ಅಧಿಕಾರದಲ್ಲಿರಲು ಇವರಿಗೆ ನೈತಿಕತೆ ಇಲ್ಲ : ಸಿದ್ದರಾಮಯ್ಯ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.11- ಪೆಟ್ರೋಲ್, ಡೀಸೆಲ್ ಮೇಲೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಅಬಕಾರಿ, ರಾಜ್ಯ ಸರ್ಕಾರ ವಿಧಿಸುತ್ತಿರುವ ಮಾರಾಟ ತೆರಿಗೆಗಳನ್ನು ಶೇ.50ರಷ್ಟು ಕಡಿಮೆ ಮಾಡಬೇಕು ಎಂದು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ನಾಟ್ಔಟ್ 100, ಐದು ದಿನಗಳ ಪ್ರತಿಭಟನೆಯ ಆರಂಭದ ದಿನವಾದ ಇಂದು ಬೆಂಗಳೂರಿನ ಶಿವಾನಂದ ಸರ್ಕಲ್ ನ ರೆಡ್ಡಿ ಪೆಟ್ರೋಲ್ ಬಂಕ್ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದರ ಏರಿಕೆ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ವಿನೂತನ ಪ್ರತಿಭಟನೆಯನ್ನು ನಡೆಸುತ್ತಿದೆ.

ಎಐಸಿಸಿ ಆದೇಶದ ಮೇರೆಗೆ ಐದು ದಿನಗಳ ಕಾಲ ಜಿಲ್ಲೆಯಿಂದ ಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ. ರಾಜ್ಯದಲ್ಲಿರುವ ಐದು ಸಾವಿರ ಪೆಟ್ರೋಲ್ ಬಂಕ್ ಗಳ ಮುಂದೆ ಪ್ರತಿಭಟನೆ ಮಾಡಿ, ಜನರ ಗಮನ ಸೆಳೆಯುತ್ತೇವೆ ಎಂದರು.

ಮನಮೋಹನ್ ಸಿಂಗ್ ಸರ್ಕಾರ ಒಂದು ರೂಪಾಯಿ ಬೆಲೆ ಹೆಚ್ಚಳ ಮಾಡಿದರೂ ಬಿಜೆಪಿಯವರು ಹಾಹಾಕಾರ ಮಾಡುತ್ತಿದ್ದರು. ನರೇಂದ್ರ ಮೋದಿ ಅವರು ಖುದ್ದು ವಿರೋಧ ಮಾಡಿದರು. 2014ರ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಅಚ್ಚೆದಿನ್ ಆಯೇಂಗೆ ಎಂದಿದ್ದರೂ, ಇಂದು ನರಕ ದಿನಗಳು ಬಂದಿವೆ.

ನಾವು ನರಕ ನೋಡಿರಲಿಲ್ಲ. ಬಿಜೆಪಿ ಸರ್ಕಾರ ನರಕ ತೋರಿಸುತ್ತಿದೆ. ಒಂದು ಕಡೆ ಕೊರೊನಾ ಕಾಟ, ಲಾಕ್ ಡೌನ್ ಬೇರೆ ಜೀವನ ಹಾಳು ಮಾಡಿದೆ. ಸರ್ಕಾರಗಳು ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಹೆಚ್ಚಳ ಮಾಡಿವೆ. ಜನ ಜೀವನ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ಡಿ ದರ್ಜೆ ನೌಕರರು, ಹಳ್ಳಿಗರು, ಸಣ್ಣ ವ್ಯಾಪಾರಿಗಳು ಎಲ್ಲರೂ ಒಂದು ಗಾಡಿ ಇಟ್ಟುಕೊಂಡಿರುತ್ತಾರೆ. ರೈತರು ಟ್ರ್ಯಾಕ್ಟರ್ ಇಟ್ಟುಕೊಂಡಿರುತ್ತಾರೆ. ತೈಲ ಬೆಲೆ ಹೆಚ್ಚಳದಿಂದ ದಿನ ನಿತ್ಯದ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಸಾಮಾನ್ಯ ಜನ ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.

ಕೊರೊನಾ ನಿಯಂತ್ರಿಸಲಾಗದೆ ಲಾಕ್ ಡೌನ್ ಮಾಡಿದ್ದಾರೆ. ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ. ಜನರಿಗೆ ದಿನ ನಿತ್ಯ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಅಧಿಕಾರದಲ್ಲಿರಲು ಇವರಿಗೆ ನೈತಿಕತೆ ಇಲ್ಲ.

ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕಚ್ಚಾ ತೈಲದ ಬೆಲೆ 120 ದಿಂದ 150 ಡಾಲರ್ ಇತ್ತು, ಆಗ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇತ್ತು. ಕೇಂದ್ರ ಸರ್ಕಾರ ಡೀಸೆಲ್ ಮೇಲೆ 3.45 ರೂ. ಪೆಟ್ರೋಲ್ ಮೇಲೆ 9.21 ರೂ. ಅಬಕಾರಿ ತೆರಿಗೆ ವಸೂಲಿ ಮಾಡುತ್ತಿತ್ತು. ಈಗ ಡೀಸೆಲ್ ಮೇಲೆ 31.84 ರೂ. ಪೆಟ್ರೋಲ್ ಮೇಲೆ 31.98 ರೂ. ವಸೂಲಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಶೇ. 24 ಮತ್ತು 31ರಷ್ಟು ಸೆಲ್ಸ್ ಟ್ಯಾಕ್ಸ್ ವಿಧಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50 ರಿಂದ 60 ರೂಪಾಯಿ ತೆರಿಗೆ ವಸೂಲಿ ಮಾಡುತ್ತಿವೆ. ಇಂಧನದ ಮೂಲ ಬೆಲೆ 35 ರೂಪಾಯಿ ಮಾತ್ರ ಎಂದರು.

ಮೋದಿ ಸರ್ಕಾರ ಜನರ ರಕ್ತ ಹೀರುತ್ತಿದೆ. ಕರ್ನಾಟಕ ಒಂದರಿಂದಲೇ 1.18 ಲಕ್ಷ ಕೋಟಿ ಕೇಂದ್ರಕ್ಕೆ ಎಕ್ಸೈಸ್ ಡ್ಯೂಟಿ ವಸೂಲಿಯಾಗಿದೆ. 14 ಸಾವಿರ ಕೋಟಿ ಸೆಲ್ಸ್ ಟ್ಯಾಕ್ಸ್ ಸಂಗ್ರಹವಾಗಿದೆ. ಇಷ್ಟನ್ನು ವಸೂಲಿ ಮಾಡಿ ತಿಗಣೆ ರೀತಿ ಜನರ ರಕ್ತ ಕುಡಿಯುತ್ತಿದ್ದಾರೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದೆ ಎಂದು ಹೇಳುತ್ತಿದ್ದಾರೆ. 150 ಡಾಲರ್ ಇದ್ದ ಬೆಲೆ ಈಗ 70 ಡಾಲರ್ ಕಡಿಮೆ ಆಗಿದೆ. ಹಿಂದೆ 30 ಡಾಲರ್ ಕುಸಿದಿತ್ತು. ಆಗ ಯಾಕೆ ಬೆಲೆ ಕಡಿಮೆ ಮಾಡಲಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತದ ಲಾಭವನ್ನು ಜನರಿಗೆ ವರ್ಗಾವಣೆ ಮಾಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ತೆರಿಗೆಯ ಪಾಲನ್ನು ಶೇ.50 ಮತ್ತು ಶೇ.25ರಷ್ಟು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಗ್ಯಾಸ್ ಬೆಲೆ 419 ರೂ ಇತ್ತು, ಈಗ 900 ದಾಟಿದೆ. ಮನಮೋಹನ್ ಸಿಂಗ್ ಸರ್ಕಾರ ಗ್ಯಾಸ್ ಗೆ ಸಬ್ಸಿಡಿ ನೀಡುತ್ತಿತ್ತು, ಈಗ ಸಬ್ಸಿಡಿ ನಿಲ್ಲಿಸಿದ್ದಾರೆ. ಇದೇನಾ ಅಚ್ಚೆ ದಿನ್. ಯುವಕರು ಮೋದಿ ಮೋದಿ ಎನ್ನುತ್ತಿದ್ದರು, ಭಾವನಾತ್ಮಕ ಪರಿಸ್ಥಿತಿ ಮುಂದಿಟ್ಟುಕೊಂಡು ಜನರನ್ನು ಮರಳು ಮಾಡುತ್ತಿದ್ದಾರೆ. ಜಿಡಿಪಿ -7.7ರಷ್ಟು ಕುಸಿದು ಪಾತಾಳಕ್ಕೆ ಸೇರಿದೆ ಎಂದು ಕಿಡಿಕಾರಿದರು.

ಮೋದಿ ಭರವಸೆ ನೀಡಿದ್ದಂತೆ ಉದ್ಯೋಗಗಳು ಸೃಷ್ಟಿಸಲಿಲ್ಲ, ಇರುವ ಉದ್ಯೋಗಗಳೇ ನಷ್ಟವಾಗಿದೆವೆ. ಕೆಟ್ಟ ಮುಖ್ಯಮಂತ್ರಿ, ಕೆಟ್ಟ ಪ್ರಧಾನ ಮಂತ್ರಿಯನ್ನು ದೇಶ ಮತ್ತು ರಾಜ್ಯ ಕಂಡಿರಲಿಲ್ಲ ಎಂದರು.

ಜನ ಎಚ್ಚೆತ್ತುಕೊಳ್ಳಬೇಕು, ತೆರಿಗೆ ಇಳಿಸಲು ಸರ್ಕಾರಗಳ ಮೇಲೆ ಒತ್ತಡ ಹೇರಬೇಕು. ತೆರಿಗೆ ಇಳಿಕೆಯಾದರೆ ಲೀಟರ್ ಗೆ 60 ರೂ.ಗೆ ಮಾರಾಟ ಮಾಡಬಹುದು. ಪಾಕಿಸ್ತಾನಲ್ಲಿ 50 ರೂ.ಗೆ ಸಿಕ್ಕಿದೆ. ರಾವಣದ ರಾಜ್ಯ ಶ್ರೀಲಂಕಾದಲ್ಲಿ 60 ರೂ.ಗೆ ಪೆಟ್ರೋಲ್ ಸಿಗುತ್ತಿದೆ. ರಾಮನ ದೇಶ ಭಾರತದಲ್ಲಿ 100 ರೂ.ಗೆ ಮಾರಾಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

Facebook Comments

Sri Raghav

Admin