ಬಿಜೆಪಿ ಸರ್ಕಾರದ ವಿರುದ್ಧ ಆಸ್ಪತ್ರೆಯಿಂದಲೇ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.9- ಕಳೆದ ವರ್ಷದ ಅತಿವೃಷ್ಟಿಯ ಹಾನಿಗೆ ಪರಿಹಾರ ಕಲ್ಪಿಸಲು ವಿಫಲವಾಗಿರುವ ಕಾರಣದಿಂದಾಗಿಯೇ ಈ ಬಾರಿಯ ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ಹಣವಿಲ್ಲದೆ ರಾಜ್ಯಸರ್ಕಾರ ಕೈ ಚೆಲ್ಲುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ಅಲ್ಲಿಂದಲೇ ನೆರೆ ಹಾವಳಿಯ ಪರಿಹಾರ ಕಾರ್ಯಗಳ ಮೇಲೆ ನಿಗಾ ಇರಿಸಿದ್ದಾರೆ. ಸರ್ಕಾರದ ವೈಪಲ್ಯಗಳ ಕುರಿತು ಚಾಟಿ ಬೀಸುತ್ತಿದ್ದಾರೆ.

ಕಳೆದ ವರ್ಷದ ನೆರೆ ಹಾವಳಿಯಲ್ಲಾದ ನಷ್ಟಗಳ ಪುನರ್ವಸತಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಸುರೇಶ್ ಕುಮಾರ್ ಹಾಗೂ ಶಶಿಕಲ್ಲಾ ಜೊಲ್ಲೆ ಅವರಿಗೆ ಕಳೆದ ತಿಂಗಳೇ ಪತ್ರ ಬರೆದು ಮಾಹಿತಿ ಕೇಳಿದ್ದೆ. ಆದರೆ ಸಚಿವರು ಮಾಹಿತಿ ಕೊಟ್ಟಿಲ್ಲ ಎಂದು ಅಸಮಾದಾನ ವ್ಯಕ್ತ ಪಡಿಸಿದ್ದಾರೆ.

ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದು, ಕಳೆದ ವರ್ಷದ ಪ್ರವಾಹದಿಂದ ಹಾನಿಗೊಳಗಾದ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳೆಷ್ಟು ?ಅವುಗಳಲ್ಲಿ ಎಷ್ಟು ಪೂರ್ಣವಾಗಿ ದುರಸ್ತಿಗೊಂಡಿವೆ ? ಖರ್ಚಾಗಿರುವ ಹಣ ಎಷ್ಟು ? ಬಾಕಿ ಉಳಿದಿರುವ ಕಾಮಗಾರಿಗಳೆಷ್ಟು ? ಮಾಹಿತಿ ಕೇಳಿದ್ದೆ.

ಉಪಮುಖ್ಯಮಂತ್ರಿಯೂ ಆದ ಗೋವಿಂದ ಕಾರಜೋಳ ಈವರೆಗೂ ಮಾಹಿತಿ ನೀಡಿಲ್ಲ. ಈಗಲಾದರೂ ಮಾಹಿತಿ ನೀಡುವಿರಾ ಎಂದು ಪ್ರಶ್ನಿಸಿದ್ದಾರೆ.

ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದು ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗೆ ನೀಡಿದ ಪರಿಹಾರ ಎಷ್ಟು? ಕಟ್ಟಿದ ಹೊಸ ಮನೆಗಳೆಷ್ಟು? ಪ್ರತಿಬಾರಿ ನೆರೆ ನೀರಿನಲ್ಲಿ ಮುಳುಗುವ ಮನೆಗಳೆಷ್ಟು? ಎಷ್ಟು ಕುಟುಂಬಗಳು ಶೆಡ್‍ನಲ್ಲಿವೆ? ಎಷ್ಟು ಕುಟುಂಬಗಳು ಬಾಡಿಗೆ ಮನೆಯಲ್ಲಿವೆ? ಎಂಬ ಮಾಹಿತಿ ಕೇಳಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದು, ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಸರ್ಕಾರಿ ಶಾಲಾ ಕಟ್ಟಡಗಳೆಷ್ಟು? ಎಷ್ಟು ಕಟ್ಟಡಗಳನ್ನು ದುರಸ್ತಿ ಪಡಿಸಲಾಗಿದೆ ಮತ್ತು ಪುನರ್ ನಿರ್ಮಿಸಿಗೊಳ್ಳಲಾಗಿದೆ ? ದುರಸ್ತಿಗೆ ಬಾಕಿ ಉಳಿದಿರುವುದು ಎಷ್ಟು? ಇದಕ್ಕಾಗಿ ಖರ್ಚಾದ ಹಣ ಎಷ್ಟು ? ಎಂದು ಮಾಹಿತಿ ಬಯಸಿದ್ದರೂ ಸರ್ಕಾರದಿಂದ ಉತ್ತರ ಬಂದಿಲ್ಲ ಎಂದು ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಪತ್ರ ಬರೆದು, ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಅಂಗನವಾಡಿ ಕಟ್ಟಡಗಳೆಷ್ಟು? ಅವುಗಳಲ್ಲಿ ದುರಸ್ತಿವಾಗಿರುವುದೆಷ್ಟು? ಪುನರ್ ನಿರ್ಮಾಣವಾಗಿದ್ದೆಷ್ಟು ? ಇವುಗಳ ದುರಸ್ತಿ-ಪುನರ್ ನಿರ್ಮಾಣಕ್ಕೆ ಖರ್ಚಾದ ಹಣ ಎಷ್ಟು? ದಯವಿಟ್ಟು ವಿವರ ನೀಡುವಿರಾ ಎಂದು ಮನವಿ ಮಾಡಿದ್ದಾರೆ.

ಈ ಎಲ್ಲಾ ಸಚಿವರಿಗೆ ಕಳೆದ ತಿಂಗಳೇ ಪತ್ರ ಬರೆದು ಎಚ್ಚರಿಸಿದ್ದೆ, ಎಂದಿನಂತೆ ಸರ್ಕಾರದಿಂದ ಉತ್ತರ ಇಲ್ಲ. ಈಗ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

Facebook Comments

Sri Raghav

Admin