“ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ದುಡ್ಡು ಹೊಡೆಯುತ್ತಿದ್ದಾರೆ” : ಸಿದ್ದು ಗಂಭೀರ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಫೆ.20- ಎಲ್ಲೇಲ್ಲಿ ಹೆಚ್ಚು ಹಣ ಖರ್ಚಾಗುತ್ತದೋ ಅಲ್ಲೇಲ್ಲಾ ದುಡ್ಡು ಹೊಡೆಯೋಕೆ ಸರ್ಕಾರದವರು ಪ್ಲ್ಯಾನ್ ಮಾಡಿರುತ್ತಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು. ರಾಮಕೃಷ್ಣನಗರ ಪಾರ್ಕ್‍ನಲ್ಲಿ ವಾಕಿಂಗ್ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಾಂಕ್ರಾಮಿಕ ರೋಗವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದಕ್ಕಾಗಿ ಈ ಹಿಂದೆ ಹೆಚ್ಚು ಹಣ ಖರ್ಚಾಯಿತು. ಈಗ ಎರಡನೇ ಹಂತದಲ್ಲಿ ಸೋಂಕು ಹೆಚ್ಚಾಗಲಿದೆ ಎಂಬ ಮಾಹಿತಿ ಇದ್ದರೆ ಅದನ್ನು ತಡೆಯಲು ಗಂಭೀರ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಅಷ್ಟು ಗಂಭೀರವಾಗಿರುವ ಲಕ್ಷಣಗಳು ಕಂಡು ಬರುತ್ತಿಲ್ಲ ಎಂದು ಆರೋಪಿಸಿದರು.

ಕೊರೊನಾ ಮೊದಲ ಹಂತದಲ್ಲಿ ನಡೆದ ಭ್ರಷ್ಟಚಾರದ ಬಗ್ಗೆ ನಾನು ಮಾಡಿದ ಆರೋಪಕ್ಕೆ ಈವರೆಗೂ ಸರಿಯಾಗಿ ಉತ್ತರ ಕೊಟ್ಟಿಲ್ಲ. ಈಗ ಎರಡನೇ ಹಂತದ ಸೋಂಕಿನ ಭೀತಿ ಎದುರಾಗಿದೆ. ಎಲ್ಲೆಲ್ಲಿ ಹಣ ಹೆಚ್ಚು ಖರ್ಚಾಗುತ್ತೋ ಅಲ್ಲೇಲ್ಲಾ ದುಡ್ಡು ಹೊಡೆಯುವ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ.

ಸೋಂಕಿತರು ಕೇರಳದಿಂದಾಗಲಿ, ಆಫ್ರಿಕಾದಿಂದಾಗಲಿ, ಎಲ್ಲಿಂದಲೇ ಬಂದರೂ ಅವರನ್ನು ತಡೆದು ಸೋಂಕು ಹರಡದಂತೆ ಮಾಡಲು ಗಂಭೀರ ಕ್ರಮ ಕೈಗೊಳ್ಳಬೇಕಿತ್ತು. ಸರ್ಕಾರ ಆ ರೀತಿ ಮಾಡಿಲ್ಲ ಎಂದು ಟೀಕಿಸಿದರು. ರಾಮಮಂದಿರ ನಿರ್ಮಾಣಕ್ಕೆ ಹಣ ಕೊಡದೇ ಇದ್ದ ಸಿದ್ದರಾಮಯ್ಯ ಲೆಕ್ಕ ಕೇಳೋಕೆ ಅಕಾರ ಹೊಂದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಮಮಂದಿರ ನಿರ್ಮಾಣಕ್ಕೆ ಹಣ ಕೊಡದೇ ಇದ್ದವರಿಗೂ ಲೆಕ್ಕ ಕೇಳುವ ಅಕಾರ ಇದೆ.

ಹಣ ಸಂಗ್ರಹಿಸಿದವರು ಲೆಕ್ಕ ಕೊಡುವ ಜವಾಬ್ದಾರಿ ಹೊಂದಿದ್ದಾರೆ. ಈ ಹಿಂದೆ ಅಯೋಧ್ಯೆ ಗಲಾಟೆ ಸಂದರ್ಭದಲ್ಲಿ ಇಟ್ಟಿಗೆ ಮತ್ತು ಹಣ ಸಂಗ್ರಹ ಮಾಡಿದ್ದರು. ಅದರ ಲೆಕ್ಕ ಕೊಟ್ಟಿದ್ದಾರಾ. ಇಲ್ಲ ಎಂದಾದ ಮೇಲೆ ಅದು ದುರುಪಯೋಗ ಆಗಿದೆ ಎಂದೇ ಅರ್ಥವಲ್ಲವೇ ಎಂದರು.

