ಖಾಲಿ ತಟ್ಟೆ ಬಡಿದು ಸಂಭ್ರಮಾಚರಣೆ ಬೇಕೇ ಮೋದಿಜಿ..? । ಸಿದ್ದು ಟ್ವೀಟ್ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.22- ದೇಶದ ಅರ್ಧಭಾಗದಷ್ಟು ಜನರಿಗೆ ಲಸಿಕೆ ನೀಡುವುದು ಬಾಕಿ ಇದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಲಸಿಕೆ ಅಭಿಯಾನದ ಯಶಸ್ವಿ ಸಾಧನೆ ಎಂದು ಸಂಭ್ರಮಾಚರಣೆ ಮಾಡುತ್ತಿರುವುದು ಯಾವ ಪುರಷಾರ್ಥಕ್ಕೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಟ್ವಿಟರ್‍ನಲ್ಲಿ ವಾಗ್ದಾಳಿ ನಡೆಸಿರುವ ಅವರು, ದೇಶದ 139 ಕೋಟಿ ಜನರಲ್ಲಿ 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ಕೊರೊನಾ ಲಸಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಅತ್ಯವಸರದಿಂದ 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.

ದೇಶದಲ್ಲಿ ಇಲ್ಲಿಯ ವರೆಗೆ 29 ಕೋಟಿ ಜನರಿಗೆ ಎರಡು ಡೋಸ್ ಮತ್ತು 42 ಕೋಟಿ ಜನರಿಗೆ ಒಂದು ಡೋಸ್ ಲಸಿಕೆ ಮಾತ್ರ ನೀಡಲಾಗಿದೆ. 139 ಕೋಟಿ ಜನರಲ್ಲಿ 68 ಕೋಟಿ ಜನರಿಗೆ ಇನ್ನು ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ. ಯಾವ ಸಾಧನೆಗೆ ಸಂಭ್ರಮಾಚರಣೆ ? ಎಂದು ಪ್ರಶ್ನಿಸಿದ್ದಾರೆ.

ಘೋಷಿತ ಗುರಿಯಂತೆ ದೇಶದ 103 ಕೋಟಿ ವಯಸ್ಕರಿಗೆ ಡಿಸೆಂಬರ್ 31ರೊಳಗೆ 2 ಡೋಸ್ ನೀಡಲು 206 ಕೋಟಿ ಲಸಿಕೆ ಬೇಕಾಗಿದೆ. ಕೊಟ್ಟಿರುವುದು 100 ಕೋಟಿ ಮಾತ್ರ. ಗುರಿ ತಲುಪಲು ಪ್ರತಿದಿನ 1.51 ಕೋಟಿ ಲಸಿಕೆ ನೀಡಬೇಕಾಗಿದೆ ಇದಕ್ಕಾಗಿ ಬೇಕಾಗಿರುವುದು ಸಿದ್ದತೆ, ಖಾಲಿ ತಟ್ಟೆಯ ಪ್ರಚಾರ ಅಲ್ಲ ಎಂದಿದ್ದಾರೆ.

ಅಮೆರಿಕ ಶೇ.56, ಚೀನಾ ಶೇ.70 ಜನಸಂಖ್ಯೆಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಿ ಬೂಸ್ಟರ್ ಲಸಿಕೆ ನೀಡುವ ಸಿದ್ದತೆಯಲ್ಲಿದೆ. ಭಾರತದಲ್ಲಿ ಕೇವಲ ಶೇ.21ರಷ್ಟು ಜನಸಂಖ್ಯೆಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ. ಯಾವ ಸಾಧನೆಗೆ ಸಂಭ್ರಮ? ವೈಫಲ್ಯದ ವಿಶ್ವಗುರು ಕುಖ್ಯಾತಿಗಾಗಿಯೇ ? ಎಂದು ಕಿಡಿಕಾರಿದ್ದಾರೆ.

ಸುಳ್ಳು ಸಾಧನೆಗಳ ಖಾಲಿ ತಟ್ಟೆ ಬಡಿಯುತ್ತಾ ದೇಶದ ಜನರನ್ನು ಮರುಳು ಮಾಡುತ್ತಾ ಬಂದ ಅವರೇ? ಮೊದಲು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಎರಡು ಡೋಸ್ ಲಸಿಕೆ ನೀಡಲು ಗಂಭೀರವಾಗಿ ಸರ್ಕಾರವನ್ನು ತೊಡಗಿಸಿಕೊಳ್ಳಿ. ಸಾಧನೆಯ ಸಂಭ್ರಮಾಚರಣೆ ಆ ಮೇಲೆ ಮಾಡೋಣ.

ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಹಾಜನಲ್‍ಗೆ ತೆರಳಲು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎರಡೂ ಡೋಸ್ ಕೊರೊನಾ ಲಸಿಕೆ ಪಡೆದವರು 29 ಕೋಟಿ ಜನ ಅಷ್ಟೆ. 100 ಕೋಟಿ ಲಸಿಕೆ ಹಾಕಿದೀವಿ ಎಂದು ಸಂಭ್ರಮಾಚರಣೆ ಮಾಡಲು ಸರ್ಕಾರ ಹೊರಟಿದೆ. ಆಕ್ಸಿಜನ್, ವೆಂಟಿಲೇಟರ್, ಆಸ್ಪತ್ರೆ, ಆಂಬುಲೆನ್ಸ್ ಹಾಗೂ ಚಿಕಿತ್ಸೆ ಸಿಗದೆ ದೇಶದಲ್ಲಿ ಕನಿಷ್ಟ 50 ಲಕ್ಷ ಜನ ಕೊರೊನಾದಿಂದ ಸತ್ತಿದ್ದಾರೆ. ಇದಕ್ಕೆ ಸರ್ಕಾರದ ನಿಷ್ಕ್ರಿಯತೆ ಕಾರಣ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈಗ ಚುನಾವಣೆ ವೇಳೆ ನಾವು ಮಿಷನ್ ಹಾನಗಲ್ ಮಾಡ್ತೀವಿ ಎಂದು ಹೇಳುತ್ತಿದ್ದಾರೆ, ಇಷ್ಟು ದಿನ ಏಕೆ ಹಾನಗಲ್ ಅವರಿಗೆ ಕಂಡಿರಲಿಲ್ಲ? ಬಡವರಿಗೆ ಒಂದು ಮನೆಯಾದ್ರೂ ಕೊಟ್ಟಿದ್ದಾರಾ ? ಅಭಿವೃದ್ಧಿ ಎಂದರೆ ಏನು ಗೊತ್ತಾ ? ಬರೀ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲೇÉೂೀದು ಗೊತ್ತು ಅವರಿಗೆ.

ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಹಾನಗಲ್ ಕ್ಷೇತ್ರಕ್ಕೆ ಏನೆಲ್ಲೇ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀನಿ ಎಂದು ಹಿಂದಿನ ಶಾಸಕರಾದ ಮನೋಹರ ತಹಶಿಲ್ದಾರ್ ಅವರನ್ನ ಕೇಳಿನೋಡಿ. ನಾನು 2400 ಕೋಟಿ ರೂಪಾಯಿ ಅನ್ನು ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದಾ, ಈಗಿನ ಸರ್ಕಾರ ಎಷ್ಟು ಹಣ ನೀಡಿದೆ ಹೇಳಲಿ. ಹಾನಗಲ್‍ನಲ್ಲಿ ಸಾಧನಾ ಸಮಾವೇಶ ಮಾಡಿ, ಜನರಿಗೆ ಸರ್ಕಾರದ ಸಾಧನೆಗಳ ಮಾಹಿತಿ ನೀಡಿದ್ದ ಎಂದರು.

ಬಿಜೆಪಿ ಪಕ್ಷದಲ್ಲಿ ಒಬ್ಬ ಮುಸ್ಲಿಂ ಶಾಸಕ, ಮಂತ್ರಿ ಇಲ್ಲ. ಇದು ಅನ್ಯ ಧರ್ಮದ ಬಗ್ಗೆ ದ್ವೇಷ ಮಾಡಿದಂತಲ್ಲವೆ? ನಮ್ಮ ಪಕ್ಷದಲ್ಲಿ ಎಲ್ಲಾ ಜಾತಿ, ಧರ್ಮಗಳ ಶಾಸಕರಿದ್ದಾರೆ. ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಿಗೆ ಕರೆದುಕೊಂಡ ಹೋಗುವುದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಸಂವಿಧಾನ ಬದಲಾವಣೆ ಮಾಡ್ತೀವಿ ಎಂದವರು ಬಿಜೆಪಿಯವರು ಎಂದು ಕಿಡಿಕಾರಿದರು.

ಬಿಜೆಪಿ ಪಕ್ಷದವರು ಹಣ ಹಂಚುತ್ತಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೇಲೆ ಮತ ಕೇಳಲು ಕಳೆದ ಎರಡೂಕಾಲು ವರ್ಷಗಳಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮಾಡಿಲ್ಲ. ಹೀಗಾಗಿ ಹಣ ಹಾಕಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ.

ಸುಳ್ಳು ಭರವಸೆ ಕೊಡುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಮುಖ್ಯಮಂತ್ರಿ ಬೊಮ್ಮಾಯಿ ಬಂದಾಗ ಹಾನಗಲ್ ಪ್ರಚಾರದಲ್ಲಿ ಅಲೆ ಎದ್ದಿಲ್ವಂತ ? ಸೋಲಿನ ಭಯದಿಂದ ಏನೇನೊ ಮಾತನಾಡಲು ಆರಂಭಿಸಿದ್ದಾರೆ ಎಂದರು. ಹಾನಗಲ್ ನಲ್ಲಿ ಬಿಜೆಪಿ ಸೋಲುತ್ತೆ ಎಂದು ಬಸವರಾಜ ಬೊಮ್ಮಾಯಿಯವರಿಗೂ ಮತ್ತು ಮುರುಗೇಶ್ ನಿರಾಣಿ ಅವರಿಗೂ ಗೊತ್ತಿದೆ.

Facebook Comments