‘ಖರ್ಗೆ’ ಅಸ್ತ್ರ ಬಿಟ್ಟಿದ್ದ ಕುಮಾರಸ್ವಾಮಿ ವಿರುದ್ಧ ‘ರೇವಣ್ಣಾಸ್ತ್ರ’ ಪ್ರಯೋಗಿಸಿದ ಸಿದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 16-ನಿರೀಕ್ಷೆಯಂತೆ ಕುಮಾರಸ್ವಾಮಿ ಅವರ ಹೇಳಿಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕಿಚ್ಚು ಹೆಚ್ಚಿಸಿದ್ದು, ಜೆಡಿಎಸ್‍ನಲ್ಲೂ ಸಿಎಂ ಸ್ಥಾನದ ಅರ್ಹತೆಯ ಜನ ಬಹಳಷ್ಟಿದ್ದಾರೆ. ಅವರಲ್ಲಿ ಎಚ್.ಡಿ.ರೇವಣ್ಣ ಕೂಡ ಒಬ್ಬರು ಎಂದು ಹೇಳುವ ಮೂಲಕ ಒಳಬೇಗುದಿಯನ್ನು ಹೊರಹಾಕಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು ಎಂದು ನಿನ್ನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇಂದು ಬೆಳಗ್ಗೆ ಟ್ವಿಟರ್‍ನಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಎಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ಮಾತ್ರವಲ್ಲದೆ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆ ಇದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳಷ್ಟು ಜನ ಇದ್ದಾರೆ. ಅವರಲ್ಲಿ ಎಚ್.ಡಿ.ರೇವಣ್ಣ ಕೂಡ ಒಬ್ಬರು. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಎಂದು ಟಕ್ಕರ್ ನೀಡಿದ್ದಾರೆ.

ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಸಚಿವ ಎಂ.ಬಿ.ಪಾಟೀಲ್ ಆದಿಯಾಗಿ ಬಹಳಷ್ಟು ಮಂದಿ ಕಾಂಗ್ರೆಸ್‍ನ ಸಿದ್ದು ಬೆಂಬಲಿಗರು ಹೇಳಿಕೆ ನೀಡುತ್ತಿದ್ದರು. ಇದು ಜೆಡಿಎಸ್ ನಾಯಕರ ಅಸಹನೆಗೆ ಕಾರಣವಾಗಿದ್ದರೆ, ಬಿಜೆಪಿ ಪಾಳಯಕ್ಕೆ ಹೊಸ ಟೀಕಾಸ್ತ್ರ ಸಿಕ್ಕಂತಾಗಿತ್ತು.

ಆಡಳಿತ ಮತ್ತು ಪ್ರತಿಪಕ್ಷಗಳ ಟೀಕೆಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಆರೋಪ-ಪ್ರತ್ಯಾರೋಪಗಳು ಮುಗಿಲು ಮುಟ್ಟಿದ್ದವು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ನಿಂದನೆಯ ಟ್ವಿಟ್ ಮಾಡಿ ಟೀಕೆಗಳಿಗೆ ಸಿದ್ದರಾಮಯ್ಯ ಅವರೇ ನಾಂದಿ ಹಾಡಿದ್ದರು. ಆನಂತರ ಒಬ್ಬರಾದ ಮೇಲೊಬ್ಬರಂತೆ ಹೇಳಿಕೆಗಳನ್ನು ನೀಡಿ ಎರಡೂ ಪಕ್ಷಗಳ ನಡುವೆ ಕೆಸರೆರಚಾಟ ಹೆಚ್ಚಾಗಿತ್ತು.

ಒಂದು ಹಂತದಲ್ಲಿ ಜೆಡಿಎಸ್ ನಾಯಕರೇ ವಾಕ್ಸಮರದಿಂದ ಹಿಂದೆ ಸರಿದು ರಾಜೀ ಸಂಧಾನದ ಮಾತನಾಡಿದ್ದರು. ಆದರೂ ಸಿದ್ದರಾಮಯ್ಯ ತಮ್ಮ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲಿಲ್ಲ.

ನಿನ್ನೆ ಚಿಂಚೋಳಿಯ ಉಪಚುನಾವಣಾ ಕಣದಲ್ಲಿ ಕುಮಾರಸ್ವಾಮಿಯವರು ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು ಎಂದು ಹೇಳಿಕೆ ನೀಡಿದ್ದರು. ಆರಂಭದಿಂದಲೂ ಖರ್ಗೆ ಅವರಿಗೆ ರಾಜಕೀಯ ಪೈಪೋಟಿ ನೀಡುತ್ತಲೇ ಕಾಂಗ್ರೆಸ್‍ನಲ್ಲಿ ಪ್ರಮುಖ ಹುದ್ದೆಗಳನ್ನು ಗಿಟ್ಟಿಸಿದ್ದ ಸಿದ್ದರಾಮಯ್ಯ ಅವರಿಗೆ ಸಹಜವಾಗಿ ಈ ಹೇಳಿಕೆ ಸಿಟ್ಟು ತರಿಸಿದೆ.

ಕುಮಾರಸ್ವಾಮಿ ಹೇಳಿಕೆಗೆ ಇಂದು ಟ್ವೀಟರ್‍ನಲ್ಲಿ ಸಿದ್ದರಾಮಯ್ಯ ತಮ್ಮ ಸಿಟ್ಟನ್ನು ಹೊರಹಾಕಿದ್ದು, ಖರ್ಗೆಯವರಿಗೆ ಉನ್ನತ ಹುದ್ದೆ ನಿಭಾಯಿಸುವ ಅರ್ಹತೆ ಇದೆ ಎಂದು ಹೇಳುವ ಜೊತೆಗೆ ಕುಮಾರಸ್ವಾಮಿ ಅವರ ಸಹೋದರ ರೇವಣ್ಣ ಕೂಡ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ ಎಂದು ಪ್ರಸ್ತಾಪಿಸಿ ಜೆಡಿಎಸ್ ಒಳವಲಯದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕು.

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin