ಹಳ್ಳಿಗಳಲ್ಲಿ ಕೊರೋನಾ 2ನೇ ಅಲೆ ಹರಡಲು ಸರ್ಕಾರದ ವೈಫಲ್ಯವೇ ಕಾರಣ : ಸಿದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 21- ಕೊರೋನಾ 2ನೇ ಅಲೆ ಬಹಳ ವೇಗವಾಗಿ ಹರಡುತ್ತಿದೆ. ಮೊದಲನೆ ಅಲೆ ನಗರ ಪ್ರದೇಶದಲ್ಲಿ ಇತ್ತು. ಎರಡನೇ ಅಲೆ ಗ್ರಾಮೀಣ ಪ್ರದೇಶಕ್ಕೂ ಹಬ್ಬಿದೆ. ಸರ್ಕಾರದ ವೈಪಲ್ಯವೇ ಇದಕ್ಕೆ ಕಾರಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ರಾಜೀವ್ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಲೂ ಸರ್ಕಾರ ಎಚ್ಚೆತ್ತುಕೊಂಡು ಪರೀಕ್ಷೆಗಳನ್ನು ಸರಿಯಾಗಿ ಮಾಡುತ್ತಿಲ್ಲ, ವೈದ್ಯಕೀಯ ವ್ಯವಸ್ಥೆ ಸರಿ ಮಾಡಿಲ್ಲ. ಸುಳ್ಳು ಹೇಳುವುದೇ ಸರ್ಕಾರದ ಕೆಲಸವಾಗಿದೆ. ಸತ್ತವರ ಅಂಕಿ ಅಂಶಗಳನ್ನು ಮುಚ್ಚಿಡುತ್ತಿದ್ದಾರೆ. ಪರೀಕ್ಷೆ ಕಡಿಮೆ ಮಾಡಿ ಸೋಂಕು ಕಡಿಮೆಯಾಗುತ್ತಿದೆ ಎನ್ನುತ್ತಿದ್ದಾರೆ. ಇದು ಜನದ್ರೋಹಿ ಸರ್ಕಾರ ಎಂದು ಕಿಡಿಕಾರಿದರು.

ನಾವು ಚಾಮರಾಜನಗರಕ್ಕೆ ಹೊಗಿದ್ದೆವು, ಅಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಸತ್ತಿದ್ದಾರೆ, ಸರ್ಕಾರ ಮಾತ್ರ ಸತ್ತವರು ಮೂವರು ಎನ್ನುತ್ತಿದೆ. ನಾವು ಹೋಗದೆ ಇದ್ರೆ ಅದೇ ಸತ್ಯ ಅಂತ ವಾದಿಸುತ್ತಿದ್ದರು. ಜಿಲ್ಲಾಡಳಿತ ಕೂಡ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ ಎಂದು ಒಪ್ಪಿಕೊಂಡಿದೆ. ಇದಕ್ಕೆ ಯಾರು ಹೊಣೆ, ದುಷ್ಟ ಸರ್ಕಾರ ಇದು ಎಂದು ಕಿಡಿಕಾರಿದರು.

ಅಧಿಕಾರಿಗಳ ಜೊತೆ ಸಭೆ ನಡೆಸಿ ನಾನು ಮಾಹಿತಿ ಪಡೆಯಲು ಮುಂದಾದರೆ ಅದಕ್ಕೂ ಅಡ್ಡಿ ಪಡಿಸುತ್ತಿದ್ದಾರೆ. ಸತ್ಯ ಮುಚ್ಚಿಹಾಕಲು ಹೀಗೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸತ್ಯ ಹೇಳಿದ್ರೆ ಎಂಬ ಭಯ ಇವರಿಗೆ. ಸಾಮಾಜಿಕ ಜಾಲತಾಣದಲ್ಲಿ ನ ಉಗಿಯುತ್ತಿದ್ದಾರೆ. ಮಹಿಳೆಯರೂ ಅವ್ಯಾಚ್ಚ ಶಬ್ಧಗಳಿಂದ ನಿಂದಿಸ್ತಾರೆ ಎಂದು ಹೇಳಿದರು.

ಯಡಿಯೂರಪ್ಪನಂತ ಹೊಣೆಗೇಡಿ ಸಿಎಂ ಮತ್ತೊಬ್ಬರಿಲ್ಲ. ನಾನು 12 ಪತ್ರ ಬರೆದಿದ್ದೇನೆ. ಒಂದಕ್ಕೂ ಉತ್ತರ ನೀಡಿಲ್ಲ ಎಂದಾಗ ಮದ್ಯೆ ಪ್ರವೇಶ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಅಪ್ಪ ಹೇಗಿದ್ದಾನೋ ಮಗನೂ ಹಾಗೆಯೇ ಇದ್ದಾನೆ. ನಾನು ಬರೆದ ಪತ್ರಕ್ಕೆ ಮೋದಿ ಉತ್ತರ ಕೊಟ್ಟಿಲ್ಲ ಎಂದರು. ಕೇಂದ್ರದಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. ಯತಾ ರಾಜಾ ತಥಾ ಪ್ರಾಜಾ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೊರೊನಾ ಸಂಕಷ್ಟ ಸಮಯದಲ್ಲಿ ಜನರಿಗಾಗಿ ಕೇರಳದಂತ ಸಣ್ಣ ರಾಜ್ಯ 20 ಸಾವಿರ ಕೋಟಿ ಇಟ್ಟಿದೆ. ನಮ್ಮಲ್ಲಿ ಹೆಸರಿಗೆ ಮಾತ್ರ ಪ್ಯಾಕೇಜ್ ಕೊಟ್ಟಿದ್ದಾರೆ, ಅದನ್ನು ಪ್ರಶ್ನೆ ಮಾಡಿದ್ರೆ ಬಂಧನ ಮಾಡ್ತಾರೆ. ಯಾರು ಹೆದರಬೇಡಿ, ಜೈಲಿಗೆ ಹಾಕಿದ್ರು ಪರವಾಗಿಲ್ಲ. ಅದೊಂದು ಆಂದೋಲನ ಮಾಡಿಯೇ ಬಿಡೋಣ. ಕರೋನಾ ಗೆ ಸರಿಯಾದ ವ್ಯವಸ್ಥೆ ಮಾಡುವುದಕ್ಕೆ ಇವರಿಂದ ಆಗಿಲ್ಲ. ಇದರ ಬಗ್ಗೆ ಮಾಹಿತಿ ಪಡೆಯೋಣ ಅಂದ್ರೆ ಅವಕಾಶ ಕೊಡ್ತಿಲ್ಲ. ಇಂತಹ ಪ್ರಜಾಪ್ರಭುತ್ವ ಕೊಲೆಗೇಡಿ ಸರ್ಕಾರ ನೋಡೇ ಇಲ್ಲ ಎಂದು ವಾಗ್ಧಾಳಿ ನಡೆಸಿದರು.

ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಜೀವ್ ಗಾಂಧಿ ಹಂತಕರನ್ನ ಬಿಡುಗಡೆ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ. ಶ್ರದ್ಧಾಂಜಲಿ ಸಂದರ್ಭದಲ್ಲೇ ಪತ್ರ ಬರೆದಿರುವುದು ನೋವಿನ ವಿಚಾರ. ಈ ಬಗ್ಗೆ ನಾನು ತಮಿಳುನಾಡು ಮುಖ್ಯಮಂತ್ರಿ ಹಾಗೂ ವಿಧಾನಸಭಾಧ್ಯಕ್ಷರ ಜೊತೆ ಜೊತೆ ಚರ್ಚೆ ನಡೆಸಿದ್ದೇನೆ. ಅವರು ಅಚಾತುರ್ಯವಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ವತಿಯಿಂದ 120 ಕ್ಷೇತ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆಗೆದಿದ್ದೇವೆ. 107 ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ. ಬೆಂಗಳೂರಿನಲ್ಲಿ 10 ಆ್ಯಂಬುಲೆನ್ಸ್ ಬಿಟ್ಟಿದ್ದೇವೆ. ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್ ನಿಂದ ಕೋವಿಡ್ ಸೋಂಕಿತರಿಗೆ ನೆರವಾಗುವ ಕೆಲಸ ನಡೆಯುತ್ತಿದೆ ಎಂದರು.

ಜನರಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುತ್ತಿದ್ದೇವೆ. ಬಡವರಿಗೆ ಉಚಿತ ಊಟದ ವ್ಯವಸ್ಥೆ ಮಾಡ್ತಿದ್ದೇವೆ. 90 ಶಾಸಕರು ಪ್ರಾದೇಶಾಭಿವೃದ್ಧಿ ನಿದಿ ಕೊಟ್ಟಿದ್ದೇವೆ. ನಾವು 10 ಕೋಟಿ ಸೇರಿಸಿ 100 ಕೋಟಿಯಲ್ಲಿ ಕೋವಿಡ್ ಲಸಿಕೆ ಖರೀದಿಗೆ ಕೊಡ್ತೇವೆ ಎಂದು ಹೇಳಿದರು.

ಕೋವಿಡ್ ಪರಿಸ್ಥಿತಿಯ ಬಗ್ಗೆ ನಿಖರ ಮಾಹಿತಿ ಪಡೆಯಲು ಜೂಂ ಮೂಲಕ ಸಭೆ ನಡೆಸಲು ನಾವು ಅವಕಾಶ ಕೇಳಿದ್ದೆವು. ಆದರೆ ಅವಕಾಶ ಕೊಟ್ಟಿಲ್ಲ. ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಕೊಡ್ತಿದ್ದಾರೆ. ಆದರೆ ಆಧಾರ್ ಕಾರ್ಡ್, ಗುರುತಿನ ಚೀಟಿ ತೋರಿಸಿ ಎನ್ನುತ್ತಿದ್ದಾರೆ. ಇವರು ಕೊಡುವ ಒಂದು ಪ್ಯಾಕೇಟ್ ಊಟವನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವೆ. ಸರ್ಕಾರಕ್ಕೆ ಮಾನವೀಯತೆ ಏನಾದ್ರೂ ಇದೆಯೇ ಎಂದು ಪ್ರಶ್ನಿಸಿದರು.

ರಾಜೀವ್ ಗಾಂಧಿ ದೇಶದ ಪ್ರಧಾನಿಯಾಗಿ ಮತದಾನದ ಅಧಿಕಾರವನ್ನು 21 ರಿಂದ 18 ಕ್ಕೆ ವರ್ಷಕ್ಕೆ ಇಳಿಸಿದ್ದರು, ಆ ವೇಳೆ ಬಿಜೆಪಿಯವರು ವಿರೋಧಿಸಿದ್ದರು. ರಾಜೀವ್ ಗಾಂಧಿ ಕಾಲದಲ್ಲಿ ಟೆಲಿಫೋನ್ ಕ್ರಾಂತಿಯಾಯಿತು. ಇಂದಿನ ಮೊಬೈಲ್ ಕ್ರಾಂತಿಗೆ ಅದು ಮುನ್ನುಡಿಯಾಗಿತ್ತು. ರಾಜೀವ್ ಗಾಂಧಿಯವರು ಅವರು ಕೊಟ್ಟ ಕೊಡುಗೆ ಮರೆಯಲು ಸಾಧ್ಯವಿಲ್ಲ. ಯುವಪೀಳಿಗೆಗೆ ಶಕ್ತಿ ತುಂಬಿದವರು ಅವರು. ರಾಜೀವ್ ನಿಧನರಾಗಿ 30 ವರ್ಷ ಕಳೆದಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ದೃವನಾರಾಯಣ್, ಸಲೀಂ ಅಹ್ಮದ್, ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವರಾದ ದೇಶಪಾಂಡೆ, ಜಮೀರ್ ಅಹಮದ್ ಖಾನ್, ಪ್ರಿಯಾಂಕಖರ್ಗೆ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹಾಜರಿದ್ದರು.

