ಸಿಎಂ ಭಜನೆ ಮಾಡೋದು ಬಿಟ್ಟು ಕೇಂದ್ರದಿಂದ ರಾಜ್ಯದ ಜಿಎಸ್‍ಟಿ ಪಾಲು ತರಲಿ : ಸಿದ್ದು ಸಂವಾಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಡಿ.8- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಉಳಿಸಿಕೊಳ್ಳಲು ಭಜನೆ ಮಾಡುತ್ತಾ ಕೂರುವ ಬದಲು ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಜಿಎಸ್‍ಟಿಯಿಂದ ರಾಜ್ಯಕ್ಕೆ ಬರಬೇಕಾಗಿದ್ದ ಬಾಕಿಯನ್ನು ಬಿಡುಗಡೆ ಮಾಡಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್‍ಟಿಯಿಂದ ರಾಜ್ಯಕ್ಕೆ 5600 ಕೋಟಿ ರೂ. ಹಣ ಬರಬೇಕಿತ್ತು. ಇದು ಯಾವುದೇ ಅನುದಾನ ಅಲ್ಲ. ರಾಜ್ಯದ ಪಾಲಿನ ಹಣ. ಕೇಂದ್ರ ಸರ್ಕಾರ ಈವರೆಗೂ ಬಿಡುಗಡೆ ಮಾಡಿಲ್ಲ. ಯಡಿಯೂರಪ್ಪ ಅವರು ಸರ್ಕಾರ ಉಳಿಸಿಕೊಳ್ಳುವ ಭಜನೆ ಮಾಡುತ್ತಿದ್ದಾರೆ. ದೆಹಲಿಗೆ ಹೋಗಿ ಪ್ರಧಾನಮಂತ್ರಿ ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಒತ್ತಡ ತರಬೇಕಿತ್ತು ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಜಿಎಸ್‍ಟಿ ಹಣ ಸಂಗ್ರಹವಾಗಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯದ ಪಾಲನ್ನು ಬಿಡುಗಡೆ ಮಾಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಬಿಡುಗಡೆ ಮಾಡದೇ ಹೋದರೆ ರಾಜ್ಯದ ಜನರ ಕಷ್ಟ ಅಧೋಗತಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದವರು ಬಹಳಷ್ಟು ಜನ ಸುಸ್ತಾಗಿದ್ದಾರೆ. ಉಪ ಚುನಾವಣೆ ನಂತರ ಕಾಂಗ್ರೆಸ್ ಇಲ್ಲವಾಗುತ್ತದೆ ಎಂದು ಹೇಳುತ್ತಿರುವ ಸಚಿವ ಜಗದೀಶ್ ಶೆಟ್ಟರ್ ಭ್ರಮೆಯಲ್ಲಿದ್ದಾರೆ.

ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ಉಪ ಚುನಾವಣೆಗಳ ಫಲಿತಾಂಶದ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಅವುಗಳ ಮೇಲೆ ನನಗೆ ನಂಬಿಕೆ ಇಲ್ಲ. ಮತದಾನ ರಹಸ್ಯವಾಗಿ ನಡೆಯುವ ಪ್ರಕ್ರಿಯೆ. ಸಾಮಾನ್ಯವಾಗಿ ಸಮೀಕ್ಷೆ ನಡೆಸುವವರು ಅಲ್ಲೊಬ್ಬರು, ಇಲ್ಲೊಬ್ಬರನು ಮಾತನಾಡಿಸಿ ನಿರ್ಧಾರ ಮಾಡುತ್ತಾರೆ. ಆಯ್ದ ಜನರ ಅಭಿಪ್ರಾಯಗಳೇ ಫಲಿತಾಂಶ ಆಗುವುದಿಲ್ಲ.

ನಾಳೆ ಮತ ಎಣಿಕೆ ನಡೆಯಲಿದೆ. ಎಲ್ಲವೂ ತಿಳಿದು ಬರಲಿದೆ. ಆ ವರೆಗೂ ತಾಳ್ಮೆಯಿಂದ ಇರೋಣ ಎಂದರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನೆರೆ ಸಂತ್ರಸ್ತರ ವಿಷಯದಲ್ಲಿ ನಿರ್ಲಕ್ಷ್ಯ ತೊರುತ್ತಿದೆ. 10 ಸಾವಿರ ರೂ. ನೆರವು ಕೊಟ್ಟು ಕೈ ತೊಳೆದುಕೊಂಡಿದೆ. ಅದು ಕೂಡ ಕೆಲವರಿಗೆ ಸಿಕ್ಕಿಲ್ಲ. ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ. ಆರ್ಥಿಕ ಸಮಸ್ಯೆ ಇದೆ. ಹೀಗಾಗಿ ಪರಿಹಾರ ಕೊಡಲು ಆಗುತ್ತಿಲ್ಲ.

ಜನರನ್ನು ದಾರಿ ತಪ್ಪಿಸಲು ಬೇರೆ ಬೇರೆ ವಿಷಯಗಳನ್ನು ಪ್ರಸ್ತಾಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಬಿಜೆಪಿಯವರು ಪದೇ ಪದೇ ನನ್ನನ್ನೇ ಗುರಿಯಾಗಿಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ. ನನ್ನನ್ನು ಕಂಡರೆ ಅವರಿಗೆ ಭಯ ಇದೆ ಎಂದು ಹೇಳಿದರು.

Facebook Comments

Sri Raghav

Admin