ಏಕವಚನದಲ್ಲಿ ಎಚ್.ವಿಶ್ವನಾಥ್‍ಗೆ ಸಿದ್ದು ಗುದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.4- ಮೈತ್ರಿ ಸರ್ಕಾರ ಕಲ್ಲುಬಂಡೆಯಂತೆ ಇರುತ್ತದೆ. ಯಾವುದೇ ಕಾರಣಕ್ಕೂ ಪತನವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.

ವಿಶ್ವನಾಥ್‍ಗೆ ಟಾಂಗ್: ಆರು ತಿಂಗಳು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನಿರ್ವವಣೆ ಮಾಡಲು ಅವನ ಕೈಲಿ ಆಗಲಿಲ್ಲ. ಅವರೇನ್ರಿ, ನಮ್ಮ ಬಗ್ಗೆ ಮಾತನಾಡೋದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅವನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು 6 ತಿಂಗಳು ನಿರ್ವಹಿಸದೇ ರಾಜೀನಾಮೆ ಕೊಟ್ಟಿದ್ದಾನೆ. ಅವನ ಮಾತಿಗೆ ಏನಂಥ ಪ್ರತಿಕ್ರಿಯೆ ಕೊಡೋದು ಎಂದು ತಿಳಿಸಿದ್ದಾರೆ.

ನಿನ್ನೆಯಷ್ಟೆ ನವದೆಹಲಿಯಲ್ಲಿ ವಿಶ್ವನಾಥ್ ಅವರು ಮೈತ್ರಿ ಮುನ್ನಡೆಸುವಲ್ಲಿ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ವಿಫಲರಾಗಿದ್ದಾರೆ. ಅವರಿಬ್ಬರ ನಡುವೆಯೇ ಸಮನ್ವಯದ ಕೊರತೆ ಇದೆ ಎಂದು ಹೇಳಿದ್ದರಲ್ಲ ಎಂಬ ವರದಿಗಾರರ ಪ್ರಶ್ನೆಗೆ ಆತನ ಬಗ್ಗೆ ನಾನೇನು ಮಾತನಾಡೋದು ರಾಜ್ಯಾಧ್ಯಕ್ಷಸ್ಥಾನ ನಿಭಾಯಿಸಲು ಆಗಲಿಲ್ಲ. ಅಂತಹವರಿಗೆ ಸಮನ್ವಯದ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದು ಟಾಂಗ್ ನೀಡಿದರು.

ಬಿಜೆಪಿಯಿಂದ ಹಣದ ಆಸೆ:  ಬಿಜೆಪಿ ಹಣದ ಆಸೆ ತೋರಿಸಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಅವರ ಆಸೆ ಈಡೇರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಿರಿಯಾಪಟ್ಟಣದ ಶಾಸಕ ಮಹದೇವ್‍ಗೆ ಬಿಜೆಪಿಯವರು 30 ಕೋಟಿ ಹಣದ ಆಮಿಷ ನೀಡಿರುವುದು ನನಗೆ ಗೊತ್ತಿಲ್ಲ. ಇದನ್ನು ಅವರನ್ನೇ ಕೇಳಿ ಎಂದು ತಿಳಿಸಿದರು.

ಆಪರೇಷನ್ ಕಮಲ ನಿಂತಿಲ್ಲ ಎಂದು ಹೇಳಿದ ಸಿದ್ದರಾಮಯ್ಯ ದೆಹಲಿ ಮಟ್ಟದಲ್ಲಿ ಇದು ನಡೆಯುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂತ್ರದಾರರು ಎಂದು ಗಂಭೀರ ಆರೋಪ ಮಾಡಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಜಿ.ಟಿ.ದೇವೇಗೌಡರು ಅವರ ಹೇಳಿಕೆಗೆ ಬದ್ಧರಾಗಿರಲಿ. ಅವರು ಅಮಿತ್ ಶಾ ಅವರೊಂದಿಗೆ ಮಾತನಾಡಿರಬೇಕು. ನಾನು ಅಮಿತ್ ಶಾ ಅಥವಾ ಮೋದಿ ಜತೆಯಾಗಲಿ ಮಾತನಾಡಿಲ್ಲ ಎಂದು ಮಾರ್ಮಿಕವಾಗಿ ಜಿ.ಟಿ.ದೇವೇಗೌಡರಿಗೆ ಟಾಂಗ್ ನೀಡಿದರು.

Facebook Comments

Sri Raghav

Admin