ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯ ಆಯ್ಕೆ, ಅಧಿಕೃತವಾಗಿ ಘೋಷಣೆ ಮಾಡಿದ ಹೈಕಮಾಂಡ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ; ವಿರೋಧ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಿದೆ. ಇದರ ಜೊತೆಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಎಸ್.ಆರ್.ಪಾಟೀಲ್ ಅವರನ್ನು ನೇಮಕ ಮಾಡಲಾಯಿತು.

ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕೆ ಸಿ ವೇಣುಗೋಪಾಲ್ ಘೋಷಣೆಯನ್ನು ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ವಿಪಕ್ಷ ನಾಯಕನ ಆಯ್ಕೆ ಹಿನ್ನೆಲೆ ಅಭಿಪ್ರಾಯ ಸಂಗ್ರಹಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಮಿಸ್ತ್ರಿ ಆಗಮಿಸಿದ್ದ ವೇಳೆ, ಅವರು ವೈಯಕ್ತಿಕವಾಗಿ ರಾಜ್ಯ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದರು.

ಈ ವೇಳೆಯೂ ಸಿದ್ದರಾಮಯ್ಯ ಅವರ ಹೆಸರನ್ನೇ ಬಹುತೇಕರು ಸೂಚಿಸಿದ್ದರು. ಇದರೊಂದಿಗೆ ಎಚ್.ಕೆ.ಪಾಟೀಲ್ ಅವರ ಹೆಸರು ಕೂಡ ವಿಪಕ್ಷ ಮಾಯಕನ ಸ್ಥಾನಕ್ಕೆ ಕೇಳಿಬಂದಿತ್ತು. ಕೆಲ ಮೂಲ ಕಾಂಗ್ರೆಸ್ಸಿಗರಿಂದಲೂ ಸಿದ್ದರಾಮಯ್ಯ ಅವರಿಗೆ ವಿರೋಧ ವ್ಯಕ್ತವಾಗಿತ್ತು.

ಆದರೆ, ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕನ ಸ್ಥಾನ ಘೋಷಿಸಿದೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕನಾಗಿ ಹಾಗೂ ಸಿ.ಎಲ್.ಪಿ ನಾಯಕರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಮೈತ್ರಿ ಸರ್ಕಾರ ಬೀಳಿಸಲು ರಾಜೀನಾಮೆ ಕೊಟ್ಟ 17 ಶಾಸಕರ ಕ್ಷೇತಗಳಲ್ಲಿ ಎದುರಾಗಳಿರುವ ಉಪ ಚುನಾವಣೆ ಸಂಪೂರ್ಣ ಜವಾಬ್ದಾರಿಯನ್ನು ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ನೀಡಿದೆ. ಅದರೊಂದಿಗೆ ಪಕ್ಷದಲ್ಲಿ ತಮ್ಮ ನಿಯಂತ್ರಣ ಉಳಿಸಿಕೊಳ್ಳಬೇಕಾದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಕ್ಷೇತ್ರಗಳ ಗೆಲುವು ಅನಿವಾರ್ಯವಾಗಿದೆ.

# ಸಿದ್ದರಾಮಯ್ಯ ಪ್ರತಿಕ್ರಿಯೆ :
ವಿರೋಧ ಪಕ್ಷದ ನಾಯಕರಾಗಿ ಆಯ್ಕೆಗೊಂಡ ಸಿದ್ದರಾಮಯ್ಯ ಮಾಧ್ಯಮದೊಂದಿಗೆ ಮಾತನಾಡುತ್ತಾ, ವಿಪಕ್ಷ ನಾಯಕ ಕೊಟ್ಟ ಹೈಕಮಾಂಡ್ ಗೆ ಧನ್ಯವಾದ ತಿಳಿಸುತ್ತೇನೆ.. ಸೋನಿಯಾ ಗಾಂಧಿಯವರು ನನ್ನ ಮೇಲೆ ವಿಶ್ವಾಸ ಇಟ್ಟು ಈ ಸ್ಥಾನ ಕೊಟ್ಟಿದ್ದಾರೆ, ಅವರ ನಂಬಿಕೆಗೆ ಚ್ಯುತಿ ಬಾರದ ರೀತಿ ನಡೆದುಕೊಳ್ಳುತ್ತೇನೆ , ಕೋಮುವಾದಿ ಪಕ್ಷದ ವಿರುದ್ಧ ಕಾಂಗ್ರೆಸ್ ಬಲ ಪಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಕಾಂಗ್ರೇಸ್ ಹೈಕಮಾಂಡ್ ನನ್ನನ್ನು ವಿಪಕ್ಷ ನಾಯಕ ಮಾಡಿದ್ರು , ಸಿಎಂ ಮಾಡಿದ್ರು ಈಗ ಮತ್ತೆ ವಿಪಕ್ಷ ನಾಯಕ ಮಾಡಿದ್ದಾರೆ. 2013 ರ ರೀತಿಯಲ್ಲಿ ಪಕ್ಷ ಕಟ್ಟಿ ಮತ್ತೆ ಅಧಿಕಾರಕ್ಕೆ ತರುವ ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದರು.

Facebook Comments

Sri Raghav

Admin