ಎಂ.ಬಿ.ಪಾಟೀಲ್ ಗೆ ಕೆಪಿಸಿಸಿ ಹುದ್ದೆ ನೀಡುವಂತೆ ಸಿದ್ದರಾಮಯ್ಯ ಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.15-ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂ.ಬಿ.ಪಾಟೀಲ್ ಅಥವಾ ತಮ್ಮ ಬೆಂಬಲಿಗರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಪಣ ತೊಟ್ಟಂತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೆಹಲಿಯಲ್ಲಿ ರಾಹುಲ್‍ಗಾಂಧಿಯವರನ್ನು ಭೇಟಿ ಸುದೀರ್ಘ ಚರ್ಚೆ ನಡೆಸಿದರು.

ನಿನ್ನೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್ ಹಿರಿಯ ನಾಯಕರಾದ ಅಹಮ್ಮದ್ ಪಟೇಲ್, ಎ.ಕೆ.ಅ್ಯಂಟನಿ, ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.

ಒಂದು ಹಂತದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ಬಗ್ಗೆ ಸೋನಿಯಾಗಾಂಧಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಪಕ್ಷದ ಹಿತದೃಷ್ಟಿಯಿಂದ ಸೂಕ್ತವಾಗಿರುತ್ತದೆ.

ವೈಯಕ್ತಿಕ ಹಿತಾಸಕ್ತಿಗಳು ಇಲ್ಲಿ ಮುಖ್ಯ ಅಲ್ಲ. ಅಧಿಕಾರಗಳು ಎಲ್ಲರಿಗೂ ಏಕಕಾಲಕ್ಕೆ ಸಿಗುವುದಿಲ್ಲ. ಹೀಗಾಗಿ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡಿ ಎಲ್ಲರೂ ಒಟ್ಟಾಗಿ ಪ್ರಯತ್ನಿಸಿದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟವಲ್ಲ ಎಂದು ಸೋನಿಯಾಗಾಂಧಿ ತಿಳಿಹೇಳಿದ್ದಾರೆ.

ಅನಂತರ ಸಿದ್ದರಾಮಯ್ಯ ಅವರು ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಿ ಎಂ.ಬಿ.ಪಾಟೀಲ್ ಪರ ಲಾಬಿ ನಡೆಸುವ ಪ್ರಯತ್ನ ಮುಂದುವರೆಸಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಗುಲಾಮ್‍ನಬಿ ಆಜಾದ್, ಅಹಮ್ಮದ್ ಪಟೇಲ್ ಮತ್ತಿತರರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.

ಕೆ.ಸಿ.ವೇಣುಗೋಪಾಲ್, ಎ.ಕೆ.ಆ್ಯಂಟನಿ ಅವರುಗಳು ಸಿದ್ದರಾಮಯ್ಯ ಸೂಚಿಸಿದ ಅಭ್ಯರ್ಥಿಗೆ ಮಣೆ ಹಾಕುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಸೋನಿಯಾಗಾಂಧಿಯವರು ರಾಜ್ಯದ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಭರವಸೆ ನೀಡಿದ್ದಾರೆ.

ಕೊನೆಯ ಹಂತದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಆರಂಭವಾಗಿದೆ. ಈ ನಡುವೆ ಕೆ.ಎಚ್.ಮುನಿಯಪ್ಪ, ಕೃಷ್ಣಭೈರೇಗೌಡ, ರಾಮಲಿಂಗಾರೆಡ್ಡಿ ಅವರ ಹೆಸರುಗಳು ಚಾಲ್ತಿಯಲ್ಲಿವೆ.

Facebook Comments

Sri Raghav

Admin