ಸದ್ದಿಲ್ಲದೇ ಮಧ್ಯಂತರ ಚುನಾವಣೆಗೆ ತಯಾರಿ ನಡೆಸಿದ್ದಾರಾ ಸಿದ್ದರಾಮಯ್ಯ..?!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.24- ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಎಂದು ಹೇಳುತ್ತಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಂತರ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆಯೇ…?

ತಮ್ಮ ಮಗನ ಭವಿಷ್ಯ ರೂಪಿಸಲು ಸಿದ್ದತೆ ಮಾಡುತ್ತಿದ್ದಾರೆಯೇ…? ಕಳೆದೆರಡು ದಿನಗಳಿಂದ ಮೈಸೂರಿನಲ್ಲಿ ಲೋಕಸಭೆ ಚುನಾವಣೆಯ ಸೋಲಿನ ಪರಾಮರ್ಶೆ ನಡೆಸುತ್ತಿರುವ ಸಿದ್ದರಾಮಯ್ಯನವರು ಮಧ್ಯಂತರ ಚುನಾವಣೆಗೆ ಸಿದ್ದತೆ ಜೊತೆ ಜೊತೆಗೆ ತಮ್ಮ ಮಗನ ರಾಜಕೀಯ ಭವಿಷ್ಯದ ಕಡೆಗೆ ಗಮನಹರಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಬಲಗೊಳಿಸಲು ತಮ್ಮ ಚಿತ್ತಹರಿಸಿದ್ದಾರೆ. ಅದಕ್ಕಾಗಿಯೇ ರಹಸ್ಯ ಸಭೆಗಳನ್ನು ಕೂಡ ನಡೆಸಿದ್ದಾರೆ ಎನ್ನಲಾಗಿದೆ.

ಅತ್ತ ಜೆಡಿಎಸ್‍ನ ಭರವಸೆಯ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಹಳೇ ಮೈಸೂರು ಭಾಗದಲ್ಲಿ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗುತ್ತಿದ್ದಂತೆ ಇತ್ತ ಮೈಸೂರಿನಲ್ಲಿ ಸಿದ್ದರಾಮಯ್ಯ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಸಮ್ಮಿಶ್ರ ಸರ್ಕಾರ ಇನ್ನೆಷ್ಟು ದಿನ ಇರುತ್ತದೋ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರೇ ಹೇಳಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳ ಮುಖಂಡರು ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಿಂದಲೇ ತಮ್ಮ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಕನಸುಗಳಿಗೆಲ್ಲ ಉತ್ತರ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು. ಅವರ ಕನಸುಗಳ್ಯಾವುವೂ ನನಸಾಗುವುದಿಲ್ಲ ಎಂದರು.

ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದ್ದು, ಕೆಪಿಸಿಸಿಯನ್ನು ಪುನಾರಚನೆ ಮಾಡಲಾಗುತ್ತಿದೆ.ಯುವಕರಿಗೆ ಹಾಗೂ ಹೊಸಬರಿಗೂ ಅವಕಾಶ ನೀಡಲಾಗುವುದು ಎಂದು ಹೇಳಿದರು.

ನಗರದಲ್ಲಿ ನಿನ್ನೆ ಸಂಜೆ ಹೋಟೆಲ್‍ವೊಂದರಲ್ಲಿ ವರುಣಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಡೆದ ಗುಪ್ತ ಸಭೆ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸದೆ ಅಲ್ಲಿಂದ ಸಿದ್ದರಾಮಯ್ಯ ನಿರ್ಗಮಿಸಿದರು.

# ಸರಣಿ ಸಭೆ:
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ವರುಣಾ ಕ್ಷೇತ್ರದಿಂದ ಹೆಚ್ಚು ಮತ ಬಿದ್ದಿರುವುದರಿಂದ ಚಿಂತಿತರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆಯಿಂದ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಕಾರ್ಯರ್ತರು ಮತ್ತು ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ.

ತಮ್ಮ ಪುತ್ರ ಡಾ.ಯತೀಂದ್ರರಿಗಾಗಿ ಸಿದ್ದರಾಮಯ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟು ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಆದರೆ ವರುಣಾದಲ್ಲಿ 50 ಸಾವಿರ ಮತಗಳ ಅಂತರದಿಂದ ಯತೀಂದ್ರ ಜಯಗಳಿಸಿದ್ದರು.

ವರುಣಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿದ್ದು, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರಿಗೆ ಹೆಚ್ಚಿನ ಮತಗಳಿಂದ ಜಯಗಳಿಸಿದ್ದಾರೆ.

ಇತ್ತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಂಡು ಬೇಸರಗೊಂಡಿದ್ದ ಸಿದ್ದರಾಮಯ್ಯ ಮೈಸೂರು ಜಿಲ್ಲೆಯತ್ತ ಗಮನಹರಿಸಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಚಾಮರಾಜನಗರಗಳಲ್ಲೂ ಬಿಜೆಪಿ ಜಯಭೇರಿ ಭಾರಿಸಿದ್ದರಿಂದ ರಾಜಕೀಯ ಭವಿಷ್ಯದ ಬಗ್ಗೆ ಆತಂಕಗೊಂಡ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಮತ್ತೆ ತಮ್ಮ ಹಿಡಿತ ಸಾಧಿಸಲು ಮುಂದಾಗಿದ್ದಾರೆ.

ಅದರ ಪ್ರಯುಕ್ತ ವರುಣಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರ ಜೊತೆ ಮುಖಾಮುಖಿ ಚರ್ಚೆ ನಡೆಸಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ಕಳೆದುಕೊಳ್ಳಬಹುದು, ಮಗನ ರಾಜಕೀಯ ಭವಿಷ್ಯ ಅತಂತ್ರಕ್ಕೆ ಸಿಲುಕಬಹುದು ಎಂಬ ಆತಂಕ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ.

ರಾಜ್ಯ ರಾಜಕೀಯ ಪರಿಸ್ಥಿತಿ ಗಮನಿಸಿದರೆ ಡಿಸೆಂಬರ್ ವೇಳೆಗೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ನಿರೀಕ್ಷೆಯಂತೆ ಮಧ್ಯಂತರ ಚುನಾವಣೆ ಎದುರಾದರೆ ಅದಕ್ಕೆ ಇರುವ ಕಾಲಾವಕಾಶ ಕೇವಲ 5 ತಿಂಗಳು ಮಾತ್ರ. ಹೀಗಾಗಿ ಸಿದ್ದರಾಮಯ್ಯ ನೇರವಾಗಿ ಅಖಾಡಕ್ಕಿಳಿದಿದ್ದಾರೆ.

ತಾವು ಇನ್ನು ಚುನಾವಣಾ ರಾಜಕೀಯದಲ್ಲಿ ಮುಂದುವರೆಯುವುದಿಲ್ಲ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯನವರು, ಮಗನ ರಾಜಕೀಯ ಭವಿಷ್ಯವನ್ನು ಸುಭದ್ರಗೊಳಿಸುವ ತಯಾರಿ ನಡೆಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣಗಳೇನು, ಪಕ್ಷ ಸಂಘಟನೆ ಸೊರಗುತ್ತಿರುವುದು ಎಲ್ಲಿ, ಸಮ್ಮಿಶ್ರ ಸರ್ಕಾರದ ಬಗ್ಗೆ ಸಾರ್ವಜನಿಕರ ಅಭಿಪ್ರಾಯವೇನು, ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಆಗಿರುವ ಹಾನಿಗಳೇನು ಎಂಬೆಲ್ಲ ವಿಚಾರಗಳ ಕುರಿತು ಸಿದ್ದರಾಮಯ್ಯ ಕಾರ್ಯಕರ್ತರು ಹಾಗೂ ಮುಖಂಡರಿಂದ ಮಾಹಿತಿ ಕಲೆ ಹಾಕಿದ್ದಾರೆ.

ಈ ಮೊದಲು ಕ್ಷೇತ್ರದ ಅಭಿವೃದ್ದಿ ಬಗ್ಗೆ ಒಂದೆರಡು ಬಾರಿ ವರುಣಾದಲ್ಲಿ ಸಭೆ ನಡೆಸಿದ್ದರು. ಆ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತರೊಬ್ಬರ ಮೇಲೆ ಜೋರು ದನಿಯಲ್ಲಿ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಹಾಗಾಗಿ ಅತ್ಯಂತ ಎಚ್ಚರಿಕೆಯಿಂದ ಸಭೆ ನಡೆಸುತ್ತಿರುವ ಸಿದ್ದರಾಮಯ್ಯನವರು ಮುಖಂಡರು, ಕಾರ್ಯಕರ್ತರ ಜೊತೆ ಆತ್ಮೀಯವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Facebook Comments

Sri Raghav

Admin