ದೋಸ್ತಿ ಸರ್ಕಾರ ಉರುಳಿಸಲು ಮುಂದಾಗಿರುವ ಬಿಜೆಪಿಗೆ ಸಿದ್ದು ಮಾಸ್ಟರ್ ಸ್ಟ್ರೋಕ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 25-ಆಪರೇಷನ್ ಕಮಲದ ಮೂಲದ ದೋಸ್ತಿ ಸರ್ಕಾರವನ್ನು ಉರುಳಿಸಿ ಸರ್ಕಾರ ರಚಿಸಲು ಮುಂದಾಗಿರುವ ಬಿಜೆಪಿ ತಂತ್ರಕ್ಕೆ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿ ತಂತ್ರ ರೂಪಿಸಿದ್ದಾರೆ.

ಇಂದು ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಅವರು ತಮ್ಮ ಜತೆಗೆ ರಾಣೆಬೆನ್ನೂರು ಶಾಸಕ ಆರ್.ಶಂಕರ್ ಅವರನ್ನು ಕರೆದೊಯ್ದಿದ್ದಾರೆ. ದೋಸ್ತಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಆರ್.ಶಂಕರ್ ಅವರನ್ನು ಸಂಪುಟದಿಂದ ಕೈ ಬಿಟ್ಟಾಗ ಅವರು ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಲು ತೀರ್ಮಾನಿಸಿದ್ದರು.

ಆದರೆ ದೇಶದಲ್ಲಿ ಲೋಕಸಭಾ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿದ್ದರು. ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು , ರಾಜ್ಯದಲ್ಲಿ ಬಿಜೆಪಿ 25 ಸ್ಥಾನದಲ್ಲಿ ಗೆದ್ದು ಬೀಗಿರುವ ಹುಮ್ಮಸ್ಸಿನಲ್ಲಿರುವ ಮುಖಂಡರು ಅದೇ ಹುಮ್ಮಸ್ಸಿನಲ್ಲಿ ಆಪರೇಷನ್ ಕಮಲ ನಡೆಸಿ ದೋಸ್ತಿ ಸರ್ಕಾರವನ್ನು ಕೆಡವಲು ತಂತ್ರ ರೂಪಿಸಿದ್ದಾರೆ.

ಆದರೆ ಬಿಜೆಪಿ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಿರುವ ಕಾಂಗ್ರೆಸ್ ಮುಖಂಡರು ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಳ್ಳುವತ್ತ ಗಮನ ಹರಿಸಿದ್ದಾರೆ.  ಹೀಗಾಗಿ ಆಪರೇಷನ್ ಕಮಲಕ್ಕೆ ತುತ್ತಾಗುವ ಸಾಧ್ಯತೆ ಇದೆ ಎನ್ನಲಾಗಿರುವ ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ದೆಹಲಿಗೆ ಕರೆದೊಯ್ದು ಹೈಕಮಾಂಡ್ ಮುಂದೆ ಹಾಜರುಪಡಿಸಿದ್ದಾರೆ.

ಮಾತ್ರವಲ್ಲ ಯಾವುದೇ ಕಾರಣಕ್ಕೆ ನನ್ನ ಬಿಟ್ಟು ಬೇರೆ ಕಡೆ ತೆರಳದಂತೆ ಶಂಕರ್ ಅವರಿಗೆ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರ ಜತೆಗೆ ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳಲು ತಾವು ಕೈಗೊಂಡಿರುವ ಕಾರ್ಯತಂತ್ರದ ಬಗ್ಗೆಯೂ ಹೈಕಮಾಂಡ್‍ಗೆ ಸಿದ್ದರಾಮಯ್ಯ ವಿವರಿಸಿದ್ದಾರೆ.

ದೆಹಲಿ ಪ್ರವಾಸದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿರುವ ದೋಸ್ತಿ ಸರ್ಕಾರಕ್ಕೆ ಯಾವುದೇ ಕಂಟಕ ಎದುರಾಗುವುದಿಲ್ಲ ಎಂದು ಭರವಸೆ ನೀಡಿದರು.

ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಕೇವಲ ಒಂದು ಸ್ಥಾನ ಪಡೆದುಕೊಂಡಿದೆ. ಜನಾದೇಶವನ್ನು ನಾವು ಸ್ವಾಗತಿಸುತ್ತೇವೆ. ಹಾಗಂತ ದೋಸ್ತಿ ಸರ್ಕಾರವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳುವುದಿಲ್ಲ ಎಂದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವುದಿಲ್ಲ. ಅವರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಮುಖ್ಯಮಂತ್ರಿ ಅವಧಿ ಪೂರ್ಣಗೊಳಿಸಲು ಕಾಂಗ್ರೆಸ್ ಮುಖಂಡರು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin