ಕೊನೆಗೂ 13 ವರ್ಷದ ರಾಜಕೀಯ ಸೇಡು ತೀರಿಸಿಕೊಂಡರೇ ಸಿದ್ದರಾಮಯ್ಯ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ಹನ್ನೆರಡು ವರ್ಷ ಜಿದ್ದು ಸಾಧಿಸುವ ನಾಗರ ಹಾವು ಆನಂತರ ದ್ವೇಷ ಮರೆತುಬಿಡುತ್ತದೆ ಎಂಬ ಮಾತಿದೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 13 ವರ್ಷ ಕಳೆದರೂ ತಮ್ಮ ದ್ವೇಷವನ್ನು ಮರೆಯದೆ ಕೊನೆಗೂ ತಮ್ಮ ಹಠ ಸಾಧಿಸಿಕೊಂಡಿದ್ದಾರೆ.

ತಮ್ಮನ್ನು ಜೆಡಿಎಸ್‍ನಿಂದ ಹೊರಹಾಕಿದ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸುವ ಮೂಲಕ ತಮ್ಮ ರಾಜಕೀಯ ಸೇಡನ್ನು ತೀರಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಕುಟುಂಬಕ್ಕೆ ಹಾಸನ, ಮಂಡ್ಯ ಮತ್ತು ತುಮಕೂರು ಅತ್ಯಂತ ಮಹತ್ವದ ಕ್ಷೇತ್ರಗಳಾಗಿದ್ದವು. ಹಾಸನದಲ್ಲಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದರು.

ಸಿದ್ದರಾಮಯ್ಯ ಮತ್ತು ರೇವಣ್ಣ ನಡುವಿನ ಸಂಬಂಧ ಅತ್ಯಂತ ಆತ್ಮೀಯವಾಗಿದ್ದು, ಆ ಕಾರಣಕ್ಕಾಗಿಯೇ ಖುದ್ದಾಗಿ ಹಾಸನದಲ್ಲಿ ಪ್ರಚಾರ ಮಾಡಿ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಿದ್ದರು.

ತುಮಕೂರು ಮತ್ತು ಮಂಡ್ಯ ಲೋಕಸಭೆ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯನವರ ಪ್ರಚಾರದ ವೈಖರಿ ಕಾಟಾಚಾರಕ್ಕೆ ಎಂಬಂತಿತ್ತು. ಮಂಡ್ಯದಲ್ಲಂತೂ ಸಿದ್ದರಾಮಯ್ಯನವರ ಬೆಂಬಲಿಗರೆಲ್ಲ ಬಹಿರಂಗವಾಗಿಯೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ನಡೆಸುವ ಮೂಲಕ ಮೈತ್ರಿಗೆ ಸಡ್ಡು ಹೊಡೆದರು.

ತಮ್ಮ ಕಣ್ಣೆದುರಿಗೇ ಎಲ್ಲವೂ ನಡೆಯುತ್ತಿದ್ದರೂ ಸಿದ್ದರಾಮಯ್ಯ ಯಾವುದನ್ನೂ ತಹಬದಿಗೆ ತರದೆ ಅಸಹಾಯಕರಂತೆ ವರ್ತಿಸಿದರು. ತತ್ಪರಿಣಾಮವಾಗಿ ಕುಮಾರಸ್ವಾಮಿ ಅವರ ಪುತ್ರ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಸೋಲು ಕಂಡರು.

ಇನ್ನು ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ಸಿದ್ದರಾಮಯ್ಯನವರ ಬೆಂಬಲಿಗರೇ ಕಾರಣ ಎಂಬ ಚರ್ಚೆಗಳು ಆರಂಭಗೊಂಡಿವೆ. ಮಧುಗಿರಿಯ ಕೆ.ಎನ್.ರಾಜಣ್ಣ ಸೇರಿದಂತೆ ಜಿಲ್ಲೆಯ ಪ್ರಭಾವಿ ನಾಯಕರುಗಳು ಪರೋಕ್ಷವಾಗಿ ಮೈತ್ರಿ ಅಭ್ಯರ್ಥಿ ದೇವೇಗೌಡರ ವಿರುದ್ಧ ಕೆಲಸ ಮಾಡಿಸಿದ್ದರು ಎಂಬ ಆರೋಪವಿದೆ.

ದೇವೇಗೌಡರನ್ನು ಗೆಲ್ಲಿಸಿಕೊಳ್ಳಲು ಪರಮೇಶ್ವರ್ ಟೊಂಕಕಟ್ಟಿ ನಿಂತಿದ್ದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ತುಮಕೂರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ವಲಯ ಅಂತರ್ಮುಖಿಯಾಗಿದ್ದು, ಬಹಳಷ್ಟು ಚುನಾವಣೆಯಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.  ಈ ಚುನಾವಣೆಯಲ್ಲೂ ಸಿದ್ದರಾಮಯ್ಯ ಅವರ ಗುಪ್ತ ಸಂದೇಶ ಸಾಕಷ್ಟು ಪರಿಣಾಮ ಬೀರಿದ್ದು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತಾಗಿದೆ.

ಒಂದೆಡೆ ತಮ್ಮ ರಾಜಕೀಯ ವಿರೋಧಿಯಾದ ದೇವೇಗೌಡರನ್ನು ಸೋಲಿಸುವುದು, ಮತ್ತೊಂದು ಕಡೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಮುಖಭಂಗ ಉಂಟುಮಾಡಿ ಕಾಂಗ್ರೆಸ್‍ನಲ್ಲಿ ತಾವೇ ಅದ್ವಿತೀಯ ನಾಯಕರು ಎಂದು ಸಾಬೀತುಪಡಿಸುವುದನ್ನು ಸಿದ್ದರಾಮಯ್ಯ ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ.

ತಮ್ಮ ಆಪ್ತರಾಗಿದ್ದ ಉಮೇಶ್ ಜಾಧವ್ ಅವರನ್ನು ಬಿಜೆಪಿಗೆ ಹೋಗಲು ಬಿಟ್ಟು ಖರ್ಗೆ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವಂತೆ ಮಾಡುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿದ್ದರಾಮಯ್ಯ ಮನೆ ಸೇರಿಕೊಳ್ಳುವಂತೆ ಮಾಡಿದ್ದಾರೆ.  ಈ ಮೂಲಕ ಸಿದ್ದರಾಮಯ್ಯ ಅವರ ರಾಜತಾಂತ್ರಿಕತೆ ಮತ್ತೊಮ್ಮೆ ಯಶಸ್ವಿಯಾಗಿದೆ. ರಾಜಕೀಯ ಸೇಡೂ ತೀರಿದಂತಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin