‘ಕಾವೇರಿ’ ಖಾಲಿ ಮಾಡಲು ಸಿದ್ದರಾಮಯ್ಯಗೆ ಡೆಡ್‌ಲೈನ್‌

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.20-ಅದೃಷ್ಟದ ನಿವಾಸವೆಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಕಾವೇರಿ ನಿವಾಸಕ್ಕಾಗಿ ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಸಂಘರ್ಷ ತಾರಕಕ್ಕೇರಿದ್ದು, ನಾಲ್ಕು ದಿನದಲ್ಲಿ ಮನೆ ಖಾಲಿ ಮಾಡದಿದ್ದರೆ ಸರ್ಕಾರದ ಸವಲತ್ತುಗಳನ್ನು ಬಂದ್ ಮಾಡುವುದಾಗಿ ಎಚ್ಚರಿಸಲಾಗಿದೆ.

ಇದಕ್ಕೆ ಮುನ್ನುಡಿ ಎಂಬಂತೆ ಕಾವೇರಿ ನಿವಾಸದ ಮುಂಭಾಗ ಹಾಕಿದ್ದ ಸಿದ್ದರಾಮಯ್ಯ ಅವರ ನಾಮಫಲಕವನ್ನು ಕಳೆದ ರಾತ್ರಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (ಡಿಪಿಎಆರ್) ಸಿಬ್ಬಂದಿ ತೆರವುಗೊಳಿಸಿದ್ದು, ನಾಲ್ಕು ದಿನದೊಳಗೆ ನಿವಾಸವನ್ನು ಖಾಲಿ ಮಾಡಬೇಕೆಂದು ಸೂಚಿಸಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಮನೆ ಖಾಲಿ ಮಾಡದಿದ್ದರೆ ಐದು ದಿನಗಳ ನಂತರ ವಿದ್ಯುತ್, ನೀರು ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ತತ್‍ಕ್ಷಣದಿಂದಲೇ ಸ್ಥಗಿತಗೊಳಿಸಲಾಗುವುದು ಎಂದು ನೋಟೀಸ್ ಜಾರಿ ಮಾಡಲಾಗಿದೆ.

ಕಾವೇರಿ ನಿವಾಸವು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಿಗದಿಗೊಳಿಸಲಾಗಿದೆ. ಕೂಡಲೇ ಪ್ರತಿಪಕ್ಷದ ನಾಯಕರಾದ ನಿಮಗೆ ನಿಗದಿಪಡಿಸಿರುವ ರೇಸ್‍ಕೋರ್ಸ್ ರಸ್ತೆಯ ಕಾಟೇಜ್ ರೇಸ್‍ವ್ಯೂ-2ಗೆ ಸ್ಥಳಾಂತರಗೊಳ್ಳಬೇಕು. ಮುಖ್ಯಮಂತ್ರಿಯವರ ಕೆಲಸ ಕಾರ್ಯಗಳಿಗೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಕಾನೂನಿನ ಪ್ರಕಾರವೇ ತೆರವುಗೊಳಿಸಲಾಗುವುದು ಎಂದು ನೋಟೀಸ್‍ನಲ್ಲಿ ಸ್ಪಷ್ಟವಾಗಿ ನಿರ್ದೇಶಿಸಲಾಗಿದೆ.

