ಬಿಜೆಪಿಯವರ ಅಪಪ್ರಚಾರಕ್ಕೆ ಪ್ರತ್ಯುತ್ತರ ನೀಡದಿರುವುದೇ ನಮ್ಮ ಸೋಲಿಗೆ ಕಾರಣ : ಸಿದ್ದರಾಮಯ್ಯ
ಬೆಂಗಳೂರು, ಜು.11-ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಡೆಸಿದ ಅಪಪ್ರಚಾರಕ್ಕೆ ಕಾಂಗ್ರೆಸ್ನಿಂದ ತಕ್ಕ ಪ್ರತ್ಯುತ್ತರ ನೀಡಲು ಸಾಧ್ಯವಾಗದೆ ಇರುವುದೇ ನಮ್ಮ ಸೋಲಿಗೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ಲೇಷಿಸಿದರು. ನಗರದ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಐದು ವರ್ಷ ನಮ್ಮ ಸರ್ಕಾರ ಒಳ್ಳೆಯ ಆಡಳಿತ ನೀಡಿತ್ತು. ಜನ ಮತ್ತೆ ನಮ್ಮನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಬಿಜೆಪಿಯ ಅಪಪ್ರಚಾರದಿಂದ ಅದು ಸಾಧ್ಯವಾಗಲಿಲ್ಲ. ಬಿಜೆಪಿಯವರು 30 ಜನ ಮತದಾರರಿಗೆ ಒಬ್ಬ ಕಾರ್ಯಕರ್ತನನ್ನು ನೇಮಿಸಿ ಕಾಂಗ್ರೆಸ್ ವಿರುದ್ಧ ಹಾಗೂ ಹಿಂದುತ್ವದ ಕುರಿತು ಮನೆಮನೆಗೆ ಹೋಗಿ ಸುಳ್ಳು ಪ್ರಚಾರಗಳನ್ನು ಮಾಡಿದರು. ಈ ಅಪಪ್ರಚಾರಕ್ಕೆ ಪ್ರತಿಯಾಗಿ ಸತ್ಯ ಹೇಳಿ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಇದಕ್ಕೆ ನಾಣು ಯಾರನ್ನು ಹೊಣೆ ಮಾಡುವುದಿಲ್ಲ. ನಮ್ಮ ಸೋಲಿಗೆ ಬಿಜೆಪಿಯವರ ಅಪಪ್ರಚಾಋವೇ ಪ್ರಮುಖ ಕಾರಣ ಎಂದು ಹೇಳಿದರು.
ಆದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಈ ನಡವಳಿಕೆಗೆ ಅವಕಾಶ ನೀಡಬಾರದು. ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕು. ಐದು ವರ್ಷ ಕಾಂಗ್ರೆಸ್ ಆಡಳಿತವನ್ನು ಜನ ಮತ್ತೆ ನೆನೆಪಿಸಿಕೊಳ್ಳುತ್ತಾರೆ. ನಮಗೆ ಅವಕಾಶ ಕೊಟ್ಟೇ ಕೊಡುತ್ತಾರೆ. 28 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ 20 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಬೇಕು. ಅದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನೂತನ ಅಧ್ಛ್ಯಕ್ಷರಾದ ದಿನೇಶ್ಗುಂಡೂರಾವ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರಿಗೆ ಎಲ್ಲಾ ರೀತಿಯ ಸಹಕಾರ, ಬೆಂಬಲ ನೀಡಬೇಕು ಎಂದು ಹೇಳಿದರು.
ರಾಹುಲ್ಗಾಂಧಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಿದ್ದ ನನ್ನ ಮೇಲೆ ಭಾರೀ ವಿಶ್ವಾಸವಿಟ್ಟಿದ್ದರು, ಚುನಾವಣೆ ಜವಾಬ್ದಾರಿ ನೀಡಿದ್ದರು. ಆದರೆ ನಾವು ನಿರೀಕ್ಷೆಯಷ್ಟು ಸ್ಥಾನಗಳನ್ನು ಗೆಲಲ್ಲಿಲ್ಲ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರಲಿಲ್ಲ. ಅನಿವಾರ್ಯವಾಗಿ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ನಡೆಸುತ್ತಿದ್ದೇವೆ ಎಂದು ಹೇಳಿದರು.
ಜಾತ್ಯತೀತ ಶಕ್ತಿಗಳ ಹೊಂದಾಣಿಕೆ:
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಲಿವೆ. ಬಿಜೆಪಿಯವರ ಸುಳ್ಳು ಪ್ರಚಾರಗಳು ಯಶಸ್ವಿಯಾಗುವುದಿಲ್ಲ. ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲಲ್ಲಿದೆ. ರಾಹುಲ್ಗಾಂಧಿ ಪ್ರಧಾನಿಯಾಗುವ ದಟ್ಟ ಮುನ್ಸೂಚನೆ ಇದೆ. ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ. ಚುನಾವಣೆ ವೇಳೆ ಕೊಟ್ಟ ಯಾವ ಭರವಸೆ ಈಡೇರಿಸದ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ಜನರನ್ನು ವಿಭಜಿಸುವ ಮತ್ತು ದಾರಿ ತಪ್ಪಿಸುವ ಸಂಘ ಪರಿವಾರ ಮತ್ತು ಬಿಜೆಪಿಯ ಪ್ರಯತ್ನ ವಿಫಳಗೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಪೆಟ್ರೋಲ್-ಡೀಸಲ್ ತೆರಿಗೆ ಇಳಿಸಬೇಕು:
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಬಜೆಟ್ನಲ್ಲಿ ಪೆಟ್ರೋಲ್-ಡೀಸಲ್ ಮೇಲೆ ಶೇ.2ರಷ್ಟು ಮಾರಾಟ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಇದು ಹೊರೆಯಾಗಲಿದೆ. ಹಾಗಾಗಿ ಶೇ.2ರಷ್ಟು ತೆರಿಗೆ ಹಚ್ಚಳ ಹಿಂಪಡೆದು ಈ ಮೊದಲಿನಂತೆ ಶೇ.32ರಲ್ಲೇ ಮುಂದುವರೆಸುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ. ಕೇಂದ್ರ ಸರ್ಕಾರ ಕಚ್ಚಾ ತೈಲದ ಬೆಲೆ ಕಡಿಮೆಯಿದ್ದರೂ, 9 ಬಾರಿ ಇಂಧನ ಬೆಲೆ ಏರಿಕೆ ಮಾಡಿದೆ. ಇದು ಜನರಿಗೆ ಹೊರೆಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಅನ್ನಭಾಗ್ಯ ಯೋಜನೆಯಡಿ ನಮ್ಮ ಸರ್ಕಾರ ನೀಡುತ್ತಿದ್ದ 7 ಕೆಜಿ ಅಕ್ಕಿ ಪೈಕಿ 2 ಕೆಜಿ ಕಡಿತ ಮಾಡಿರುವುದನ್ನು ಸಿದ್ದರಾಮಯ್ಯ ವಿರೋಧಿಸಿದರು.