ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯೇ..? : ಸಿದ್ದರಾಮಯ್ಯ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.29- ಸಂತ್ರಸ್ಥ ಯುವತಿ ಪ್ರಾರಂಭದ ಆಡಿಯೋದಲ್ಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೆ ಎಂದು ಹೇಳಿದ್ದಳು, ಈಗ ತನಗೆ ಪ್ರಾಣಭಯ ಇದೆ ಎಂದು ಪತ್ರ ಬರೆದಿದ್ದಾಳೆ. ಆ ಯುವತಿಯ ಪ್ರಾಣಕ್ಕೇನಾದರೂ ಅಪಾಯ ಎದುರಾದರೆ ಅದಕ್ಕೆ ರಾಜ್ಯದ ಮುಖ್ಯಮಂತ್ರಿ, ಗೃಹಸಚಿವರು ಮತ್ತು ಇಡೀ ಬಿಜೆಪಿ ಸರ್ಕಾರವೇ ಹೊಣೆಯಾಗುತ್ತದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಸಂತ್ರಸ್ಥೆ ಯುವತಿ ಬರೆದ ಪತ್ರದಲ್ಲಿ ಎಸ್.ಐ.ಟಿ ಮೇಲೆಯೇ ಅಪನಂಬಿಕೆ ವ್ಯಕ್ತಪಡಿಸಿರುವುದು ಮಾತ್ರವಲ್ಲ, ಅವರು ಸಾಕ್ಷ್ಯನಾಶ ಮಾಡುತ್ತಿದ್ದಾರೆ, ತನ್ನ ವಿರೋಧಿಗಳ ಜೊತೆ ಷಾಮೀಲಾಗಿದ್ದಾರೆ ಎಂದೆಲ್ಲ ಆರೋಪಿಸಿರುವುದು ಗಂಭೀರವಾದ ವಿಷಯ ಎಂದಿದ್ದಾರೆ. ತನಗೆ ಪ್ರಾಣ ಭಯ ಇದೆ ಎಂದು ಆಕೆ ಬರೆದಿರುವುದು ಆತಂಕದ ವಿಚಾರ, ಯಡಿಯೂರಪ್ಪ ಅವರೇ ರಾಜ್ಯದಲ್ಲಿ ನಿಮ್ಮ ಸರ್ಕಾರ ಅಸ್ತಿತ್ವದಲ್ಲಿ ಇದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಂತ್ರಸ್ಥ ಯುವತಿ ನಿರಂತರವಾಗಿ ವಿಡಿಯೋ, ಪತ್ರಗಳನ್ನು ಬಿಡುಗಡೆ ಮಾಡುತ್ತಿದ್ದರೆ, ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಫಲಿತಾಂಶ ಏನು? ಎಂದು ಕೇಳಿದ್ದಾರೆ.

ಸಿಡಿ ಬಹಿರಂಗಗೊಂಡು 27 ದಿನಗಳು ಕಳೆದರೂ ಹಗರಣದ ಕೇಂದ್ರ ವ್ಯಕ್ತಿಯಾದ ಸಂತ್ರಸ್ತ ಯುವತಿಯ ವಿಚಾರಣೆ ನಡೆಸಲು ಸಾಧ್ಯವಾಗದ ಪೊಲೀಸರ ವೈಫಲ್ಯಕ್ಕೆ ಯಾರು ಹೊಣೆ, ಪೊಲೀಸರ ಮೇಲೆ ಪ್ರಭಾವ ಬೀರುತ್ತಿರುವವರು ಯಾರು? ಎಂದು ಅನುಮಾನ ವ್ಯಕ್ತ ಪಡಿಸಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದು ಬಿದ್ದಿರುವುದಕ್ಕೆ ಬೇರೆ ಸಾಕ್ಷಿ ಬೇಕೇ? ಎಂದಿದ್ದಾರೆ.

Facebook Comments