ಗುರುವಿಗೇ ಗುಮ್ಮಿದ ಶಿಷ್ಯ, ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ಗುಟುರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.23- ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾನು ಕಾರಣನಲ್ಲ. ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣರ ನಡವಳಿಕೆಗಳಿಂದ ಬೇಸರಗೊಂಡ ಶಾಸಕರು ಸರ್ಕಾರ ಕೆಡವಿದ್ದಾರೆ. ನನ್ನ ಮೇಲೆ ಗೂಬೆ ಕೂರಿಸಿ ಜನರ ಅನುಕಂಪ ಗಿಟ್ಟಿಸುವ ರಾಜಕೀಯ ದುರುದ್ದೇಶದಿಂದ ದೇವೇಗೌಡರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ನನ್ನ ಮೇಲೆ ಗುರುತರ ಆರೋಪ ಮಾಡಿದ್ದರು. ನಾನು ಪ್ರತಿಕ್ರಿಯಿಸಬಾರದು ಎಂದು ಸುಮ್ಮನಿದ್ದೆ. ಅನಂತರ ಟಿವಿ ಮಾಧ್ಯಮಗಳಿಗೂ ಹೇಳಿಕೆ ಕೊಟ್ಟಿದ್ದಾರೆ. ಈಗಲೂ ನಾನು ಸುಮ್ಮನೆ ಇದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಆ ಕಾರಣಕ್ಕಾಗಿ ಉತ್ತರ ನೀಡಬೇಕಿದೆ ಎಂದರು.

ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಸಿದ್ದಾಂತ ಹೊಂದಿರುವವರಲ್ಲಿ ನಾನೂ ಒಬ್ಬ . 2018ರ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಹೈಕಮಾಂಡ್ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಒಪ್ಪಿದೆ ಎಂದು ಕಾಂಗ್ರೆಸ್ ನಾಯಕರಾದ ಗುಲಾಮ್‍ನಭಿ ಆಜಾದ್, ಅಶೋಕ್ ಗೆಹಲೋಟ್ ಅವರು ಬೆಂಗಳೂರಿಗೆ ಬಂದು ಹೇಳಿದಾಗ ಮರು ಮಾತನಾಡದೆ ಒಪ್ಪಿಗೆ ಸೂಚಿಸಿದೆ.

ಸರ್ಕಾರ ರಚನೆಯಾಯಿತು. ಶಾಸಕಾಂಗ ಪಕ್ಷದ ನಾಯಕನಾದ ನನ್ನನ್ನು ಹೈಕಮಾಂಡ್ ಸಮನ್ವಯ ಸಮಿತಿ ಅಧ್ಯಕ್ಷನನ್ನಾಗಿ ಮಾಡಿತು. ಸುಮಾರು ಐದಾರು ಸಭೆಗಳನ್ನು ನಡೆಸಿದೆವು. ನಾವು ಪ್ರಸ್ತಾಪಿಸುವ ಎಲ್ಲಾ ವಿಷಯಗಳಿಗೂ ಕುಮಾರಸ್ವಾಮಿ ಸಭೆಯಲ್ಲಿ ಒಪ್ಪಿಗೆ ಸೂಚಿಸುತ್ತಿದ್ದರು. ಆದರೆ, ಯಾವುದನ್ನೂ ಜಾರಿಗೆ ತರುತ್ತಿರಲಿಲ್ಲ.

ಬಹಳಷ್ಟು ಮಂದಿ ಶಾಸಕರು ಅಭಿವೃದ್ಧಿ ವಿಷಯದಲ್ಲಿ ಮುಖ್ಯಮಂತ್ರಿಯಿಂದ ಸಹಕಾರ ಸಿಗುತ್ತಿಲ್ಲ ಎಂದು ನನ್ನ ಬಳಿ ಹೇಳುತ್ತಿದ್ದರು. ಲೋಕಸಭೆ ಚುನಾವಣೆ ವರೆಗೂ ಮೌನವಾಗಿರಿ. ಆ ಮೇಲೆ ಕುಳಿತು ಮಾತನಾಡೋಣ ಎಂದು ನಾನು ಸಮಾಧಾನಪಡಿಸುತ್ತಿದ್ದೆ. ಮುಖ್ಯಮಂತ್ರಿಯಾಗಿದ್ದವರು ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಉಳಿಸಿಕೊಳ್ಳಬೇಕಿತ್ತು.

ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದೆ. ಒಬ್ಬ ಶಾಸಕರೂ ನನ್ನ ವಿರುದ್ಧ ಮಾತನಾಡುತ್ತಿರಲಿಲ್ಲ. ಆದರೆ , ಕುಮಾರಸ್ವಾಮಿ ವಿರುದ್ಧ ಶಾಸಕರು ಅಸಮಾಧಾನ ಗೊಳ್ಳಲು ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸದಿರುವುದೇ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು. ಸರ್ಕಾರ ಬೀಳಿಸುವ ನೀಚ ರಾಜಕಾರಣವನ್ನು ನಾನು ಮಾಡುವುದಿಲ್ಲ. ಹಿಂದೆ-ಮುಂದೆ ರಾಜಕಾರಣ ಮಾಡುವ ಅಭ್ಯಾಸ ನನಗಿಲ್ಲ.

ಸರ್ಕಾರವನ್ನು ಪತನಗೊಳಿಸುವ ಪ್ರವೃತ್ತಿ ದೇವೇಗೌಡ ಮತ್ತು ಅವರ ಮಕ್ಕಳದ್ದು. ಹಿಂದೆ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಇತ್ತೀಚೆಗೆ ಧರ್ಮಸಿಂಗ್ ಅವರ ಸರ್ಕಾರವನ್ನು ಕೆಡವಿದ್ದು ಯಾರು ಎಂದು ಪ್ರಶ್ನಿಸಿದರು. ದೇವೇಗೌಡರು ಸರ್ಕಾರ ರಚನೆಗೆ ಬೆಂಬಲ ಕೊಟ್ಟ ಪಕ್ಷಗಳ ವಿರುದ್ಧವೇ ಷಡ್ಯಂತ್ರ ರೂಪಿಸುವ ರಾಜಕಾರಣಿ. ಅವರು ಪ್ರಧಾನಿಯಾಗಲು ಕಾಂಗ್ರೆಸ್ ಬೆಂಬಲ ಕೊಟ್ಟಿತ್ತು. ಕಾಂಗ್ರೆಸ್‍ನ ಹಿರಿಯ ನಾಯಕ ಸೀತಾರಾಮ್ ಕೇಸರಿ ಅವರನ್ನೇ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದರು. ಇಲ್ಲದೇ ಹೋಗಿದ್ದರೆ ಇನ್ನೂ ಕೆಲವು ದಿನ ಪ್ರಧಾನಿಯಾಗಿ ಅಧಿಕಾರದಲ್ಲಿ ಇರುತ್ತಿದ್ದರು.

ಬಿಜೆಪಿಯನ್ನು ಮೆಚ್ಚಿಸಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂತಹ ಆರೋಪಗಳ ಮೂಲಕ ನನ್ನ ಮೇಲೆ ಗೂಬೆ ಕೂರಿಸಿ ಜನರ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯವಾಗಿ ನನ್ನ ಶಕ್ತಿ ಕುಗ್ಗಿಸಿದರೆ ಕಾಂಗ್ರೆಸ್‍ಗೆ ನಷ್ಟವಾಗಲಿದೆ ಎಂಬ ತಂತ್ರಗಾರಿಕೆ ಅವರದು. ನಾನು ಅವರ ಜತೆಯೇ ರಾಜಕಾರಣ ಮಾಡಿದವನು. ಎಲ್ಲವೂ ನನಗೆ ಗೊತ್ತಿದೆ.