ಡಿಪಿಎಆರ್ ಸಿಬ್ಬಂದಿ ನಿನ್ನೆ ಸಿದ್ದರಾಮಯ್ಯ ಅವರ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ವಾರದೊಳಗೆ ನೀವು ಕಾವೇರಿ ನಿವಾಸವನ್ನು ತೆರವುಗೊಳಿಸಬೇಕು. ಪ್ರಸ್ತುತ ಮುಖ್ಯಮಂತ್ರಿಯವರು ಡಾಲರ್ಸ್ ಕಾಲೋನಿಯಲ್ಲಿರುವ ಅವರ ಸ್ವಂತ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನ ರಾಜ್ಯದ ವಿವಿಧೆಡೆಯಿಂದ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ದೂರು ದುಮ್ಮಾನಗಳನ್ನು ಹೊತ್ತು ನೂರಾರು ಜನರು ಆಗಮಿಸುತ್ತಾರೆ. ಧವಳಗಿರಿ ನಿವಾಸದಲ್ಲಿ ಸಾರ್ವಜನಿಕರನ್ನು ಭೇಟಿಯಾಗಲು ಸ್ಥಳದ ಅಭಾವವಿದೆ. ಅಲ್ಲದೆ, ಸಾರ್ವಜನಿಕರು ರಸ್ತೆಗಳಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಇರುವುದರಿಂದ ಬೇರೆಯವರಿಗೂ ತೊಂದರೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಭೇಟಿ ಹಾಗೂ ದೂರುಗಳನ್ನು ಆಲಿಸಲು ಅನುಕೂಲ ಕಲ್ಪಿಸುವ ಸದ್ದುದ್ದೇಶದಿಂದಲೇ ಮುಖ್ಯಮಂತ್ರಿಗಳಿಗೆ ಕಾವೇರಿ ನಿವಾಸವನ್ನುನಿಗದಿಪಡಿಸಲಾಗಿದೆ. ಆದ್ದರಿಂದ ತಾವು ಹಾಲಿ ನಿವಾಸವನ್ನು ತೆರವುಗೊಳಿಸಿ ಸರ್ಕಾರ ನಿಗದಿಪಡಿಸಿರುವ ನಿವಾಸಕ್ಕೆ ಸ್ಥಳಾಂತರಗೊಳ್ಳುವಂತೆ ಡಿಪಿಎಆರ್ ಸಿಬ್ಬಂದಿ ಮನವಿ ಮಾಡಿದ್ದಾರೆ.

ಈಗಾಗಲೇ ನೀಡಿರುವ ಕಾಲಾವಕಾಶ ಮುಗಿದಿದ್ದು, ಇನ್ನೂ ಹೆಚ್ಚಿನ ಸಮಯಾವಕಾಶ ನೀಡಲು ಸಾಧ್ಯವಿಲ್ಲ. ಜೊತೆಗೆ ದೂರದ ಊರುಗಳಿಂದ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸ್ಥಳದಲ್ಲೇ ಪರಿಹಾರ ಒದಗಿಸುವ ಅಗತ್ಯವಿದ್ದು, ಪ್ರಸ್ತುತ ನಿವಾಸದಲ್ಲಿ ಸ್ಥಳಾವಕಾಶದ ಕೊರತೆ ಇದೆ. ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ಕಾವೇರಿ ನಿವಾಸ ಸೂಕ್ತ ಎಂದು ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿಯವರು ಕಾವೇರಿ ನಿವಾಸಕ್ಕೆ ಸ್ಥಳಾಂತರಗೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ನೀವು ರೇಸ್‍ಕೋರ್ಸ್ ರಸ್ತೆಯ ನಿವಾಸಕ್ಕೆ ತೆರಳಬೇಕೆಂದು ಸೂಚಿಸಲಾಗಿದೆ.

ನಾಮಫಲಕ ತೆರವು: ಕಳೆದ ರಾತ್ರಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನವರು ವಾಸವಿರುವ ಕಾವೇರಿ ನಿವಾಸದ ಮುಂಭಾಗದ ಗೇಟ್ ಪಕ್ಕದಲ್ಲಿದ್ದ ನಾಮಫಲಕವನ್ನು ಸಿಬ್ಬಂದಿ ಬಲವಂತವಾಗಿ ತೆಗೆದುಹಾಕಿದ್ದಾರೆ.  ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಎಂಬ ನಾಮಫಲಕವನ್ನು ಸಿಬ್ಬಂದಿ ತೆರವುಗೊಳಿಸಿದ್ದು, ನಾಳೆ ಅದೇ ಸ್ಥಳದಲ್ಲೇ ಯಡಿಯೂರಪ್ಪ ಅವರ ನಾಮಫಲಕ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಹಿಂದೆ ಕಾವೇರಿ ನಿವಾಸವನ್ನು ತಮಗೇ ನೀಡಬೇಕೆಂದು ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರು ಕಾವೇರಿಯಲ್ಲೇ 5 ವರ್ಷ ವಾಸ್ತವ್ಯಹೂಡಿದ್ದರು. ರಾಜ್ಯದಲ್ಲಿ 2018ರ ಮೇ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ರಚನೆಯಾಯಿತು. ಈ ವೇಳೆ ಕಾವೇರಿ ನಿವಾಸವನ್ನು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‍ಗೆ ನಿಗದಿಗೊಳಿಸಿದ್ದರು. ಆದರೆ ಜಾರ್ಜ್ ತಮ್ಮ ಗುರುನಿಷ್ಠೆ ಮೆರೆಯಲು ತಮಗೆ ನಿಗದಿಯಾಗಿದ್ದ ಕಾವೇರಿ ನಿವಾಸವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದರು.

