“ಗಾಂಧೀಜಿಯವರ ಸತ್ಯ-ಅಹಿಂಸೆಗಿಂತ ಬಿಜೆಪಿಯವರಿಗೆ ಸುಳ್ಳು-ಹಿಂಸೆಯೇ ಇಷ್ಟ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.2- ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರೆದರೆ ದೇಶ ಅವನತಿಯತ್ತ ಸಾಗುತ್ತದೆ, ಜನ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತ ಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ರಾಷ್ಟ್ರಪಿತ ಮಹಾತ್ಮಗಾಂಧಿಜೀ ಹಾಗೂ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹುದೂರ್ ಶಾಸಿ ಅವರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಗಾಂಧೀಜಿ ವಿರುದ್ಧ ಹಗುರವಾಗಿ ಮಾತನಾಡಲಾರಂಭಿಸಿದ್ದಾರೆ.

ಸತ್ಯ, ಅಹಿಂಸೆ ಗಾಂಧೀಜಿ ಅವರ ಅಸ್ತ್ರಗಳು. ಬಿಜೆಪಿಯವರಿಗೆ ಸುಳ್ಳು ಮತ್ತು ಹಿಂಸೆಯೇ ಇಷ್ಟ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸತ್ಯ ಹೇಳಿ ಗೋತ್ತಿಲ್ಲ. ಅವರು ಹೇಳಿದ್ದನ್ನೇಲ್ಲಾ ಉಲ್ಟಾ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಉಳಿಸುತ್ತೇವೆ ಎಂದರೆ ಹಾಳು ಮಾಡುತ್ತೇವೆ ಎಂದು… ರೈತರನ್ನು ರಕ್ಷಿಸುತ್ತೇವೆ ಎಂದರೆ ನಾಶ ಮಾಡುತ್ತೇವೆ ಎಂದು ಅರ್ಥೈಸಿಕೊಳ್ಳಬೇಕು.

ನಾನು ದೇಶದ ಕಾವಲುಗಾರ ಎಂದಿದ್ದರು, ಈಗ ಅವರ ಸ್ನೇಹಿತರಾದ ಅದಾನಿ ಅವರ ಆಸ್ತಿ ನಾಲ್ಕು ಪಟ್ಟು ಹೆಚ್ಚಾಗಿದೆ. ಅದಕ್ಕೆ ಮೋದಿ ಅವರೇ ಕಾರಣ. ಉದ್ಯಮಿಗಳಾದ ಅಂಬಾನಿ, ಅದಾನಿ ಆಸ್ತಿ ಹನ್ನೆರಡು ಲಕ್ಷ ಕೋಟಿಗೆ ಹೆಚ್ಚಾಗಿದೆ. ಪೆಟ್ರೋಲ್, ಡಿಸೇಲ್ ಮೇಲೆ ತೆರಿಗೆ ಹೆಚ್ಚು ಮಾಡಿ ಜನರ ರಕ್ತ ಹೀರುವ ಬದಲು ಅಂಬಾನಿ, ಅದಾನಿ ಅವರಂತ ಶ್ರೀಮಂತರ ಆಸ್ತಿಯ ಮೇಲೆ ಶೇ.5ರಷ್ಟು ತೆರಿಗೆ ಹಾಕಿದರೂ ಜನಸಾಮಾನ್ಯರಿಂದ ತೆರಿಗೆ ವಸೂಲಿ ಮಾಡುವ ಅಗತ್ಯವೇ ಇಲ್ಲ ಎಂದರು.

ಗಾಂಧಿಜೀ ಕೊಂದ ನಾಥೂರಾಮ್ ಘೋಡ್ಸೆಯನ್ನು ಬಿಜೆಪಿಯವರು ದೇಶ ಭಕ್ತ ಎಂದು ಕರೆಯುತ್ತಾರೆ. ದೇಶದಲ್ಲಿ ಇಂದು ತುರ್ತು ಪರಿಸ್ಥಿತಿ ಘೋಷಣೆ ಇಲ್ಲದೆ ಇರಬಹುದು. ಆದರೆ ಮೋದಿ ವಿರುದ್ಧ ಮಾತನಾಡಿದವರಿಗೆ ದೇಶದ್ರೋಹ ಪಟ್ಟ ಕಟ್ಟಲಾಗುತ್ತಿದೆ.