# ಡಿಸಿಗಳಿಂದ ಮಾಹಿತಿ ಸಂಗ್ರಹಿಸಲು ಅಡ್ಡಿ : ಹಕ್ಕುಚ್ಯುತಿ ನಿರ್ಣಯ ಮಂಡಿಸಲು ನಿರ್ಧಾರ
ಕೊರೊನಾದಿಂದ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ ಮತ್ತು ಸೋಂಕಿತರ ಪ್ರಾಣರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ತಡೆಯೊಡ್ಡಿರುವ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯ ಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜೀವ್ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಕೊರೊನಾದಿಂದಾಗಿ ರಾಜ್ಯ ಸೂತಕದ ಮನೆಯಾಗಿದೆ. ಆಕ್ಸಿಜನ್, ಬೆಡ್, ವೆಂಟಿಲೇಟರ್ ಸಿಗದೆ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವೀಡಿಯೋ ಕಾನ್ಫರೆನ್ಸ್ ಮುಲಕ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲು ಉದ್ದೇಶಿಸಿದ್ದೆ.

ಇದು ಜಿಲ್ಲಾಧಿಕಾರಿಗಳ ಸಭೆ ಅಥವಾ ಪ್ರಗತಿ ಪರಿಶೀಲನೆ ಸಭೆ ಅಲ್ಲ. ಮಾಹಿತಿ ಸಂಗ್ರಹಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕ ಎಂದರೆ ಅದು ಸಾಂವಿಧಾನಿಕ ಹುದ್ದೆ. ಹೀಗಾಗಿ ಮಾಹಿತಿ ಸಂಗ್ರಹಿಸಲು ಅನುಮತಿ ನಿರಾಕರಿಸಿರುವುದರಿಂದ ಹಕ್ಕುಚ್ಯುತಿ ಆಗಿದೆ. ವಿಧಾನ ಮಂಡಲದ ಮುಂಬರುವ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಲು ಉದ್ದೇಶಿಸಿದ್ದೇನೆ ಎಂದು ಹೇಳಿದರು.

2009ರಲ್ಲಿಯೂ ಸರ್ಕಾರ ಇದೇ ನಿಲುವು ಅನುಸರಿಸಿತ್ತು. ಸರ್ಕಾರದ ಹುಳುಕು ಹೊರ ಬರುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅನುಮತಿ ನಿರಾಕರಿಸಿದ್ದಾರೆ ಎಂದು ಆರೋಪಿಸಿದರು.

ಕೊರೊನಾ ನಿಯಂತ್ರಣ ಮತ್ತು ಸೋಂಕಿತರ ಪ್ರಾಣ ರಕ್ಷಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರಯಪಯುಕ್ತ ಎಂಬುದು ಸಾಬೀತಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಜನತೆ ಸರ್ಕಾರಕ್ಕೆ ಹಾಗೂ ಸಿಎಂ ಅವರಿಗೆ ಶಾಪ ಹಾಕುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.

ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೊಡಿ ಎಂದು ಈ ವರೆಗೆ 12 ಪತ್ರಗಳನ್ನು ಬರೆದಿದ್ದೇನೆ. ಅದಕ್ಕೂ ಉತ್ತರ ಬಂದಿಲ್ಲ. ಉತ್ತರಿಸುವ ಸೌಜನ್ಯವೂ ಮುಖ್ಯಮಂತ್ರಿಯವರಿಗೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನತೆಗೆ ದ್ರೋಹವೆಸಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರೂ ಪ್ರತಿಪಕ್ಷಗಳ ಯಾವುದೇ ಪತ್ರಕ್ಕೂ ಉತ್ತರ ನೀಡುವುದಿಲ್ಲ. ಅದೇ ನಿಲುವನ್ನೂ ಯಡಿಯೂರಪ್ಪ ಅವರೂ ಅನುಸರಿಸುತ್ತಿದ್ದಾರೆ. ಯಥಾ ರಾಜ ತಥಾ ಪ್ರಜೆ ಎನ್ನುವಂತೆ ಆಗಿದೆ. ಈ ಸರ್ಕಾರದ ವೈಫಲ್ಯದಿಂದ ಸಾವಿರಾರು ಜನ ಸಾಯುತ್ತಿದ್ದಾರೆ. ಸತ್ಯ ಹೇಳಿದರೆ ಕೇಸು ದಾಖಲಿಸುವ, ಬಂಧಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಹೆದರಬಾರದು.

# ಪ್ರವಾಹ ಪರಿಹಾರ/ತಾರತಮ್ಯ
ಪ್ರವಾಹ ಪರಿಹಾರದ ವಿಚಾರದಲ್ಲಿಯೂ ಕೇಂದ್ರ ತಾರತಮ್ಯ ಧೊರಣೆ ಅನುಸರಿಸುತ್ತಿದೆ. ಗುಜರಾತ್ ಗೆ ಒಂದು ಸಾವಿರ ಕೋಟಿ ರೂ.ಗಳ ಪರಿಹಾರ ಘೋಷಣೆ ಮಾಡಿರುವ ಪ್ರಧಾನಿಯವರು ಚಂಡಮಾರುತದಿಂದ ತತ್ತರಿಸಿರುವ ಕರ್ನಾಟಕಕ್ಕೆ ನಯಾಪೈಸೆ ಕೊಟ್ಟಿಲ್ಲ. ಚಂಡಮಾರುತದಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಆದರೂ ಪರಿಹಾರ ಕೊಟ್ಟಿಲ್ಲ.

# ಲಸಿಕೆ : ವಿರೋಧ ಮಾಡಿರಲಿಲ್ಲ :
ಕೋವಿಡ್ ಲಸಿಕೆ ನೀಡುವುದಕ್ಕೆ ನಾವು ವಿರೋಧ ಮಾಡಿರಲಿಲ್ಲ. ಎಲ್ಲರಿಗೂ ಲಸಿಕೆ ಸಿಗಗಬೇಕು. ಅದಕ್ಕಾಗಿ ಅಭಿಯಾನ ನಡೆಸಬೇಕು ಎಂದು ಈಗಲೂ ಒತ್ತಾಯ ಮಾಡುತ್ತೇವೆ. ಲಸಿಕೆಯೇ ಇಲ್ಲದೆ ಆಂದೋಲನಕ್ಕೆ ಚಾಲನೆ ನೀಡಿದವರು ಯಾರು ? ಎಂದು ಪ್ರಶ್ನಿಸಿದರು.

# ಜನಪರ. ಶ್ರೇಷ್ಠ ರಾಜಕಾರಣಿ ರಾಜೀವ್
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಈ ದೇಶ ಕಂಡ ಜನಪರ ಹಾಗೂ ಶ್ರೇಷ್ಠ ರಾಜಕಾರಣಿ ಎಂದು ಸಿದ್ದರಾಮಯ್ಯ ಅವರು ಬಣ್ಣಿಸಿದರು. ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಿಸಿದವರು ರಾಜೀವ್ ಗಾಂಧಿ. ಅವರಿಂದಾಗಿಯೇ ಇಂದು ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ಸೌಲಭ್ಯ ಸಿಕ್ಕಿದೆ ಎಂದು ಹೇಳಿದರು. ಮಹಿಳಾ ಮೀಸಲು ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಲೋಕಸಭೆಯಲ್ಲಿಯೂ ಅಂಗೀಕಾರಕ್ಕೆ ಬಿಜೆಪಿ ಮುಂದಾಗಬೇಕು ಎಂದು ಒತ್ತಾಯಿಸಿದರು.

ದೂರವಾಣಿ ಮೂಲಕ ಇಂದು ಜಗತ್ತಿನ ಯಾವುದೇ ಮೂಲೆಯನ್ನು ಸಂಪರ್ಕಿಸಬಹುದು. ಇದಕ್ಕೆ ದೂರಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿ ಕಾರಣ. ರಾಜೀವ್‍ಗಾಂಧಿಯವರ ಪ್ರಯತ್ನದ ಫಲವಾಗಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಮಹಾನ್ ಸಾಧನೆ ಮಾಡಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

Facebook Comments

Sri Raghav

Admin