ಈ ವೇಳೆ ಪ್ರತಿಪಕ್ಷದ ನಾಯಕರಾಗಿದ್ದ ಬಿಎ.ಸ್.ಯಡಿಯೂರಪ್ಪ ತಮಗೆ ಅದೃಷ್ಟದ ನಿವಾಸವೆಂದೇ ಭಾವಿಸಿದ್ದ ರೇಸ್‍ಕೋರ್ಸ್ ರಸ್ತೆಯ ಕಾಟೇಜ್ ರೇಸ್‍ವ್ಯೂ-2 ನಿವಾಸವನ್ನು ನಿಗದಿಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಅಂದು ಸರ್ಕಾರ ಬಿಎಸ್‍ವೈ ಅವರಿಗೆ ಕುಮಾರಕೃಪಾ ರಸ್ತೆಯಲ್ಲಿರುವ ನಿವಾಸವನ್ನು ನಿಗದಿ ಮಾಡಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‍ಗೆ ರೇಸ್‍ಕೋರ್ಸ್ ರಸ್ತೆಯ ನಿವಾಸವನ್ನು ಕೊಟ್ಟಿತ್ತು.

ಬಳಿಕ ಸಮ್ಮಿಶ್ರ ಸರ್ಕಾರ ಪತನಗೊಂಡು ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ರೇಸ್‍ಕೋರ್ಸ್ ರಸ್ತೆಯ ನಿವಾಸಕ್ಕೆ ಬರಲು ತೀರ್ಮಾನಿಸಿದ್ದರು. ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಮನೆ ನವೀಕರಣ, ರಸ್ತೆ ಡಾಂಬರೀಕರಣ ಸೇರಿದಂತೆ ಎಲ್ಲಾ ರೀತಿಯ ಕಾಮಗಾರಿ ಪೂರ್ಣಗೊಳಿಸಿತ್ತು. ಆದರೆ ಯಡಿಯೂರಪ್ಪ ನವರು ಅತಿಯಾಗಿ ನಂಬುವ ಕುಟುಂಬದ ಜ್ಯೋತಿಷಿಯೊಬ್ಬರು ರೇಸ್‍ಕೋರ್ಸ್ ರಸ್ತೆಯಲ್ಲಿರುವ ನಿವಾಸದ ಬದಲು ಕಾವೇರಿಯಲ್ಲಿ ವಾಸ್ತವ್ಯ ಹೂಡುವಂತೆ ಸಲಹೆ ಮಾಡಿದ್ದರು.

ಆದ್ದರಿಂದಲೇ ಬಿಎಸ್‍ವೈ ಅವರು ಕೊನೆ ಕ್ಷಣದಲ್ಲಿ ರೇಸ್‍ಕೋರ್ಸ್ ರಸ್ತೆಯಲ್ಲಿರುವ ನಿವಾಸ ಕೈಬಿಟ್ಟು ಕಾವೇರಿಯನ್ನು ನಿಗದಿಪಡಿಸಿಕೊಂಡರು. ಈಗ ಸಿದ್ದರಾಮಯ್ಯ ಅವರು ಆರು ವರ್ಷಗಳಿಗೂ ಹೆಚ್ಚು ಕಾಲ ವಾಸ್ತವ್ಯವಿದ್ದ ಕಾವೇರಿಯನ್ನು ತೊರೆಯುವುದು ಅನಿವಾರ್ಯವಾಗಿದೆ.

Facebook Comments