“ಪ್ರವಾಹದಿಂದ ಜನ ಸಂಕಷ್ಟದಲ್ಲಿರೆ ಯಡಿಯೂರಪ್ಪ ಒನ್‍ಮ್ಯಾನ್ ಶೋ ಮಾಡ್ತಿದಾರೆ” : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಆ.19- ಪ್ರವಾಹ ಬಂದು ರಾಜ್ಯದ ಜನ ಸಂಕಷ್ಟಕ್ಕೀಡಾಗಿ 15 ದಿನ ಕಳೆದರೂ ಕೇಂದ್ರದಿಂದ ಒಂದೇ ಒಂದು ರೂಪಾಯಿ ಪರಿಹಾರ ಬಂದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒನ್‍ಮ್ಯಾನ್ ಶೋ ಮಾಡಿಕೊಂಡು ತಿರುಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಯಡಿಯೂರಪ್ಪನವರು ಪ್ರವಾಹದ ಬಗ್ಗೆ ಖುದ್ದು ನರೇಂದ್ರಮೋದಿ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಆದರೆ, ಈವರೆಗೂ ಎಲ್ಲೂ ಒಂದು ರೂಪಾಯಿ ಕೊಡುತ್ತೇನೆ ಎಂದು ಹೇಳಿಲ್ಲ ಎಂದರು.

2009ರಲ್ಲಿ ಪ್ರವಾಹ ಬಂದಾಗ ಕರ್ನಾಟಕಕ್ಕೆ ಬಂದಿದ್ದ ಆಗಿನ ಪ್ರಧಾನಿ ಮನಮೋಹನ್‍ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿ ಸ್ಥಳದಲ್ಲೇ 1600 ಕೋಟಿ ಘೋಷಣೆ ಮಾಡಿದ್ದರು. ಆದರೆ, ಯಡಿಯೂರಪ್ಪ ಈವರೆಗೆ ಕೇಂದ್ರಕ್ಕೆ ಮನವಿಯನ್ನೇ ಸಲ್ಲಿಸಿಲ್ಲ. ನರೇಂದ್ರ ಮೋದಿ, ಅಮಿತ್ ಷಾ ಕಂಡರೆ ಗಡಗಡ ನಡುಗುತ್ತಾರೆ.

ಪಾಪ ಅವರಿಗೆ ಸಿಕ್ಕಾಪಟ್ಟೆ ಭಯ. ಏಕೆ ಭಯ ಅಂತ ಯಡಿಯೂರಪ್ಪ, ಶೆಟ್ಟರ್ ಹೇಳಬೇಕು. ಅವರಿಗೆ ಭಯವಿದ್ದರೆ ನಮ್ಮನ್ನಾದರೂ ಮೋದಿ ಹತ್ತಿರ ಕರೆದುಕೊಂಡು ಹೋಗಲಿ. ನಾವು ಕೇಳುತ್ತೇವೆ ಎಂದು ಹೇಳಿದರು.

ನನ್ನ ಪ್ರಕಾರ ಪ್ರವಾಹದಿಂದ ಒಂದು ಲಕ್ಷ ಕೋಟಿಗಿಂತಲೂ ಹೆಚ್ಚು ನಷ್ಟವಾಗಿದೆ. ನೆರೆ ಸಂತ್ರಸ್ತರಿಗೆ ತುರ್ತು ನೆರವಿನ ಅಗತ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದರು.  ನನ್ನ ಕಣ್ಣು ಆಪರೇಷನ್ ಆಗಿತ್ತು. ಹೀಗಾಗಿ ಬರಲು ತಡವಾಯಿತು. ಇಲ್ಲದಿದ್ದರೆ ಯಾರಿಂದಲೂ ಹೇಳಿಸಿಕೊಳ್ಳುವವನು ನಾನಲ್ಲ. ಅದಕ್ಕಾಗಿ ನನ್ನ ಮಗನನ್ನು ಕಳುಹಿಸಿದ್ದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಯಡಿಯೂರಪ್ಪನವರಿಗೆ ಮಂತ್ರಿಮಂಡಲ ರಚಿಸಲು ಸಂವಿಧಾನಬದ್ಧ ಅಧಿಕಾರವಿದೆ. ಆದರೂ ಅವರು ಅಮಿತ್ ಷಾ ಮರ್ಜಿಯಲ್ಲಿದ್ದಾರೆ. ಹೀಗಾಗಿ ಬಿಜೆಪಿಯಲ್ಲೂ ಕೇಂದ್ರೀಕೃತ ಅಧಿಕಾರವಿದೆ ಎಂದು ತಿಳಿಸಿದರು.

ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿದೆ. ನಾವು ಕೂಡ ಅರ್ಜಿ ಹಾಕಿದ್ದೇವೆ. ಏನಾಗುತ್ತದೆಯೋ ನೋಡೋಣ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Facebook Comments

Sri Raghav

Admin