ದೇಶದ 135 ಕೋಟಿ ಜನರು ಹಣ ಕೊಟ್ಟಿರುವುದಿಲ್ಲ, ಆದರೆ ಅವರು ವಸೂಲಿ ಮಾಡಿರುವುದು ಸಾರ್ವಜನಿಕರ ಹಣ. ಲೆಕ್ಕ ಕೊಡಬೇಕು. ಜನರಿಗೆ ದೇವರು ಎಂದರೆ ಭಯ ಭಕ್ತಿ ಇರುತ್ತದೆ. ಅದನ್ನು ಭಾವನಾತ್ಮಕ ವಿಷಯ ಮಾಡಿಕೊಳ್ಳಬಾರದು. ಜನ ದುಡ್ಡು ಕೊಡುತ್ತಿರುವುದು ರಾಮನಿಗಾಗಿ ಬಿಜೆಪಿಗಾಗಿ ಅಲ್ಲ. ಹಣ ಸಂಗ್ರಹವನ್ನು ಬಿಜೆಪಿಯವರು ತಮ್ಮ ಪಕ್ಷದ ಪ್ರಚಾರಕ್ಕಾಗಿ ಅಥವಾ ಅನುಕಂಪ ಗಿಟ್ಟಿಸಲು ಬಳಸಿಕೊಳ್ಳಬಾರದು ಎಂದು ಹೇಳಿದರು.

ಸಾಮಾನ್ಯವಾಗಿ ಎಲ್ಲಾ ಕಡೆ ರಾಮಮಂದಿರ ಕಟ್ಟಿಸುತ್ತಾರೆ. ನಾನು ನಮ್ಮ ಊರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೇನೆ. ಊರಿನವರೇಲ್ಲಾ ಹಣ ಸಂಗ್ರಹ ಮಾಡಿ ಮಂದಿರ ಕಟ್ಟುತ್ತಿದ್ದಾರೆ. ಅದಕ್ಕೆ ಎಷ್ಟು ಖರ್ಚಾಗುತ್ತಿದೆ ಎಂದು ಬಹಿರಂಗವಾಗಿ ಹೇಳುವ ಅಗತ್ಯ ಇಲ್ಲ ಎಂದರು.

ಪೆಟ್ರೋಲ್, ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಅಸಮದಾನ ವ್ಯಕ್ತ ಪಡಿಸಿದ ಸಿದ್ದರಾಮಯ್ಯ, ಈ ಸರ್ಕಾರದಿಂದ ಜನ ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಬಡವರಿಗೆ ನೀಡುವ ಅಕ್ಕಿ ಕಡಿತ ಮಾಡಿದ್ದಾರೆ. ರೇಷನ್ ಕಾರ್ಡ್ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿರೋಧ ವ್ಯಕ್ತವಾದ ಬೆನ್ನಲ್ಲೇ ವಾಪಾಸ್ಸು ಪಡೆದಿದ್ದಾರೆ.

ಮುಂದೆ ಯಡಿಯೂರಪ್ಪ ಮಂಡಿಸುವ ಬಜೆಟ್‍ನಲ್ಲಿ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದರು. ಮೈಸೂರು ಮೇಯರ್ ಚುನಾವಣೆಯಲ್ಲಿ ನಮ್ಮ ಪಕ್ಷದ ಎಲ್ಲಾ ಸದಸ್ಯರು ಒಟ್ಟಾಗಿರುವಂತೆ ಸಲಹೆ ನೀಡಿದ್ದೇನೆ. ಈ ಮೊದಲು ಕಾಂಗ್ರೆಸ್-ಜೆಡಿಎಸ್ ನಡುವೆ ಆಗಿದ್ದ ಒಪ್ಪಂದದ ಪ್ರಕಾರ ಈಗ ಮೇಯರ್ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟು ಕೊಡಬೇಕಿತ್ತು. ಅವರಾಗಿಯೇ ಬಂದರೆ ಬರಲಿ. ಇಲ್ಲವಾದರೆ ನೀವು ಒಟ್ಟಾಗಿರಿ ಎಂದು ನಮ್ಮ ಸದಸ್ಯರಿಗೆ ಹೇಳಿದ್ದೇನೆ ಎಂದರು.

Facebook Comments

Sri Raghav

Admin