ಸಿದ್ದರಾಮಯ್ಯನವರಿಗೂ ನಮಗೂ ರಾಜಕೀಯ ವೈರತ್ವ ಇದೆ ಎಂದು ದೇವೇಗೌಡರು ಹೇಳಿಕೊಂಡಿದ್ದಾರೆ. ಆದರೆ, ನಾನು ಎಂದು ಹಾಗೆಂದುಕೊಂಡಿಲ್ಲ.
ಈ ಹಿಂದೆ ಎರಡು ಬಾರಿ ನನ್ನನ್ನು ಸಚಿವ ಸ್ಥಾನ, ಮುಖ್ಯಮಂತ್ರಿ ಸ್ಥಾನದಿಂದ ದೇವೇಗೌಡರು ತೆಗೆದು ಹಾಕಿದ್ದರು. ಹೆಗಡೆ ಅವರ ಸರ್ಕಾರದಲ್ಲಿ ದೇವೇಗೌಡ ಪರವಾಗಿ ನಾನಾಗಿಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ, ಕೆಲವು ದಿನಗಳ ಕಾಲ ರಾಜಕೀಯವಾಗಿ ದೂರ ಇದ್ದೆವು.

2018ರ ಬಳಿಕ ಮೈತ್ರಿ ಮಾಡಿಕೊಂಡೆವು. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಜತೆ ಐದು ಜಿಲ್ಲೆಗಳಲ್ಲಿ ನಾನು ಲೋಕಸಭೆ ಚುನಾವಣೆಯಲ್ಲಿ ಜಂಟಿ ಪ್ರಚಾರ ಮಾಡಿದ್ದೆ. ತುಮಕೂರು, ಮಂಡ್ಯ ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಹೇಳಿದ್ದಾರೆ.

ಹಾಸನದಲ್ಲಿ ಜೆಡಿಎಸ್ ಗೆಲುವಿಗೆ ನಾವು ಕೂಡ ಕಾರಣರಲ್ಲವೇ. ಅದನ್ನು ಏಕೆ ಹೇಳುತ್ತಿಲ್ಲ. ಮೈಸೂರು, ಬೆಂಗಳೂರು, ಚಾಮರಾಜನಗರದಲ್ಲಿ ಕಾಂಗ್ರೆಸ್ ಸೋಲಿಗೆ ಜೆಡಿಎಸ್ ಕಾರಣವಾಗಿದೆ. ಆಗಿನ ಸಚಿವರಾಗಿದ್ದ ಜಿ.ಟಿ.ದೇವೇಗೌಡರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಎಚ್.ಡಿ.ದೇವೇಗೌಡರು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನನಗೆ ಜೆಡಿಎಸ್‍ನಲ್ಲಿದ್ದಾಗ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ದೇವೇಗೌಡರು. 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ವೇಳೆ ಶರದ್ ಪವಾರ್ ಅವರ ಮನೆಯಲ್ಲಿ ಸಭೆ ನಡೆದಿತ್ತು. ಜೆಡಿಎಸ್‍ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲು ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿ ಒಪ್ಪಿದ್ದಾರೆ.

ನೀವು ಬೇಡಿಕೆ ಮುಂದಿಡಿ ಎಂದು ಶರದ್ ಪವಾರ್ ಸಲಹೆ ನೀಡಿದ್ದರು. ಆದರೆ, ದೇವೇಗೌಡರೇ ನಮಗೆ ಉಪಮುಖ್ಯಮಂತ್ರಿ ಸ್ಥಾನ ಸಾಕು. ಮುಖ್ಯಮಂತ್ರಿ ಹುದ್ದೆ ಬೇಡ ಎಂದು ಹೇಳಿದರು. ಈ ಬಗ್ಗೆ ನನಗೆ ಈಗಲೂ ಸಿಟ್ಟಿದೆ. ಆದರೆ, ಆ ಕಾರಣಕ್ಕಾಗಿ ನಾನು ಸೇಡು ತೀರಿಸಿಕೊಳ್ಳುವ ಕೆಲಸ ಮಾಡುವುದಿಲ್ಲ ಎಂದರು.

Facebook Comments

Sri Raghav

Admin