ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಯಾವುದೇ ಕಾರಣಕ್ಕೂ ಬೀಳಲ್ಲ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಮೈಸೂರು, ಅ.21- ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಬೀಳುವುದಿಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ಬಿಜೆಪಿಯವರು ಡೆಡ್‍ಲೈನ್ ಕೊಡುತ್ತಲೇ ಬಂದರು. ಅವರು ಹೇಳಿದ್ದ ಎಲ್ಲಾ ಡೆಡ್‍ಲೈನ್‍ಗಳು ಮುಗಿದಿವೆ. ಯಾರು ಏನೇ ಮಾಡಿದರೂ ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಉರುಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ಹಲ್ಲಿಲ್ಲದ ಹಾವು ಎಂದು ಸಂಸದೆ ಶೋಭಾಕರಂದ್ಲಾಜೆ ಹೇಳಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ, ಆಕೆಯ ಹಲ್ಲು ಗಟ್ಟಿಯಾಗಿವೆಯಂತಾ ಎಂದು ಮರು ಪ್ರಶ್ನಿಸಿದರು. ಶೋಭಾ ಕರಂದ್ಲಾಜೆ ರಾಜಾಜಿನಗರ ಕ್ಷೇತ್ರದಲ್ಲಿ ನಿಂತು ಸೋತಿರಲಿಲ್ಲವೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಆಕೆಗೆ ನನ್ನ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದರು.

ವೋಟುಗಳೇನು ಬಿ.ಎಸ್.ಯಡಿಯೂರಪ್ಪನವರ ಜೇಬಿನಲ್ಲಿವೆಯೇ ? ಮೊದಲು ಬಿಜೆಪಿಯವರು ಒಣಪ್ರತಿಷ್ಠೆ ಬಿಡಲಿ ಎಂದು ತಿರುಗೇಟು ನೀಡಿದರು. ನಾಳೆ ಬಳ್ಳಾರಿಯಿಂದ ಚುನಾವಣಾ ಪ್ರಚಾರ ಪ್ರಾರಂಭಿಸುವುದಾಗಿ ಹೇಳಿದ ಅವರು, ಮೂರು ಲೋಕಸಭೆ, ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಈ ಐದೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Facebook Comments