿ ಅಧಿಕಾರ ಹಿಡಿದು ಕುಳಿತಿದ್ದಾರೆ. ಅದಾನಿ ಏಷ್ಯಾದಲ್ಲೇ ನಂಬರ್ ಒನ್ ಶ್ರೀಮಂತನಾಗಿದ್ದಾರೆ. ಉದ್ಯಮಿ ಮುಖೇಶ್ ಅಂಬಾನಿಗಿಂತಲೂ ಅದಾನಿ ಮೇಲ್ಮಟ್ಟಕ್ಕೆ ಹೋಗಿದ್ದಾರೆ. ಬಿಕಾಂ ಓದಲಾಗದೆ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದ್ದ ಅಸಾಮಿ ಅದಾನಿ ಶ್ರೀಮಂತರಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಕುಮ್ಮಕ್ಕೆ ಕಾರಣ ಎಂದು ಆರೋಪಿಸಿದರು.

ನಮ್ಮ ಸರ್ಕಾರ ಜಾರಿಗೆ ತಂದ ಜನ ಪರ ಕೆಲಸಗಳನ್ನು ನಿಲ್ಲಿಸಿರುವ ಬಿಜೆಪಿ ಸರ್ಕಾರ,ಅದಾನಿ, ಅಂಬಾನಿ ಅವರಂತ ಶ್ರೀಮಂತರಿಗೆ ಬೆಂಬಲವಾಗಿ ನಿಂತಿದೆ. ಬಿಜೆಪಿ ಅಧಿಕಾರದಲ್ಲಿದ್ದರೆ ಶ್ರೀಮಂತರು ಮಾತ್ರ ಬೆಳೆಯಲು ಸಾಧ್ಯ ಎಂದರು. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ರದ್ದು ಮಾಡಬೇಕು ಎಂದು ರೈತರು ಒಂದು ವರ್ಷ ನಿರಂತರವಾಗಿ ಪ್ರತಿಭಟನೆ ನಡೆಸಿ ಏಳು ನೂರು ಜನ ಮೃತ ಪಟ್ಟಿದ್ದರು.

ಪಂಚರಾಜ್ಯಗಳ ಚುನಾವಣೆ ಸೋತ ಬಳಿಕ ಪ್ರಧಾನಿ ಕಾನೂನುಗಳನ್ನು ಹಿಂಪಡೆದಿದ್ದಾರೆ. ಮೊದಲೇ ಈ ಕೆಲಸ ಮಾಡಿದ್ದರೆ 700 ಜನರ ಪ್ರಾಣ ಉಳಿಯುತ್ತಿತ್ತು. ಲಖ್ಖಿಂಪುರಕೇರಿ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರ ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಬಿಜೆಪಿಯವರು ರಾಕ್ಷಸಿ ಮನಸ್ಥಿತಿ ಇರುವವರು, ನೀವು ಬಿಜೆಪಿ ಬಿಟ್ಟು ಒಳ್ಳೆಯ ಕೆಲಸ ಮಾಡಿದ್ದೀರಾ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ನಮ್ಮಲ್ಲಿ ಹೊಸಬರು ಹಳಬರು ಎಂಬ ಬೇಧ ಭಾವ ಇಲ್ಲ. ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ. ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದರು.

ಡಿಸೆಂಬರ್ 11ರಂದು ರಾಜ್ಯದೆಲ್ಲೆಡೆ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಂಡಿದ್ದೇವೆ. ಆ ದಿನ ಎಲ್ಲಾ ನಾಯಕರು ತಮ್ಮ ಕ್ಷೇತ್ರದಲ್ಲೇ ಹಾಜರಿದ್ದು ಸದಸ್ಯತ್ವ ಪಡೆದುಕೊಳ್ಳಬೇಕು. ಪ್ರತಿ ಬೂತ್ ಮಟ್ಟದಲ್ಲಿ 10-12 ಮಂದಿ ಕಾರ್ಯಕರ್ತರು ಸೇರಿ ನೋಂದಣಿ ಅಭಿಯಾನ ನಡೆಸಬೇಕು ಎಂದರು.

ವಿಧಾನ ಪರಿಷತ್‍ನ ಮಾಜಿ ಸದಸ್ಯರು, ಜೆಡಿಎಸ್ ಮುಖಂಡರಾದ ಸಿ.ಆರ್.ಮನೋಹರ್, ಬಿಜೆಪಿಯ ಮಾಜಿ ಶಾಸಕ ನಾಗರಾಜು, ಜೆಡಿಎಸ್ ನಾಯಕರಾದ ಅಮರ್‍ನಾಥ್, ಡಾ.ಕೃಷ್ಣ, ಗೋಪಿಕೃಷ್ಣ, ರಾಜ್ಯ ಮಡಿವಾಳ ಜನಾಂಗದ ಅಧ್ಯಕ್ಷ ನಂಜಪ್ಪ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾಡ್ಡಿ, ಶಾಸಕರಾದ ನಂಜೇಗೌಡ, ಶಿವಣ್ಣ, ಮಾಜಿ ಸಚಿವ ಚಲುವರಾಯ ಸ್ವಾಮಿ, ಮಾಜಿ ಸಂಸದ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಸೇರಿ ಅನೇಕರು ಹಾಜರಿದ್ದರು.

Facebook Comments