‘ಕೈ’ಕಮಾಂಡ್ ಬುಲಾವ್, ದಿಡೀರ್ ದೆಹಲಿಗೆ ಹಾರಿದ ಸಿದ್ದರಾಮಯ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.5- ವಿಧಾನಸಭೆ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಹಾಗು ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆ ಸೇರಿದಂತೆ ಹಲವಾರು ವಿಷಯಗಳ ಕುರಿತು ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಹೈಕಮಾಂಡ್ ಆಹ್ವಾನದ ಮೇರೆಗೆ ಇಂದು ಬೆಳಗ್ಗೆ ದಿಡೀರ್ ದೆಹಲಿಗೆ ತೆರಳಿದ ಸಿದ್ದರಾಮಯ್ಯ ಮಧ್ಯಾಹ್ನದ ವೇಳೆಗೆ ಸೋನಿಯಾಗಾಂಧಿ, ರಾಹುಲ್‍ಗಾಂಧಿ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಿದ್ದರು.

ಅಕ್ಟೋಬರ್ 30ರಂದು ರಾಜ್ಯದ ಸಿಂಧಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅವುಗಳ ಪೈಕಿ ಸಿಂಧಗಿಗೆ ಅಶೋಕ್ ಮನಗೋಳಿ ಅವರನ್ನು ಅಭ್ಯರ್ಥಿ ಮಾಡಲು ರಾಜ್ಯ ಕಾಂಗ್ರೆಸ್ ಸರ್ವಾನುಮತದಿಂದ ತೀರ್ಮಾನಿಸಿದೆ. ಹಾನಗಲ್ ಕ್ಷೇತ್ರದ ಆಯ್ಕೆಯಲ್ಲಿ ಮಾತ್ರ ತೀವ್ಯ ಪೈಪೋಟಿ ಇದೆ.

ಹಾಲಿ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮತ್ತು ಮಾಜಿ ಶಾಸಲ ಮನೋಹರ್ ತಹಸೀಲ್ದಾರ್ ನಡುವೆ ಜಿದ್ದಾಜಿದ್ದಿ ಇದೆ. ಶ್ರೀನಿವಾಸ ಮಾನೇ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿದ್ದು, ಸಿದ್ದರಾಮಯ್ಯ ಅವರು ಕೂಡ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಇತ್ತ ಮನೋಹರ್ ತಹಸೀಲ್ದಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲ ವ್ಯಕ್ತ ಪಡಿಸಿದ್ದರು.

ಹೀಗಾಗಿ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್‍ಗೆ ಧರ್ಮಸಂಕಟ ತಂದಿಟ್ಟಿತ್ತು. ಪ್ರಮುಖವಾಗಿ ಈ ವಿಷಯ ಕುರಿತಂತೆ ಚರ್ಚಿಸಲು ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡಿದೆ. ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರ ಹೆಗಲಿಗೆ ಹೊರಿಸಲಾಗಿದೆ ಎನ್ನಲಾಗಿದೆ.

ಪ್ರಮುಖವಾಗಿ ಕಳೆದ ನಾಲ್ಕು ವರ್ಷಗಳಿಂದಲೂ ಕೆಪಿಸಿಸಿಗೆ ಪದಾಧಿಕಾರಿಗಳ ನೇಮಕಾತಿಯಾಗಿಲ್ಲ. ಪದಾಧಿಕಾರಿಗಳ ಪಟ್ಟಿಯನ್ನು ಕೆಪಿಸಿಸಿ ಹೈಕಮಾಂಡ್‍ಗೆ ಕಳುಹಿಸಿದೆ. ಅದರಲ್ಲಿ ಕೆಲವು ಏರುಪೇರುಗಳಿದ್ದು, ಒಂದು ಬಣಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಪಟ್ಟಿಯ ಬಗ್ಗೆ ಅಸಮಾದಾನ ಇಲ್ಲವೆಂದು ಖಚಿತ ಪಡಿಸಿಕೊಳ್ಳಲು ಹೈಕಮಾಂಡ್ ಚರ್ಚೆ ನಡೆಸಿದೆ ಎನ್ನಲಾಗಿದೆ.

ಹೈಕಮಾಂಡ್ ಬುಲಾವ್ ಮೂಲಕ ಸಿದ್ದರಾಮಯ್ಯ ಹೈಕಮಾಂಡ್‍ನಲ್ಲಿ ಮತ್ತೆ ಪ್ರಭಾವಿ ನಾಯಕ ಎಂಬುದು ಸಾಬೀತಾಗಿದೆ. ಟಿಕೆಟ್ ನೀಡಿಕೆಯಲ್ಲಿ ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೆ ಮನ್ನಣೆ ದೊರೆತರೆ ರಾಜ್ಯ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಮತ್ತಷ್ಟು ಬಿಗಿಯಾಗಲಿದೆ.

ದೆಹಲಿಯ ಭೇಟಿ ವೇಳೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‍ಖಾನ್ ಮನೆಯ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ಸೇರಿದಂತೆ ಇತರ ವಿಷಯಗಳು ಚರ್ಚೆಯಾದವು ಎಂದು ಮೂಲಗಳು ತಿಳಿಸಿವೆ.

Facebook Comments