3ನೇ ಪರೀಕ್ಷೆಯಲ್ಲೂ ಸಿದ್ದರಾಮಯ್ಯಗೆ ಕೊರೋನಾ ನೆಗೆಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.13- ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮೂರನೆ ಬಾರಿಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ವರದಿ ನೆಗೆಟಿವ್ ಬಂದಿದೆ.

ಆಗಸ್ಟ್ 4ರಂದು ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕಿನಿಂದ ಗುಣಮುಖರಾಗಿರುವ ಸಿದ್ದರಾಮಯ್ಯ ಅವರು ಮೊದಲಿನಂತೆ ಸದೃಢ ಆರೋಗ್ಯ ಹೊಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈಗಾಗಲೇ ಎರಡು ಪರೀಕ್ಷೆಗಳನ್ನು ಮಾಡಲಾಗಿದ್ದು, ಸೋಂಕು ನಿವಾರಣೆಯಾಗಿರುವುದು ಖಚಿತವಾಗಿದೆ. ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಮುಂಜಾಗ್ರತೆಯಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಲಾಗಿದೆ.

ಅಲ್ಲೂ ಕೊರೊನಾ ನೆಗೆಟಿವ್ ಬಂದಿದೆ. ಹಾಗಾಗಿ ಸಿದ್ದರಾಮಯ್ಯ ಅವರು ಆಸ್ಪತ್ರೆಯಿಂದ ಮನೆಗೆ ಹೋಗಲು ಅಡ್ಡಿ ಇಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ದೃಢ ಪಡಿಸಿದ್ದಾರೆ.

ಆದರೆ ಸಿದ್ದರಾಮಯ್ಯ ಮನೆಗೆ ಮರಳಿದರೆ ಮತ್ತೆ ಜನ ಜಂಗುಳಿ ಸೇರುತ್ತದೆ, ನಿನ್ನೆಯಷ್ಟೆ ಹುಟ್ಟು ಹಬ್ಬ ಆಚರಿಸಿಕೊಂಡ ಅವರಿಗೆ ತಡವಾಗಿಯಾದರೂ ಶುಭಾಷಯ ಹೇಳುವ ನೆಪದಲ್ಲಿ ಸಾವಿರಾರು ಮಂದಿ ಬರುತ್ತಾರೆ.

ಮತ್ತೆ ಸೋಂಕು ತಗಲುವ ಸಾಧ್ಯತೆ ಇದೆ. ಹಾಗಾಗಿ ಇನ್ನೂ ಒಂದೆರಡು ದಿನ ಆಸ್ಪತ್ರೆಯಲ್ಲೆ ಇದ್ದು ವಿಶ್ರಾಂತಿ ಪಡೆಯುವಂತೆ ಆಪ್ತ ವೈದ್ಯರು ಸಲಹೆ ನೀಡಿದ್ದಾರೆ.

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗಳಲ್ಲಿ ನಡೆದಿರುವ ಗುಂಪು ಗಲಾಟೆ ಮತ್ತು ರಾಜ್ಯಾದ್ಯಂತ ಭಾರಿ ಮಳೆಯಿಂದ ಉಂಟಾಗಿರುವ ನೆರೆ ಪರಿಸ್ಥಿತಿ, ಕೊರೊನಾ ಸಂಕಷ್ಟಗಳ ಕುರಿತಂತೆ ಸರ್ಕಾರವನ್ನು ಎಚ್ಚರಿಸುವುದು ಜವಾಬ್ದಾರಿಯುತ ಪ್ರತಿಪಕ್ಷದ ಜವಾಬ್ದಾರಿ.

ಹಾಗಾಗಿ ನಾನು ಇಲ್ಲಿದ್ದು ವಿಶ್ರಾಂತಿ ಪಡೆಯುವುದಿಲ್ಲ. ನನ್ನನ್ನು ಮನೆಗೆ ಕಳುಹಿಸಿ ಎಂದು ವೈದ್ಯರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮನವಿಯನ್ನು ಪುರಸ್ಕರಿಸಿ ವೈದ್ಯರು ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸುವ ಸಾಧ್ಯತೆ ಇದೆ.

Facebook Comments

Sri Raghav

Admin