ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.27- ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾಗುವುದು ಬಹುತೇಕ ಖಚಿತವಾಗಿದ್ದು, ನಾಳೆ ಸಂಜೆಯೊಳಗಾಗಿ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಅಧಿಕೃತ ಸೂಚನೆ ನೀಡುವ ನಿರೀಕ್ಷೆಗಳಿವೆ.

ಸೋಮವಾರ ವಿಧಾನಮಂಡಲದ ಅಧಿವೇಶನ ನಡೆಯುವುದರಿಂದ ಪ್ರತಿಪಕ್ಷದ ನಾಯಕನ ನೇಮಕಾತಿ ತಕ್ಷಣವೇ ಆಗಬೇಕಿದೆ. ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಮತ್ತು ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿರುವ ಸಿದ್ದರಾಮಯ್ಯ ಅವರು ಈ ಅವಧಿಗೂ ವಿರೋಧ ಪಕ್ಷದ ನಾಯಕರಾಗುವ ನಿರೀಕ್ಷೆಗಳಿವೆ.

ಬಹುತೇಕ ಶಾಸಕರು ಸಿದ್ದರಾಮಯ್ಯ ಅವರ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಕೂಡ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಮಾಡದೆ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಅಂಕಿತ ಹಾಕುವ ಸಾಧ್ಯತೆಗಳಿವೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಹಿರಿಯ ನಾಯಕ ಎಚ್.ಕೆ.ಪಾಟೀಲ್ ಸೇರಿದಂತೆ ಇನ್ನೂ ಕೆಲವರು ವಿಪಕ್ಷ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಉನ್ನತ ಮೂಲಗಳ ಪ್ರಕಾರ ಹೈಕಮಾಂಡ್ ಸಿದ್ದರಾಮಯ್ಯ ಅವರ ಪರವಾಗಿ ಒಲವು ತೋರಿಸಿದೆ ಎನ್ನಲಾಗಿದೆ.

ಇಂದು ಸಂಜೆ ಅಥವಾ ನಾಳೆಯೊಳಗಾಗಿ ಹೈಕಮಾಂಡ್ ಸೂಚನೆ ಮೇರೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸ್ಪೀಕರ್ ಅವರಿಗೆ ಪ್ರತಿಪಕ್ಷದ ನಾಯಕನ ಆಯ್ಕೆ ಬಗ್ಗೆ ಪತ್ರ ನೀಡಲಿದ್ದಾರೆ.

Facebook Comments

Sri Raghav

Admin