ಗೌಡರ ವಿರುದ್ಧ ತಿರುಗಿಬಿದ್ದ ಸಿದ್ದರಾಮಯ್ಯಗೆ ಸಾಥ್ ನೀಡದ ಕಾಂಗ್ರೆಸ್ಸಿಗರು..!
ಬೆಂಗಳೂರು, ಆ.25-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ನ ಯಾವೊಬ್ಬ ನಾಯಕರು ಪ್ರತಿಕ್ರಿಯಿಸದೆ ಮೌನ ವಹಿಸಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ನಾಯಕರು ದಿನನಿತ್ಯ ಕಿರುಕುಳ ನೀಡುತ್ತಿದ್ದರು. ಸ್ವತಂತ್ರವಾಗಿ ಕೆಲಸ ಮಾಡಲು ಬಿಡಲಿಲ್ಲ. ನೆಮ್ಮದಿಯಾಗಿ ನಿದ್ದೆ ಮಾಡಲೂ ಬಿಡಲಿಲ್ಲ ಎಂದು ದೇವೇಗೌಡರು ಗಂಭೀರ ಆರೋಪ ಮಾಡಿದ್ದರು.
ಕಾಂಗ್ರೆಸಿಗರು ಅದಕ್ಕೆ ಉತ್ತರ ನೀಡದೆ ಇದ್ದರೆ ದೇವೇಗೌಡರ ಆರೋಪ ನಿಜ ಎಂಬ ಸಂದೇಶ ಸಾರ್ವಜನಿಕವಾಗಿ ವ್ಯಾಪಿಸಲಿದೆ. ಸಮ್ಮಿಶ್ರ ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರಂತಹ ನಾಯಕರು ಮೌನವಾಗಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೈಕಮಾಂಡ್ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು, ಸಮ್ಮಿಶ್ರ ಸರ್ಕಾರ ರಚನೆಯಾದಾಗ ನಾನು ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಇನ್ನು ಆಡಳಿತದಲ್ಲೂ ಹಸ್ತಕ್ಷೇಪ ಮಾಡಿಲ್ಲ.
ಹೈಕಮಾಂಡ್ ನಿರ್ದೇಶನದ ಮೇರೆಗೆ ಸಮನ್ವಯ ಸಮಿತಿ ಸಭೆಯಲ್ಲಿ ಕೆಲವು ಸಲಹೆ ನೀಡಿದೆ. ಅವೂ ಕೂಡಾ ಜಾರಿಯಾಗಲಿಲ್ಲ. ಕುಮಾರಸ್ವಾಮಿಯವರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದರಿಂದ ಕೆಲವು ಶಾಸಕರು ಸರ್ಕಾರ ಬೀಳಿಸಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.
ರಾಜೀನಾಮೆ ನೀಡಿರುವ ಶಾಸಕರಲ್ಲಿ ಬಹುತೇಕರು ನನ್ನ ಆಪ್ತರಿದ್ದಾರೆಂಬುದು ನಿಜ. ಅದಕ್ಕಾಗಿ ನಾನೇ ಸರ್ಕಾರ ಬೀಳಿಸಿದೆ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ. ಕೊನೆ ಕ್ಷಣದವರೆಗೂ ಸರ್ಕಾರ ಉಳಿಸಿಕೊಳ್ಳಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಆದರೆ ಅದು ಸಾಧ್ಯವಾಗಲಿಲ್ಲ.
ಈಗ ದೇವೇಗೌಡರು ಬಿಜೆಪಿ ಜತೆ ಕೈ ಜೋಡಿಸುವ ಸಲುವಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಮೇಲೂ ಟೀಕೆಗಳು ಕೇಳಿ ಬರುತ್ತಿವೆ. ಈ ಸಂದರ್ಭದಲ್ಲಿ ನಾವು ಮೌನವಾಗಿದ್ದರೆ ನಾವೇ ತಪ್ಪಿತಸ್ಥರು ಎಂಬ ಭಾವನೆ ಮೂಡುತ್ತದೆ.
ಸಂಪುಟದಲ್ಲಿ ಸಚಿವರಾಗಿದ್ದವರು ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಆರೋಪಗಳಿಗೆ ಉತ್ತರಿಸಲು ಸೂಚಿಸುವಂತೆ ಸಿದ್ದರಾಮಯ್ಯ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಸಿದ್ದು ವಿರುದ್ಧ ಕೆಲವು ಕಾಂಗ್ರೆಸ್ನ ನಿಷ್ಠಾವಂತ ನಾಯಕರು ಹೈಕಮಾಂಡ್ಗೆ ದೂರು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಸಮ್ಮಿಶ್ರ ಸರ್ಕಾರ ಪತನವಾದ ಕೂಡಲೇ ಕಾಂಗ್ರೆಸ್ನಲ್ಲಿ ಮತ್ತೆ ಬಣ ರಾಜಕೀಯ ತಲೆ ಎತ್ತಿದೆ.