ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ : ಬಿಜೆಪಿ ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 1- ರಾಜ್ಯದಲ್ಲಿ ಜನ ಚಿಕಿತ್ಸೆ ಇಲ್ಲದೆ ಜನ ಸಾಯುತ್ತಿದ್ದಾರೆ, ಅರಾಜಕತೆ ತಾಂಡವಾಡುತ್ತಿದೆ. ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗುವಂತೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುರ್ತು ಚಿಕಿತ್ಸೆ ಬಳಸಲಾಗುವ ರೆಮಿಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅದನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೊರೊನಾ ಸಂದರ್ಭದಲ್ಲಿ ಈ ಸರ್ಕಾರ ಸತ್ತು ಹೋಗಿದೆ. ಆರೋಗ್ಯ ಸಚಿವರು ಫೋನ್‍ಗೆ ಸಿಗುತ್ತಿಲ್ಲ. ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ನಿನ್ನೆ ಒಂದೇ ದಿನ 49 ಜನ ಸಾವನ್ನಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಲಾಕ್‍ಡೌನ್ ಮಾಡಿ ನಾಲ್ಕು ದಿನಗಳಾಗಿದೆ. ಅದರಿಂದ ಏನು ಉಪಯೋಗವಾಯಿತು ಎಂದು ಗೋತ್ತಾಗಿಲ್ಲ. ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ಹೋಗಬೇಕು ಎಂದು ಸವಾಲು ಹಾಕಿದರು.

ವಿರೋಧ ಪಕ್ಷವಾಗಿ ನಾವು ಸರ್ಕಾರಕ್ಕೆ ಎಲ್ಲ ಸಹಕಾರ ಕೊಡುತ್ತಿದ್ದೇವೆ. ಸರ್ಕಾರ ಲಾಕ್‍ಡೌನ್ ಮಾಡಿದೆ, ದುಡಿಯುವ ವರ್ಗದ ಪರಿಸ್ಥಿತಿ ಏನು. ರಾಜ್ಯದಲ್ಲಿ ಒಂದೂವರೆಕೋಟಿ ಕಾರ್ಮಿಕರಿದ್ದಾರೆ. ಅವರು ಏನು ತಿನ್ನಬೇಕು. ಸರ್ಕಾರ ಕನಿಷ್ಟ ಅವರಿಗೆ ಸಹಾಯ ಮಾಡಬೇಕು ಎಂದರು.ಮಂತ್ರಿಗಳಾಗಲು, ಸರ್ಕಾರ ನಡೆಸಲು ಇವರೆಲ್ಲ ನಾಲಾಯಕ್‍ಗಳು, ಜನರ ಸೇವೆ ಮಾಡಲು ಆಗದವರು ಅಧಿಕಾರದಲ್ಲಿದ್ದರೆನು ಪ್ರಯೋಜನ ಎಂದರು.

18 ರಿಂದ 45 ವರ್ಷದವರಿಗೆ ಮೇ 1ರಿಂದ ಲಸಿಕೆ ಕೊಡುವುದಾಗಿ ಸರ್ಕಾರ ಹೇಳಿತ್ತು. ಒಂದು ಕೋಟಿ ಲಸಿಕೆ ಖರೀದಿ ಮಾಡಿರುವುದಾಗಿ ಹೇಳಿತ್ತು. ಆದರೆ ಏಕಾಏಕಿ ಲಸಿಕೆ ಸದ್ಯಕ್ಕಿಲ್ಲ ಎಂದಿದೆ. ಯಾವುದೇ ಹೇಳಿಕೆಯನ್ನಾದರೂ ಜವಾಬ್ದಾರಿಯಿಂದ ಕೊಡಬೇಕು ಎಂದರು.

ರಾಜ್ಯದಲ್ಲಿ ಆರೂವರೆ ಕೋಟಿ ಜನರಿದ್ದಾರೆ. ಈಗ ಒಂದು ಕೋಟಿ ಕೊಡ್ತೇವೆ ಎನ್ನುತ್ತಿದ್ದಾರೆ. ಇನ್ನೂ ಲಸಿಕೆ ಬಂದಿಲ್ಲ. ನನಗಿರುವ ಮಾಹಿತಿಯ ಪ್ರಕಾರ ಮಾಸಾಂತ್ಯಕ್ಕೆ ಲಸಿಕೆ ಸಿಗಬಹುದು. ಈ ಸರ್ಕಾರ ಲಸಿಕೆ ಕೊಡುವ ಮುನ್ನ ಪ್ರಚಾರಗಿಟ್ಟಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

18 ರಿಂದ 45 ವರ್ಷದ ಮೂರುವರೆ ಕೋಟಿ ಜನರಿದ್ದಾರೆ. ಇವರೆಲ್ಲರಿಗೂ ಉಚಿತವಾಗಿ ಲಸಿಕೆ ಕೊಡಬೇಕು. ನಾನೇ ಮುಖ್ಯಮಂತ್ರಿಯವರಿಗೆ ಕರೆ ಮಾಡಿ ಕೇಳಿದ್ದೇನೆ. ಲಸಿಕೆ ಬಂದಿಲ್ಲ ಎಂದು ಹೇಳಿದ್ದಾರೆ. ಮತ್ತೆ ಚಾಲನೆ ಕೊಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಲಸಿಕೆ ಉತ್ಪಾದನೆಗೆ 162 ಯುನಿಟ್‍ಗಳಿಗೆ ಟೆಂಡರ್ ಕರೆದಿದ್ದಾರೆ. 30 ಯುನಿಟ್‍ಗಳು ಮಾತ್ರ ಉತ್ಪಾದನೆ ಮಾಡುತ್ತಿವೆ. ಹೀಗಾದರೆ ಎಲ್ಲರಿಗೂ ಲಸಿಕೆ ಸಿಗಲು ಸಾಧ್ಯವಿಲ್ಲ. 45 ವರ್ಷ ಮೇಲ್ಪಟ್ಟ ಜನರ ಪೈಕಿ ಶೇ.20ರಷ್ಟು ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದರು.

Facebook Comments

Sri Raghav

Admin