ರಾಜ್ಯ ಕಾಂಗ್ರೆಸ್‌ನಲ್ಲಿ ಕಚ್ಚಾಟ, ಸಿದ್ದರಾಮಯ್ಯ ವಿಪಕ್ಷ ನಾಯಕನ ಕನಸಿಗೆ ಅಡ್ಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.27- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಕಾಂಗ್ರೆಸಿಗರ ಕೆಂಗಣ್ಣಿಗೆ ಗುರಿಯಾಗಿರುವುದರಿಂದ ವಿಪಕ್ಷ ನಾಯಕನ ಆಯ್ಕೆ ಮತ್ತಷ್ಟು ಜಟಿಲಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಎರಡು ತಿಂಗಳಿನಿಂದಲೂ ವಿಪಕ್ಷ ನಾಯಕನ ಆಯ್ಕೆಯಾಗದೆ ವಿಳಂಬವಾಗಿದೆ.

ನಿನ್ನೆ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ದೆಹಲಿ ಮಟ್ಟದಲ್ಲಿ ಮತ್ತಷ್ಟು ಲಾಬಿಗಳು ಜೋರಾಗಿದ್ದು, ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರೇ ವಿಪಕ್ಷ ನಾಯಕನಾಗಿ ಆಯ್ಕೆಗೊಳ್ಳಲಿದ್ದಾರೆ ಎಂಬ ನಿರೀಕ್ಷೆಗಳಿದ್ದವು. ಇತ್ತೀಚೆಗೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾರಣರಾದ ಅತೃಪ್ತ ಶಾಸಕರ ಪೈಕಿ ಬಹಳಷ್ಟು ಮಂದಿ ಸಿದ್ದು ಬೆಂಬಲಿಗರೇ ಇದ್ದದ್ದು ಹೈಕಮಾಂಡ್‍ನ ಕೆಂಗಣ್ಣಿಗೆ ಗುರಿಯಾಗಿದೆ.

ದೇಶದಾದ್ಯಂತ ಅಧಿಕಾರ ಕಳೆದುಕೊಂಡು ಸೊರಗಿರುವ ಕಾಂಗ್ರೆಸ್‍ಗೆ ಮರಳುಗಾಡಿನ ಓಯಸೀಸ್‍ನಂತಿತ್ತು. ಆದರೆ, ಕೆಲವು ಅತೃಪ್ತ ಶಾಸಕರಿಂದಾಗಿ ಕರ್ನಾಟಕದಲ್ಲೂ ಸರ್ಕಾರ ಕಳೆದುಕೊಂಡು ಕಾಂಗ್ರೆಸ್ ಚಡಪಡಿಸುವಂತಾಗಿದೆ.

ಸರ್ಕಾರ ರಕ್ಷಣೆಗೆ ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್ ಅವರು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದರು. ಆದರೆ, ಅಧಿಕಾರ ಅನುಭವಿಸಿದ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅವರು ಹೆಚ್ಚಿನ ಶ್ರಮ ತೆಗೆದುಕೊಳ್ಳದೆ ನೆಪಮಾತ್ರಕ್ಕೆ ಅತೃಪ್ತರನ್ನು ವಾಪಸ್ ಕರೆತರುವ ಪ್ರಯತ್ನ ನಡೆಸಿದ್ದರು.

ಅಂತೂ ಇಂತೂ ಸಮ್ಮಿಶ್ರ ಸರ್ಕಾರ ಪತನವಾಯಿತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿಪಕ್ಷ ನಾಯಕ ಸ್ಥಾನ ಸಿಕ್ಕೇ ಬಿಡ್ತು ಎಂದು ಸಿದ್ದರಾಮಯ್ಯ ನಿರೀಕ್ಷೆಯಲ್ಲಿರುವಾಗ ಹೈ ಕಮಾಂಡ್ ದೊಡ್ಡ ಶಾಕ್ ನೀಡಿದೆ.

ಎರಡು ತಿಂಗಳಾದರೂ ಇನ್ನೂ ವಿಪಕ್ಷ ನಾಯಕನ ಘೋಷಣೆ ಮಾಡಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ದೆಹಲಿಗೆ ತೆರಳಿ ಮೂರು ದಿನ ಕಾದು ಕುಳಿತರೂ ಸೋನಿಯಾಗಾಂಧಿ ಅವರ ಭೇಟಿ ಸಾಧ್ಯವಾಗಿಲ್ಲ. ಎ.ಕೆ.ಆ್ಯಂಟೋನಿ, ಕೆ.ಸಿ.ವೇಣುಗೋಪಾಲ್, ಅಹಮ್ಮದ್ ಪಟೇಲ್ ಸೇರಿದಂತೆ ಕೆಲವು ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿ ವಾಪಸ್ ಬಂದಿದ್ದಾರೆ.

ಕಾಂಗ್ರೆಸ್ ತಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅರ್ಥವಾಗುತ್ತಿದ್ದಂತೆ ಚುರುಕಾಗಿರುವ ಸಿದ್ದರಾಮಯ್ಯ ಪ್ರತಿ ದಿನ ಕೆಪಿಸಿಸಿ ಕಚೇರಿಗೆ ಭೇಟಿ ನೀಡಲು ಆರಂಭಿಸಿದ್ದಾರೆ. ಒಂದಿಲ್ಲಾ ಒಂದು ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ, ಇನ್ನೂ ಕೂಡ ವಿವಾದಗಳು ಬೆನ್ನತ್ತಿವೆ.

ಸಭೆಗೆ ಹಿರಿಯ ಕಾಂಗ್ರೆಸಿಗರು ಹಾಗೂ ಮೂಲ ನಿವಾಸಿಗಳಿಗೆ ಸರಿಯಾದ ಆಹ್ವಾನ ಸಿಗುತ್ತಿಲ್ಲ. ಸಿದ್ದರಾಮಯ್ಯ ಅವರ ಬೆಂಬಲಿಗರೇ ಸಭೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ.

ಉಪಚುನಾವಣೆ ಘೋಷಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಡೆದ ಸಭೆಗಳಲ್ಲಿ ಜಿಲ್ಲೆಯ ಎಲ್ಲಾ ಮುಖಂಡರ ಜತೆ ಚರ್ಚಿಸದೆ ಆಯ್ದ ನಾಯಕರ ಜತೆ ಮಾತ್ರ ಮಾತುಕತೆ ನಡೆಸಲಾಗಿತ್ತು. ಈ ಎಲ್ಲಾ ಅಂಶಗಳು ಹಿರಿಯ ಕಾಂಗ್ರೆಸಿಗರನ್ನು ಕೆರಳಿಸಿದ್ದು, ಸಿದ್ದರಾಮಯ್ಯ ಅವರ ಪದಗ್ರಹಣಕ್ಕೆ ಅಡ್ಡಿಯಾಗುವ ಪ್ರಯತ್ನ ನಡೆಸುತ್ತಿದ್ದಾರೆ.

ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಿ ಪರ್ಯಾಯ ನಾಯಕತ್ವಕ್ಕೆ ಅವಕಾಶ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ವಿಪಕ್ಷ ನಾಯಕನ ಸ್ಥಾನಕ್ಕೆ ಎಚ್.ಕೆ.ಪಾಟೀಲ್, ಕೃಷ್ಣಬೈರೇಗೌಡ ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಪರಮೇಶ್ವರ್, ರಮೇಶ್‍ಕುಮಾರ್ ಅವರುಗಳೂ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಹೈಕಮಾಂಡ್‍ನಿಂದ ಅವರಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಂತೆ ಇಲ್ಲ.

ಡಿ.ಕೆ.ಶಿವಕುಮಾರ್ ನ್ಯಾಯಾಂಗ ಬಂಧನದಲ್ಲಿರುವುದರಿಂದ ಅವರ ಜಾಮೀನು ಅರ್ಜಿ ಕುರಿತು ವಿಚಾರಣೆಯ ಬಗ್ಗೆ ಹೈಕಮಾಂಡ್ ತೀವ್ರ ಕುತೂಹಲ ತೋರಿಸಿದೆ. ಒಂದು ವೇಳೆ ಡಿ.ಕೆ.ಶಿವಕುಮಾರ ಅವರಿಗೆ ಜಾಮೀನು ಸಿಕ್ಕಿ ಹೊರ ಬಂದರೆ, ಅವರು ಒಪ್ಪಿದರೆ ವಿಪಕ್ಷ ನಾಯಕನನ್ನಾಗಿ ಘೋಷಣೆ ಮಾಡಲು ಹೈಕಮಾಂಡ್ ಆಸಕ್ತಿ ಹೊಂದಿದೆ ಎಂದು ಹೇಳಲಾಗಿದೆ.

Facebook Comments

Sri Raghav

Admin