“ನನ್ನ ಆರೋಗ್ಯ ವಿಚಾರಿಸಿದ ಎಲ್ಲರಿಗೂ ಧನ್ಯವಾದ” : ಆಸ್ಪತ್ರೆಯಿಂದ ಸಿದ್ದರಾಮಯ್ಯ ಡಿಸ್ಚಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.15- ನಾನು ಸಂಪೂರ್ಣವಾಗಿ ಗುಣಮುಖವಾಗಿದ್ದೇನೆ, ಆರೋಗ್ಯದಿಂದ ಇದ್ದೇನೆ ಎಂದು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಹೃದಯ ರಕ್ತನಾಳ ಬ್ಲಾಕ್ ಆದ ಹಿನ್ನೆಲೆಯಲ್ಲಿ ನಗರದ ವೆಗಾಸ್ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆಗೊಳಗಾಗಿ ಇಂದು ಡಿಸ್ಚಾರ್ಜ್ ಆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಮೊದಲಿನಂತೆ ಆರೋಗ್ಯವಾಗಿದ್ದೇನೆ.

ಯಾವುದೇ ರೀತಿಯ ಕಳವಳಕ್ಕೆ ಅವಕಾಶ ಇಲ್ಲ. ತಮಗೆ ಚಿಕಿತ್ಸೆ ಮಾಡಿದ ವೈದ್ಯರು, ನೆರವಾದ ಸಿಬ್ಬಂದಿ ಎಲ್ಲರಿಗೂ ಧನ್ಯವಾದ ಹೇಳಿದರು. ಕಳೆದ 2000ದಲ್ಲಿ ಹೃದಯ ರಕ್ತನಾಳ ಬ್ಲಾಕ್ ಆಗಿತ್ತು. ದೆಹಲಿ ಎಸ್ಕಾರ್ಟ್ ಆಸ್ಪತ್ರೆಯಲ್ಲಿ ಸ್ಟೆಂಟ್ ಹಾಕಿದ್ದರು. ಈಗ ಮತ್ತೆ ಸ್ಟೆಂಟ್ ಅಳವಡಿಸಲಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ಅವರು ತಿಳಿಸಿದರು.

ರಾಜಕೀಯದಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಮನುಷ್ಯತ್ವ ಬಹಳ ಮುಖ್ಯ. ಪಕ್ಷಾತೀತವಾಗಿ ಎಲ್ಲರೂ ಬಂದು ಆರೋಗ್ಯ ವಿಚಾರಿಸಿದ್ದಾರೆ. ವಿಶೇಷವಾಗಿ ಮಠಾಧೀಶರು ಬಂದು ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ವಿವಿಧೆಡೆ ಪೂಜೆ ಸಲ್ಲಿಸಿ ಪ್ರಸಾದ ತಂದುಕೊಟ್ಟಿದ್ದಾರೆ. ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದರು.

ನಿಮ್ಮ ರಾಜೀನಾಮೆಯನ್ನು ವಾಪಸ್ ಪಡೆಯುತ್ತೀರ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ವಿಷಯದ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ ಎಂದು ಯಾವುದೇ ಪ್ರತಿಕ್ರಿಯೆಗೆ ನಕಾರ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರು ಇನ್ನೂ 10 ದಿನಗಳ ಕಾಲ ವಿಶ್ರಾಂತಿ ಪಡೆಯಬೇಕು ಮತ್ತು ಹೆಚ್ಚು ಓಡಾಟ, ಪ್ರವಾಸ ಕೈಗೊಳ್ಳುವುದು ಮಾಡಬಾರದು ಎಂದು ವೈದ್ಯರು ಸೂಚನೆ ನೀಡಿದ್ದಾರೆ. ಹೀಗಾಗಿ ಇನ್ನೂ ಕೆಲ ದಿನಗಳು ಅವರು ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

Facebook Comments

Sri Raghav

Admin