“ಮೋದಿಯವರ 56 ಇಂಚಿನ ಎದೆಯಲ್ಲಿ ಬಡವರ ಬಗ್ಗೆ ಕಾಳಜಿ ಇಲ್ಲ” । ಸಿದ್ದು ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರ, ಅ.13-ನೆರೆ ಸಂತ್ರಸ್ತರಿಗೆ ನೀಡಿರುವ ಪರಿಹಾರ ಹಿರಿಯರಿಗೆ ಧೂಪ ಹಾಕಿದಂತಾಗಿದೆ. ನೆರೆ ಪ್ರವಾಹ ಬಂದು 60 ದಿನಗಳ ನಂತರ ಕೇಂದ್ರ ಸರ್ಕಾರ 1200 ಕೋಟಿ ರೂ.ಗಳ ಪರಿಹಾರ ಘೋಷಣೆ ಮಾಡಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

22 ಜಿಲ್ಲೆಗಳ 103 ತಾಲ್ಲೂಕುಗಳ ಜನ ನೆರೆ ಹಾವಳಿಯಿಂದ ತತ್ತರಿಸಿದ್ದಾರೆ. 90 ಜನ ಮೃತಪಟ್ಟು, ಒಂದು ಲಕ್ಷ ಕೋಟಿಗೂ ಹೆಚ್ಚು ಹಾನಿ ಸಂಭವಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬರಲೇ ಇಲ್ಲ. ಅವರು 56 ಇಂಚಿನ ಎದೆ ಇದೆ ಎಂದು ಹೇಳುತ್ತಾರೆ. ನೂರು ಇಂಚಿನ ಎದೆ ಇದ್ದರೇನು? ಬಡವರ ಬಗ್ಗೆ ಕಾಳಜಿ ಇಲ್ಲದಿದ್ದರೆ ಎಂದು ಹರಿಹಾಯ್ದ ಅವರು, ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲದಂತಾಗಿದೆ ಎಂದರು.

ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಸಚಿವ ಅಶೋಕ್ ಅವರು ಹೇಳಿದಂತೆ 39 ತಾಲ್ಲೂಕುಗಳಲ್ಲಿ ಬರವಿದೆ. 103 ತಾಲ್ಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಆದರೆ ಪರಿಹಾರ ಕೊಟ್ಟಿರುವ ಹಣ ಹಿರಿಯರಿಗೆ ಧೂಪ ಹಾಕಿದಂತಾಗಿದೆ ಎಂದು ಹೇಳಿದರು.  ನಮ್ಮ ಪ್ರಧಾನಿಯವರು ಬಿಹಾರದಲ್ಲಿ ಪ್ರವಾಹ ಸಂಭವಿಸಿದಾಗ ಟ್ವಿಟ್ ಮಾಡಿ ಸಂತೈಸಿದ್ದಾರೆ. ಕನಿಷ್ಟ ನಮ್ಮ ರಾಜ್ಯದವರಿಗೆ ಸಂತೈಸುವ ಮಾನವೀಯತೆಯನ್ನು ಪ್ರದರ್ಶಿಸಲಿಲ್ಲ. 25 ಸಂಸದರನ್ನು ರಾಜ್ಯದ ಜನ ಆಯ್ಕೆ ಮಾಡಿ ಕಳುಹಿಸಿದ್ದು ಇದಕ್ಕೇನಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಸಂಭವಿಸಿರುವ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಆಗ್ರಹಿಸಿದರೂ ಸರ್ಕಾರ ಇದಕ್ಕೆ ಒಪ್ಪಲೇ ಇಲ್ಲ. ರಾಷ್ಟ್ರೀಯ ವಿಪ್ಪತ್ತು ಎಂದು ಘೋಷಿಸಿದ್ದರೆ ನಮಗೆ ಹೆಚ್ಚಿನ ಪರಿಹಾರ ಸಿಗುತ್ತಿತ್ತು ಎಂದು ಹೇಳಿದರು. ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಪರಿಹಾರ ಸಿಗದೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದರೆ ಇಲ್ಲಿನ ಸಂಸದರು ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ಚುನಾವಣಾ ಸಂದರ್ಭದಲ್ಲಿ ಜನ ಗೋ ಬ್ಯಾಕ್ ಶೋಭಾ ಎನ್ನುತ್ತಿದ್ದರು. ಆದರೆ ಮೂರು ಲಕ್ಷ ಅಂತರದಲ್ಲಿ ಗೆಲುವು ಸಾಧಿಸಿದರೂ ಅಬ್ಬಾಬ್ಬ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.  ಸರ್ಕಾರದ ಉಳುಕು, ವೈಫಲ್ಯ ಗೊತ್ತಾಗುತ್ತದೆ ಎಂದು ಮಾಧ್ಯಮಗಳನ್ನು ದೂರ ಇಟ್ಟಿದ್ದಾರೆ.

ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಂತೆ ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗವು ಪ್ರಮುಖವಾಗಿದೆ. ಇದನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಸ್ಪೀಕರ್ ಮತ್ತು ಸರ್ಕಾರ ಸೇರಿಯೇ ಮಾಧ್ಯಮವನ್ನು ದೂರ ಇಡುವ ಕೆಲಸವನ್ನು ಮಾಡಲಾಗಿದೆ ಎಂದು ಆರೋಪಿಸಿದರು.  ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಅವರದು ಸರ್ವಾಧಿಕಾರಿ ಮನೋಭಾವ. ಇದನ್ನೇ ಹಿಟ್ಲರ್ ಮಾಡುತ್ತಿದ್ದ ಇದನ್ನೇ ಇವರು ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ ಎಂದು ಹೇಳಿದರು.

ವಿಧಾನಮಂಡಲದ ಕಲಾಪ ಪಾರದರ್ಶಕವಾಗಿ ಇರಬೇಕು ಎನ್ನುವ ನಿಟ್ಟಿನಲ್ಲಿ ಛಾಯಾಗ್ರಾಹಕರು, ವಿಡಿಯೋ ಛಾಯಾಗ್ರಾಹಕರನ್ನು ಒಳಗಡೆ ಬಿಡಲಾಗಿತ್ತು. ಈಗ ಅವರನ್ನು ದೂರವಿಡಲಾಗಿದೆ. ಜನರನ್ನು ದೂರವಿಟ್ಟು ಏನು ಮಾಡಲಿಕ್ಕೆ ಆಗುವುದಿಲ್ಲ ಜನಪ್ರತಿನಿಧಿಗಳಾಗಿ ಆಯ್ಕೆಯಾಗುವುದು ನಾವು ವಿಧಾನಮಂಡಲದಲ್ಲಿ ಜನರ ಸಮಸ್ಯೆಯನ್ನು ಚರ್ಚೆ ಮಾಡಲಿಕ್ಕೆ ಹೊರತು ವಧು-ವರರ ಅನ್ವೇಷಣೆ ಮಾಡಲಿಕ್ಕೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮದವರನ್ನು ದೂರವಿಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬಜೆಟ್ ಅಧಿವೇಶನ 15 ದಿನಕ್ಕಿಂತ ಕಡಿಮೆ ಇರದಂತೆ ನಡೆಯಬೇಕು. ಅಲ್ಲಿ ವಿಸ್ತೃತ ಚರ್ಚೆಯಾಗಬೇಕು. ನಾವೇ ನಿಯಮಾವಳಿಗಳನ್ನು ರೂಪಿಸಿಕೊಂಡಿದ್ದೇವೆ. ಆದರೆ ಬಿಜೆಪಿ ಸರ್ಕಾರ ಎಲ್ಲದಕ್ಕೂ ವಿರುದ್ದವಾಗಿ ನಡೆದುಕೊಳ್ಳುತ್ತಿದೆ. ನಡೆದ ಮೂರು ದಿನದ ಅಧಿವೇಶನದಲ್ಲಿ ಒಂದೂವರೆ ದಿನ ನೆರೆ ಬಗ್ಗೆ ಚರ್ಚೆ ನಡೆಯಿತು. ಉಳಿದ ಒಂದೂವರೆ ದಿನದಲ್ಲಿ ಬಜೆಟ್ ಮೇಲೆ ಚರ್ಚೆ ನಡೆದಿದೆ ಎಂದರು.

ಸ್ಪೀಕರ್ ಅವರ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಇತಿಹಾಸದಲ್ಲೇ ಪ್ರತಿಪಕ್ಷದ ನಾಯಕರು ಚರ್ಚಿಸದಂತೆ ನಿಯಂತ್ರಿಸುವ ಕೆಲಸ ಮಾಡಿದ್ದಾರೆ. 1983ರಿಂದ ನಾನು ಸದನದಲ್ಲಿದ್ದೇನೆ. ಯಾರೂ ಕೂಡ ಪ್ರತಿಪಕ್ಷ ನಾಯಕರಿಗೆ ಸಮಯದ ಗಡುವು ನಿಗದಿ ಮಾಡಿಲ್ಲ. ಆದರೆ ಈ ಸ್ಪೀಕರ್ ಅವರು ಪ್ರತಿಪಕ್ಷದ ನಾಯಕರ ಚರ್ಚೆಗೆ ನಿಯಂತ್ರಣ ಹಾಕುತ್ತಾರೆ ಎಂದು ಹೇಳಿದರು.  ಕೇವಲ ಮೂರು ದಿನ ಅಧಿವೇಶನ ನಡೆಸಿದ್ದಾರೆ. ಇದೊಂದು ಸಾರಿ ಒಪ್ಪುತ್ತೇವೆ. ಮುಂದೆ ಇದೇ ರೀತಿ ಮಾಡಿದರೆ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

Facebook Comments

Sri Raghav

Admin