ಟ್ವಿಟ್ಟರ್‌ನಲ್ಲಿ ಸಿದ್ದರಾಮಯ್ಯ-ಸಿ.ಟಿ.ರವಿ ನಡುವೆ ಕೋಳಿ ಜಗಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.19- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸಿ.ಟಿ.ರವಿ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಕೋಳಿ ಜಗಳವಾಗಿದೆ. ಟ್ವಿಟರ್‍ನಲ್ಲಿ ಆಗಾಗ್ಗೆ ಸಿದ್ದರಾಮಯ್ಯ ಮತ್ತು ಸಿ.ಟಿ.ರವಿ ನಡುವೆ ಕಾಲೆಳೆಯುವ ವಿಚಾರಿಸುವ ಪೋಸ್ಟ್ ಗಳು ಇತ್ತೀಚೆಗೆ ಸಾಮಾನ್ಯವಾಗಿದೆ.

ಸಚಿವ ಸಿ.ಟಿ.ರವಿ ಅವರು ಪ್ರೀತಿಯ ಸಿದ್ದರಾಮಯ್ಯನವರೇ ರಾಜಸ್ಥಾನದಲ್ಲಿ ಆರು ಜನ ಬಿಎಸ್‍ಪಿ ಶಾಸಕರು ತಮ್ಮ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇದನ್ನು ನಿಮ್ಮ ಪ್ರಕಾರ ಆಪರೇಷನ್ ನೀಚ ಹಸ್ತ ಎಂದು ಕರೆಯಬೇಕು.

ರಾಜಸ್ಥಾನದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆ ವಿರುದ್ಧ ನೀವು ಪ್ರತಿಭಟನೆ ಕೂರಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಟೀಕಿಸಬೇಕು ಎಂದು ಕಾಲೆಳೆದರು. ಇದಕ್ಕೆ ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯನವರು ರಾಜಸ್ಥಾನದ ಪಕ್ಷಾಂತರದ ಬಗ್ಗೆ ಅಲ್ಲಿಯ ಜನ ಮತ್ತು ಪಕ್ಷಗಳು ನೋಡಿಕೊಳ್ಳುತ್ತಾರೆ.

ನಮ್ಮ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಅನ್ಯಾಯದ ವಿರುದ್ಧ ನೀವು ಪ್ರಧಾನ ಕಚೇರಿ ಮುಂದೆ ಯಾವಾಗ ಧರಣಿ ನಡೆಸುತ್ತೀರಾ? ನಾನು ನಿಮ್ಮ ಜೊತೆ ಪ್ರತಿಭಟನೆ ನಡೆಸಲು ಬರುತ್ತೇನೆ ಎಂದು ಉತ್ತರಿಸುವ ಮೂಲಕ ಟಾಂಗ್ ನೀಡಿದ್ದಾರೆ.

ಸಿ.ಟಿ.ರವಿ ಅವರ ಹೇಳಿಕೆಗೆ ಮತ್ತು ಸಿದ್ದರಾಮಯ್ಯನವರ ಟ್ವೀಟ್‍ಗೆ ಟ್ವೀಟರ್‍ನಲ್ಲಿ ಭಾರೀ ಚರ್ಚೆಗಳು ನಡೆದಿವೆ. ಅವರವರ ಪಕ್ಷದ ಅಭಿಮಾನಿಗಳು ತಮ್ಮ ನಾಯಕರ ಪರ ಸಮರ್ಥಿಸಿಕೊಂಡಿದ್ದರೆ ವಿರೋಧ ಮಾಡುವವರು ಭರ್ಜರಿಯಾಗೇ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದ್ದಾರೆ.

Facebook Comments

Sri Raghav

Admin