ಯಡಿಯೂರಪ್ಪಗೆ ಸಿದ್ದರಾಮಯ್ಯ ಸವಾಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮೇ 27-ಜೂನ್ 1 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳದಿದ್ದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಲವಾರು ಬಾರಿ ಸರ್ಕಾರ ಪತನಗೊಳಿಸಲು ಪ್ರಯತ್ನಿಸಿದ್ದಾರೆ. ಯಶಸ್ವಿಯಾಗಿಲ್ಲ. ಈಗ ಜೂನ್ 1ರಂದು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಒಂದು ವೇಳೆ ಅವರು ಹೇಳಿದಂತೆ ನಡೆಯದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ? ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಕೇಂದ್ರ ಸರ್ಕಾರಕ್ಕೆ ದೊರೆತ ಜನಾದೇಶ. ರಾಜ್ಯಸರ್ಕಾರಕ್ಕೆ 2018ರ ವಿಧಾನಸಭೆ ಚುನಾವಣೆಯಲ್ಲೇ ಜನ ತೀರ್ಪು ನೀಡಿದ್ದಾರೆ.

ಲೋಕಸಭೆ ಚುನಾವಣೆಯ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಅವರು, ಈ ಹಿಂದೆ ನಾವು ಉಪಚುನಾವಣೆಗಳನ್ನು ಗೆದ್ದಿದ್ದೆವು.

ಆಗ ಮೋದಿಯವರು ರಾಜೀನಾಮೆ ನೀಡಿದ್ದರಾ… ವಿಧಾನಸಭೆ ಚುನಾವಣೆ ಗೆದ್ದ ತಕ್ಷಣ ಮುನಿಸಿಪಾಲಿಟಿ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ರಾಜೀನಾಮೆ ಕೊಡಬೇಕು ಎಂದರೆ ಸಾಧ್ಯವೇ? ಪ್ರಜಾಪ್ರಭುತ್ವದಲ್ಲಿ ಇದೆಲ್ಲ ಸಾಧ್ಯವಿಲ್ಲ. ಜನ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿರುವುದು ಕೇಂದ್ರ ಸರ್ಕಾರಕ್ಕೆ.

ನಾವು ಅದನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸ್ವಾಗತಿಸಿದ್ದೇವೆ. ಒಂದೊಂದು ಕಾಲದಲ್ಲಿ ಜನ ಬೇರೆ ಬೇರೆ ರೀತಿಯ ತೀರ್ಪು ನೀಡುತ್ತಾರೆ. ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.  ರಮೇಶ್ ಜಾರಕಿ ಹೊಳಿ ಸೇರಿದಂತೆ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಸರ್ಕಾರ ಪತನಗೊಳಿಸುವ ಬಿಜೆಪಿಯ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಆಪರೇಷನ್ ಕಮಲ ವಿಫಲವಾಗಲಿದೆ.

ನಿನ್ನೆ ಕಾಂಗ್ರೆಸ್ ಶಾಸಕರಾದ ಸುಧಾಕರ್ ಮತ್ತು ರಮೇಶ್ ಜಾರಕಿ ಹೊಳಿ ಅವರು ಬಿಜೆಪಿಯ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ.

ಮೊದಲು ರಮೇಶ್ ಜಾರಕಿ ಹೊಳಿ ಸುಧಾಕರ್ ಮನೆಗೆ ಹೋಗಿದ್ದರು. ಸುಧಾಕರ್ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಲು ಹೋಗುತ್ತಿರುವುದಾಗಿ ಹೇಳಿದಾಗ, ನಾನೂ ಬರುತ್ತೇನೆ ಎಂದು ರಮೇಶ್ ಜಾರಕಿ ಹೊಳಿ ಕೂಡ ಹೋಗಿದ್ದಾರೆ.

ಅಲ್ಲಿಗೆ ಬಿಜೆಪಿಯ ಯಡಿಯೂರಪ್ಪ, ಆರ್.ಅಶೋಕ್ ಮತ್ತು ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಬರುವುದು ಗೊತ್ತಿರಲಿಲ್ಲ. ಅಶೋಕ್ ಅವರ ಜೊತೆ ಪ್ರತ್ಯೇಕ ರಾಜಕೀಯ ಚರ್ಚೆಗಳೇನೂ ನಡೆದಿಲ್ಲ. ಎಲ್ಲವೂ ಊಹಾಪೋಹಗಳಾಗಿವೆ ಎಂದು ಸಿದ್ದರಾಮಯ್ಯ ಹೇಳಿದರು.

ಸದ್ಯಕ್ಕೆ ಸಂಪುಟ ರಚನೆಯಾಗುವುದಿಲ್ಲ. ಖಾಲಿ ಇರುವ ಸ್ಥಾನಗಳಿಗೆ ಭರ್ತಿ ಮಾಡಲಾಗುತ್ತದೆ. ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ಕಾಂಗ್ರೆಸ್‍ನಲ್ಲಿ ಒಂದು, ಜೆಡಿಎಸ್‍ನಲ್ಲಿ ಎರಡು ಸ್ಥಾನಗಳು ಖಾಲಿ ಇವೆ. ಅವುಗಳಿಗೆ ಭರ್ತಿ ಮಾಡುವ ಸಾಧ್ಯತೆಗಳಿವೆ.

ಕಾಂಗ್ರೆಸ್ ತನ್ನ ಪಾಲಿನ ಸ್ಥಾನವನ್ನು ಶೀಘ್ರವೇ ಭರ್ತಿ ಮಾಡಲಿದೆ. ಸಂಪುಟ ಪುನಾರಚನೆಯ ಯಾವ ಪ್ರಸ್ತಾವನೆಗಳು ನಮ್ಮ ಮುಂದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಮೈಸೂರು ಸೇರಿದಂತೆ ಇತರ ಲೋಕಸಭಾ ಚುನಾವಣೆಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಸೋಲಿಗೆ ಕಾರಣಗಳ ಸುದೀರ್ಘ ವಿಶ್ಲೇಷಣೆ ನಡೆಯಬೇಕಿದೆ.

ನನಗೆ ಈಗಲೂ ಮತಯಂತ್ರಗಳ ಮೇಲೆ ಅನುಮಾನ ಇದೆ. ತಜ್ಞರ ಜೊತೆ ಚರ್ಚೆ ಮಾಡಿದ ಬಳಿಕ ಅದರ ಬಗ್ಗೆ ಮಾತನಾಡುತ್ತೇನೆ. ಅದೆಲ್ಲ ಏನೇ ಇದ್ದರೂ ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ.

ಚುನಾವಣಾ ಮೈತ್ರಿಯಿಂದ ಹಿನ್ನಡೆಯಾಯಿತು, ಪರಸ್ಪರ ಹೊಂದಾಣಿಕೆಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಗೆಲ್ಲಬಹುದಿತ್ತು ಎಂಬೆಲ್ಲ ಚರ್ಚೆಗಳಿಗೆ ಈಗ ಕಾಲ ಮಿಂಚಿ ಹೋಗಿದೆ ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin