ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರೋಡ್ ಶೋ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.27- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಡ್ ಶೋ ಮೂಲಕ ಬಿರುಸಿನ ಪ್ರಚಾರ ನಡೆಸಿದರು. ಸಿದ್ದರಾಮಯ್ಯ ಅವರು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಿನ ಪ್ರಚಾರ ನಡೆಸಿದ್ದರು. ಅನಂತರ ನೆರೆ ಪೀಡಿತ ಪ್ರದೇಶಗಳಾದ ಕಲ್ಬುರ್ಗಿ ಹಾಗೂ ಇತರ ಭಾಗಗಳಿಗೆ ಭೇಟಿ ನೀಡಿ ಅಧ್ಯಯನದಲ್ಲಿ ತೊಡಗಿದ್ದರು.

ರಾಜರಾಜೇಶ್ವರಿನಗರಕ್ಕೆ ಸಿದ್ದರಾಮಯ್ಯ ಬರದೇ ಇರುವ ಬಗ್ಗೆ ಚರ್ಚೆಗಳು ನಡೆದಿದ್ದವು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರು ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಎಚ್.ಎಂ.ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕರಾದ ಸೌಮ್ಯಾರೆಡ್ಡಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕ ನಾಯಕರು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದರು.

ಪ್ರಮುಖ ನಾಯಕರ ಪೈಕಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ್‍ಖಂಡ್ರೆ ಅವರು ಉಪಚುನಾವಣೆ ನಡೆಯುತ್ತಿರುವ ಶಿರಾ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ತಲೆ ಹಾಕಿರಲಿಲ್ಲ. ಸಿದ್ದರಾಮಯ್ಯ ಅವರು ಶಿರಾ ಕ್ಷೇತ್ರದ ಪ್ರಚಾರದಲ್ಲಿ ಭಾಗವಹಿಸಿದ್ದರಾದರೂ ಆರ್.ಆರ್.ನಗರದಲ್ಲಿ ಭಾಗವಹಿಸಿರಲಿಲ್ಲ. ಇಂದು ಬೆಳಗ್ಗೆ 11.30ರಿಂದ ಜೆ.ಪಿ.ವಾರ್ಡ್‍ನ ಬೋವಿ ಕಾಲೋನಿಯಲ್ಲಿ ರೋಡ್ ಶೋ ಮಾಡುವ ಮೂಲಕ ಪ್ರಚಾರ ಮಾಡಿದರು.

ಮೋಹನ್‍ಕುಮಾರ್ ನಗರ, ಚೌಡೇಶ್ವರಿನಗರ ದೇವಸ್ಥಾನ, ಎಚ್.ಎಂ.ಟಿ.ಲೇಔಟ್, ಯಶವಂತಪುರ ವಾರ್ಡ್‍ನ ದೊಡ್ಡ ಮಸೀದಿ, ರೈಲ್ವೆ ಸ್ಟೇಷನ್ ಸರ್ಕಲ್, ಬಿ.ಕೆ.ನಗರ ಒಂದನೇ ಮುಖ್ಯರಸ್ತೆ, ರಘು ಮೆಡಿಕಲ್ ಸ್ಟೋರ್ಸ್, ಸಿಎಲ್‍ಆರ್ ಸ್ಕೂಲ್ ರಸ್ತೆ, ಪಂಪಾನಗರ ಪ್ರದೇಶಗಳಲ್ಲಿ ರೋಡ್ ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರವಾಗಿ ಪ್ರಚಾರ ನಡೆಸಿದರು.

ಇದಕ್ಕೂ ಮೊದಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಮಾಜಿ ಸಚಿವ ಚಲುವರಾಯಸ್ವಾಮಿ, ಶಾಸಕ ಡಾ.ರಂಗನಾಥ್ ಅವರು ಬೆಳಗ್ಗೆ 7.30ರಿಂದ ನಂದಿನಿಲೇಔಟ್‍ನ ಗಣಪತಿ ದೇವಸ್ಥಾನ, ಲಕ್ಷ್ಮೀದೇವಿನಗರದ ಅಣ್ಣಮ್ಮ ಸರ್ಕಲ್, ಆಂಜನೇಯ ದೇವಸ್ಥಾನ, ಆರ್‍ವಿ ಸ್ಕೂಲ್, ವಿಧಾನಸೌಧ ಲೇಔಟ್, ಕೆಂಪಮ್ಮ ಬಡಾವಣೆ, ಜೈ ಭುವನೇಶ್ವರಿನಗರ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.

ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಬಹಳಷ್ಟು ನಾಯಕರು ಈಗಾಗಲೇ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದು, ಸ್ಟಾರ್ ಪ್ರಚಾರಕರು ಕ್ಷೇತ್ರಕ್ಕೆ ಬಂದು ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರು ಬಹುತೇಕ ಕ್ಷೇತ್ರದಲ್ಲಿ ಟಿಕಾಣಿ ಹೂಡಿದ್ದಾರೆ.

Facebook Comments