ನನಗೆ ‘ಕೇಸರಿ’ ಭಯವಿಲ್ಲ, ಸಮಾಜವನ್ನು ಒಡೆಯುತ್ತಾರೆ ಎಂಬ ಚಿಂತೆ ಅಷ್ಟೇ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.21- ಜನ ಸಹಿಸಿಕೊಳ್ಳುವವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರಗಳನ್ನು ಹೆಚ್ಚಿಸುತ್ತಲೇ ಇರುತ್ತದೆ. ಇದರ ವಿರುದ್ಧ ಜನ ತಿರುಗಿಬಿದ್ದು ಪ್ರತಿಭಟನೆ ನಡೆಸಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಬೆಲೆ ಏರಿಕೆಯಿಂದ ಜನ ಸಂಕಷ್ಟದಲ್ಲಿದ್ದಾರೆ. ಉಪ ಚುನಾವಣೆಯಲ್ಲಿ ಇದು ಕೂಡ ಪರಿಣಾಮ ಬೀರಲಿದೆ ಎಂದರು.ಬಿಜೆಪಿಯವರಿಗೆ ಉಪಚುನಾವಣೆಯಲ್ಲಿ ಪ್ರಸ್ತಾಪಿಸಲು ಯಾವುದೇ ಅಭಿವೃದ್ಧಿಯ ವಿಷಯಗಳಿಲ್ಲ.

ಅವರು ಯಾವ ಕೆಲಸಗಳನ್ನೂ ಮಾಡಿಲ್ಲ. ಹೀಗಾಗಿ ವೈಯಕ್ತಿಕ ನಿಂದನೆಗೆ ಮುಂದಾಗಿದ್ದಾರೆ. ಹತಾಶೆ ಇದ್ದಾಗ ಮಾತ್ರ ಈ ರೀತಿಯ ಟೀಕೆಗಳನ್ನು ಮಾಡಲು ಸಾಧ್ಯ ಎಂದು ಹೇಳಿದರು.ಕೊರೊನಾ ಸಂದರ್ಭದಲ್ಲಿ ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಮೃತಪಟ್ಟವರಿಗೆ ಪರಿಹಾರ ಕೊಡಲಿಲ್ಲ.

ಬೆಲೆ ಏರಿಕೆ ನಿಯಂತ್ರಿಸಲಿಲ್ಲ. ಕೊರೊನಾ ಸಂದರ್ಭದಲ್ಲೂ ಖರೀದಿಯಲ್ಲಿ ಕಮಿಷನ್ ಪಡೆದು ಭ್ರಷ್ಟಾಚಾರ ಮಾಡಿದರು. ಹೀಗಾಗಿ ಜನರ ಮುಂದೆ ಹೇಳಲು ಅವರಿಗೆ ಯಾವುದೇ ವಿಷಯಗಳಿಲ್ಲ. ಅದಕ್ಕಾಗಿ ವೈಯಕ್ತಿಕ ಟೀಕೆಗಳಿಗೆ ಮುಂದಾಗಿದ್ದಾರೆ ಎಂದರು.

ವಿಜಯಪುರ ಜಿಲ್ಲೆಯಲ್ಲಿ ಪೊಲೀಸರು ಕೇಸರಿ ಶಾಲು ಹಾಕಿಕೊಂಡು ಆಯುಧ ಪೂಜೆಯಲ್ಲಿ ಭಾಗವಹಿಸಿರುವುದು ಯೋಜಿತ ಕಾರ್ಯಕ್ರಮ. ಅದರ ಹಿಂದೆ ಆರ್‍ಎಸ್‍ಎಸ್ ಕೈವಾಡವಿದೆ. ಪೊಲೀಸರು ವೈಯಕ್ತಿಕವಾಗಿ ಬಟ್ಟೆಗಳನ್ನು ಖರೀದಿಸಿಲ್ಲ. ಆರ್‍ಎಸ್‍ಎಸ್‍ನವರೇ ಸಾಮೂಹಿಕವಾಗಿ ಹಂಚಿದ್ದಾರೆ. ಅದನ್ನು ಹಾಕಿಕೊಳ್ಳುವ ಸಿಬ್ಬಂದಿಗಳಿಗೆ ಬುದ್ದಿ ಇರಬೇಕಿತ್ತು. ನಾಳೆ ತ್ರಿಶೂಲ ಕೊಟ್ಟರೂ ಹಿಡಿದುಕೊಳ್ಳುತ್ತಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನನಗೆ ಆರ್‍ಎಸ್‍ಎಸ್ ಅಥವಾ ಕೇಸರಿ ಕಂಡರೆ ಭಯವಿಲ್ಲ. ಆತಂಕ ಇರುವುದು ಸಮಾಜದ ಬಗ್ಗೆ. ಇವರು ಸಮಾಜವನ್ನು ಒಡೆಯುತ್ತಾರೆ ಎಂಬ ಚಿಂತೆಕಾಡುತ್ತಿದೆ ಎಂದರು.ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆ ಆಧರಿಸಿ ಶೇ.7ರಷ್ಟು ಮೀಸಲಾತಿ ಹೆಚ್ಚಿಸುವುದಾಗಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಭರವಸೆ ನೀಡಿತ್ತು.

ಅದನ್ನು ಈಡೇರಿಸಬೇಕು. ಪಂಚಮಶಾಲಿ ಸೇರಿದಂತೆ ವಿವಿಧ ಸಮುದಾಯಗಳು ಮೀಸಲಾತಿ ಪರಿಷ್ಕರಣೆಗೆ ಒತ್ತಾಯಿಸುತ್ತಿರುವ ಬಗ್ಗೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ಹಿಂದುಳಿದ ವರ್ಗಗಳ ಆಯೋಗ ರಚಿಸಿರುವ ಸಮಿತಿ ವರದಿ ನೀಡಬೇಕಿದೆ ಎಂದು ಹೇಳಿದರು.

ಜೆಡಿಎಸ್‍ನವರು ಬಿಜೆಪಿಯವರ ಜತೆ ಒಳ ಒಪ್ಪಂದ ಮಾಡಿಕೊಂಡೇ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿರುವ ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲ. ಅವರ ಹೆಸರಿನಲ್ಲಿ ಜಾತ್ಯತೀತ ಎಂದು ಇದೆಯೇ ಹೊರತು ನಡವಳಿಕೆ, ಆಚಾರದಲ್ಲಿ ಜೆಡಿಎಸ್ ಕೋಮುವಾದಿ ಪಕ್ಷ ಎಂದು ಟೀಕಿಸಿದರು.

ಉಪ ಚುನಾವಣೆಗಳಲ್ಲಿ ಗೆಲ್ಲಲು ಬಿಜೆಪಿ ಹಣದ ಹೊಳೆಯನ್ನೇ ಹರಿಸುತ್ತಿದೆ. ಪ್ರತಿ ವೋಟಿಗೆ ಎರಡು ಸಾವಿರ ನೀಡಲಾಗುತ್ತಿದೆ. ನಾನು ಎರಡು ಕ್ಷೇತ್ರಗಳಲ್ಲು ಪ್ರಚಾರ ನಡೆಸಿದ್ದೇನೆ. ಕಾಂಗ್ರೆಸ್ ಪರವಾದ ಅಲೆ ಇದೆ. ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್‍ಕುಮಾರ್ ಅವರನ್ನು ಜೈಲಿಗೆ ಹಾಕಿಸುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿರುವುದು ಅಕಾರ ಮದದ ಪರಮಾವ. ಅಕಾರ ಶಾಶ್ವತ ಅಲ್ಲ. 2023ರ ಬಳಿಕ ಇವರು ಮನೆಗೆ ಹೋಗುತ್ತಾರೆ ಎಂದರಲ್ಲದೆ, ಜೆಡಿಎಸ್ ಸೇರಲು ಮುಂದಾಗಿರುವ ಕಾಂಗ್ರೆಸ್ ಎಂಎಲ್‍ಸಿ ಸಿ.ಎಂ.ಇಬ್ರಾಹಿಂ ಬಗ್ಗೆ ಮಾತನಾಡುವುದಿಲ್ಲ ಎಂದರು.

ಪ್ರತಿ ಉಪ ಚುನಾವಣೆಯಲ್ಲೂ ನಾನು ಸಕ್ರಿಯವಾಗಿ ಪ್ರಚಾರ ಮಾಡುತ್ತಿದೇನೆ. ಈ ಹಿಂದೆ ನಡೆದ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಎಲ್ಲಾ ಕಡೆ ಹೋಗಿ ಪ್ರಚಾರ ಮಾಡಿದ ಏಕೈಕ ವ್ಯಕ್ತಿ ನಾನು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಉಗ್ರಪ್ಪ ಮತ್ತು ಸಲೀಂ ಅವರ ನಡುವೆ ನಡೆದಿದೆ ಎನ್ನಲಾದ ಮಾತುಕತೆಯ ಬಗ್ಗೆ ನನಗೆ ನಂಬಿಕೆ ಇಲ್ಲ. ಬಿಜೆಪಿಯವರು ಇದರ ಬಗ್ಗೆ ಚರ್ಚೆ ಮಾಡುವ ಬದಲು ಯತ್ನಾಳ್ ಅವರು ಯಡಿಯೂರಪ್ಪ ಅವರ ಭ್ರಷ್ಟಾಚಾರದ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲಿ ಎಂದು ಸವಾಲು ಹಾಕಿದರು.

ರಾಜ್ಯದ ಬಿಜೆಪಿಯ ಸಂಸದರು ಹೇಡಿಗಳು. ಇವರಿಗೆ ಪ್ರಧಾನಮಂತ್ರಿ ಬಳಿ ಹೋಗಿ ಪ್ರತಿಭಟನೆ ಮಾಡಿ ರಾಜ್ಯಕ್ಕೆ ಬರಬೇಕಾದ ಅನುದಾನ ಕೇಳುವ ತಾಕತ್ತಿಲ್ಲ. ಹೀಗಾಗಿ ಕರ್ನಾಟಕಕ್ಕೆ ಜಿಎಸ್‍ಟಿಯ ಪಾಲು ಸಿಗುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನದಲ್ಲೂ ಅಪವ್ಯಯವಾಗುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

Facebook Comments

Sri Raghav

Admin