ಪ್ರಜಾಪ್ರಭುತ್ವ ನಾಶವಾಗುತ್ತಿದೆ. ಸಂವಿಧಾನಕ್ಕೆ ಅಗೌರವ ತೋರಿಸಲಾಗುತ್ತಿದೆ. ಹತ್ತು ತಿಂಗಳಿನಿಂದ ದೆಹಲಿಯಲ್ಲಿ ರೈತರು ನಿರಂತರವಾಗಿ ಹೋರಾಟ ಮಾಡಿ ಕೃಷಿ ಕಾನೂನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ಆದರೆ ಮೋದಿ ಅವರು ಏನು ನಡೆದೆ ಇಲ್ಲ ಎಂಬಂತೆ ತಿರುಗಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ರೈತ ಚಳವಳಿಯನ್ನು ಕಾಂಗ್ರೆಸ್ ಪ್ರಾಯೋಜಿತ ಎಂದು ಇಲ್ಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಷ್ಟು ಬೇಜಾವಾಬ್ದಾರಿಯಿಂದ ಮಾತನಾಡುವವರು ಅ„ಕಾರದಲ್ಲಿ ಇರಲು ಸಾಧ್ಯವಿಲ್ಲ. ಮೋದಿ ಅಧಿಕಾರದಲ್ಲಿ ಮುಂದುವರೆಯಲು ಬಿಟ್ಟರೆ ದೇಶ ಹಾಳಾಗುತ್ತದೆ. ಮತ್ತೆ ಭಿಕ್ಷೆ ಬೇಡಿ ಬದುಕುವ ಪರಿಸ್ಥಿತಿ ತಂದಿಟ್ಟು ಬಿಡುತ್ತಾರೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತ ಪಡಿಸಿದರು.

ರೈಲು ಅಪಘಾತಕ್ಕೆ ಒಳಗಾದಾಗ ರೈಲ್ವೆ ಸಚಿವರಾಗಿದ್ದಾಗ ಲಾಲ್ ಬಹುದೂರ್ ಶಾಸಿ ಅವರು ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿದ್ದರು. ಈಗ ಬಿಜೆಪಿಯವರಿಂದ ಅಂತಹದ್ದನ್ನು ನಿರೀಕ್ಷಿಸಲು ಸಾಧ್ಯವೆ. ಬಿಜೆಪಿ ಅಧಿಕಾರವಧಿಯಲ್ಲಿ ನೈತಿಕ ಜವಾಬ್ದಾರಿ ಎಂಬ ಪದವನ್ನೇ ತೆಗೆದು ಹಾಕಿ ಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

ಗಾಂಧೀಜಿ ಭೌತಿಕವಾಗಿ ನಮ್ಮೊಂದಿಗೆ ಇಲ್ಲದೆ ಇರಬಹುದು ಆದರೆ ಅವರ ಆದರ್ಶಗಳು ನಮ್ಮ ಜೊತೆಯಲ್ಲಿವೆ. ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಜೂನಿಯರ್, ಅಮೆರಿಕಾದ ಅಧ್ಯಕ್ಷರಾಗಿದ್ದ ಒಬಮಾ ಸೇರಿದಂತೆ ಜಗತ್ತಿನ ಅನೇಕ ನಾಯಕರು ಗಾಂ„ಜೀ ಅವರ ಆದರ್ಶಗಳಿಂದ ಪ್ರೇರೆಪಿತರಾಗಿದ್ದರು. ಭಾರತಕ್ಕಷ್ಟೆ ಅಲ್ಲ ಜಗತ್ತಿನ ನಾಯಕರಾಗಿದ್ದರು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಗಾಂ„ಜೀ ಮತ್ತು ಲಾಲ್ ಬಹುದೂರ್ ಶಾಸ್ತ್ರಿ ಅವರನ್ನು ನಾವು ಸ್ಮರಿಸಿಕೊಳ್ಳುತ್ತಿದ್ದೇವೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧಿಜೀ ಅಧ್ಯಕ್ಷರಾಗಿದ್ದರು, ನಾವೇಲ್ಲಾ ಆ ಪಕ್ಷದ ಸದಸ್ಯರಾಗಿದ್ದೇವೆ ಎಂಬುದು ನಮಗೆ ಹೆಮ್ಮೆಯ ವಿಚಾರ.

ಬಿಜೆಪಿ, ಜೆಡಿಎಸ್‍ನವರಿಗೆ ಈ ಹೆಮ್ಮೆ ಸಿಗಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಪಕ್ಷದವರು ಎಂದು ಹೇಳಿಕೊಳ್ಳಲು ಅವರಿಗೆ ಸಾಧ್ಯವೇ. ಕಾಂಗ್ರೆಸ್ ಸದಸ್ಯತ್ವವೇ ದೊಡ್ಡ ಅವಕಾಶ. ಅಧಿಕಾರ ಬರುತ್ತೆ ಹೋಗುತ್ತೆ, ಪಕ್ಷದಲ್ಲಿ ಇರುವುದೇ ಪವಿತ್ರ ಸ್ಥಾನ ಎಂದರು.

ಕಾಂಗ್ರೆಸ್ ಸಂಸ್ಥಾಪನಾ ದಿನವಾದ ಡಿಸೆಂಬರ್ 28ರಂದು ಕಾಂಗ್ರೆಸ್ ಭವನಕ್ಕೆ ಗಾಂಧಿ ಭವನ ಎಂದು ಹೆಸರು ಬದಲಾವಣೆ ಮಾಡುವ ಚಿಂತನೆ ಇದೆ. ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ . ಅದರ ಆಚರಣೆಗೆ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ.

ರಾಜ್ಯದಲ್ಲಿರುವ 6 ಸಾವಿರ ಪಂಚಾಯತ್ ಮತ್ತು 1600 ವಾರ್ಡ್‍ಗಳಲ್ಲಿ ಕಾಂಗ್ರೆಸ್ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ತಿಂಗಳಿನಲ್ಲಿ ಕೆಪಿಸಿಸಿ ಪುನರ್ ರಚನೆಯಾಗಲಿದೆ. ಜೊತೆಗೆ ಎಐಸಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಮತ್ತೊಂದು ಸಮಿತಿ ರಚಿಸಲಾಗುತ್ತದೆ ಎಂದು ಹೇಳಿದರು.

ರೈತರ ಪ್ರತಿಭಟನೆಯನ್ನು ನಿರ್ಲಕ್ಷ್ಯಿಸಿರುವುದು ಕೃಷಿಕರ ಸ್ವಾಭಿಮಾನವನ್ನು ಕೆರಳಿಸಿದೆ. ದೇಶದಲ್ಲಿ ಗೊಬ್ಬರದ ಬೆಲೆ ದುಪ್ಪಟ್ಟು ಹೆಚ್ಚಾಗಿದೆ ಎಂದ ಅವರು, ನೂತನ ಶಿಕ್ಷಣ ನೀತಿಯ ವಿರುದ್ಧವೂ ಕಿಡಿಕಾರಿದರು.ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಮಾತನಾಡಿ, ಕೇಂದ್ರ ಸರ್ಕಾರ ರೈತರನ್ನು ಬಗ್ಗು ಬಡಿಯುತ್ತಿದ್ದರು. ಮಹಾತ್ಮ ಗಾಂಧಿ ಇದ್ದಿದ್ದರೆ ಕಣ್ಣಿರು ಇಡುತ್ತಿದ್ದರು ಎಂದು ಹೇಳಿದರು.

ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹ್ಮದ್, ಮಾಜಿ ಸಚಿವ ಎಚ್.ಆಂಜನೇಯ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್‍ನಾಥ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin