ಸಿದ್ದರಾಮಯ್ಯನವರಿಗೆ ಕೊರೋನಾ, ಸಂಪರ್ಕದಲ್ಲಿದ್ದವರಿಗೆ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.4- ಕಾಂಗ್ರೆಸ್‍ನ ದೈತ್ಯಶಕ್ತಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಕೊರೊನಾ ಸೋಂಕು ತಗುಲಿದ್ದು, ನಿನ್ನೆ ರಾತ್ರಿಯೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದಿನ ನಿತ್ಯ ಸಾರ್ವಜನಿಕರನ್ನು ಭೇಟಿ ಮಾಡುತ್ತಿದ್ದ, ಪಕ್ಷದ ಸಭೆಗಳಲ್ಲಿ ಭಾಗವಹಿಸುವ ಮೂಲಕ ಸಕ್ರಿಯರಾಗಿದ್ದ ಸಿದ್ದರಾಮಯ್ಯ ಅವರಿಗೆ ಯಾವುದೋ ಮೂಲದಿಂದ ಸೋಂಕು ತಗುಲಿದೆ. ನಿನ್ನೆ ರಾತ್ರಿ ಖುದ್ದಾಗಿ ಸಿದ್ದರಾಮಯ್ಯ ಅವರ ಟ್ವಿಟರ್ ಖಾತೆಯಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗಿದೆ.

ನನ್ನ ಕೊರೊನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಳೆದ ಮೂರು ದಿನಗಳ ಹಿಂದೆ ಸೋಂಕಿರುವುದು ಖಚಿತವಾಗಿತ್ತು. ಅವರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅದೇ ಆಸ್ಪತ್ರೆಗೆ ದಾಖಲಾಗಿದ್ದು, ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

71 ವರ್ಷದ ಸಿದ್ದರಾಮಯ್ಯ ಉತ್ತಮ ಆರೋಗ್ಯ ಹೊಂದಿದ್ದು, ಸದಾ ಕ್ರೀಯಾಶೀಲರಾಗಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ಸುಮಾರು ಒಂದು ವಾರ ಕಾಲ ಉಳಿದು ವಿಶ್ರಾಂತಿ ಪಡೆದಿದ್ದರು.

ಅನಂತರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೊರೊನಾ ಭ್ರಷ್ಟಚಾರ ಕುರಿತು ಮಾತನಾಡುವ ಕಾರ್ಯಕ್ರಮ ನಿಗದಿಯಾಗಿತ್ತು.

ಬೆಂಗಳೂರಿನಲ್ಲಿ ಆದಷ್ಟು ಜನರಿಂದ ದೂರ ಇರಲು ಪ್ರಯತ್ನಿಸಿದ್ದರು, ಅಭಿಮಾನಿಗಳು, ಕಾರ್ಯಕರ್ತರು, ಪಕ್ಷದ ಮುಖಂಡರು ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಇರಲು ಬಿಡುತ್ತಿರಲಿಲ್ಲ. ಪ್ರತಿನಿತ್ಯ ಒಂದಲ್ಲ ಒಂದು ಚಟುವಟಿಕೆಯಲ್ಲಿ ಭಾಗವಹಿಸುತ್ತಲೇ ಇದ್ದರು.

ಕೊರೊನ ಸಾಂಕ್ರಾಮಿಕತೆ ವ್ಯಾಪಕವಾದ ಹಿನ್ನೆಲೆಯಲ್ಲಿ ಕಳೆದೆರಡು ಮೂರು ದಿನಗಳಿಂದ ಮನೆಯಲ್ಲೇ ಉಳಿದು ಮೊಮ್ಮಕ್ಕಳ ಜೊತೆ ಚೆಸ್ ಆಡುತ್ತಾ ಕಾಲ ಕಳೆದಿದ್ದರು. ಆದರೂ ಕೊರೊನಾ ಯಾವುದೋ ಮೂಲದಿಂದ ಸಿದ್ದರಾಮಯ್ಯ ಅವರಿಗೆ ಅಂಟಿಕೊಂಡಿದೆ.

ಸಿದ್ದರಾಮಯ್ಯ ಅವರಿಗೆ ಸೋಂಕು ತಗುಲಿರುವುದು ಕಾಂಗ್ರೆಸ್‍ನಲ್ಲಿ ದಿಗ್ಭ್ರಮೆ ಮೂಡಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡುರಾವ್ ಸೇರಿದಂತೆ ಎಲ್ಲರೂ ಆತಂಕ ವ್ಯಕ್ತ ಪಡಿಸಿದ್ದು, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ದಿನೇಶ್ ಗುಂಡುರಾವ್ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಕೊರೋನಾ ಪಾಸಿಟಿವ್ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಗಿದೆ.

ವಿರೋಧ ಪಕ್ಷದ ನಾಯಕರಾಗಿ ರಚನಾತ್ಮಕ ಕಾರ್ಯಗಳಿಂದ ಸದಾ ಕ್ರಿಯಾಶೀಲರಾಗಿರುವ ಸಿದ್ದರಾಮಯ್ಯ ಅವರು ಆದಷ್ಟು ಬೇಗ ಕೋವಿಡ್‍ನಿಂದ ಗುಣಮುಖರಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ. ಆಸ್ಪತ್ರೆಯಲ್ಲಿರುವ ಸಿದ್ದರಾಮಯ್ಯ ಅವರು ಆರೋಗ್ಯದಿಂದ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin