‘ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಎಂಬುದನ್ನು ತಿಳಿದು ಮಾತನಾಡಲಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.5- ಆರ್ ಎಸ್‍ಎಸ್ ಬಗ್ಗೆ ಮಾತನಾಡುವ ಮೊದಲು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಎಂಬುದನ್ನು ತಿಳಿದುಕೊಂಡು ಮಾತನಾಡಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಇತ್ತೀಚೆಗೆ ಎಲ್ಲದಕ್ಕೂ ಆರ್‍ಎಸ್‍ಎಸ್ ಬಗ್ಗೆ ಹೇಳಿಕೊಂಡು ತಿರುಗಾಡುವುದೇ ಅಭ್ಯಾಸವಾಗಿಬಿಟ್ಟಿದೆ. ಪ್ರತಿ ದಿನ ಅವರಿಗೆ ಆರ್‍ಎಸ್‍ಎಸ್ ಬಗ್ಗೆ ಟೀಕೆ ಮಾಡುವುದೇ ಕಾಯಕ. ಎಲ್ಲದಕ್ಕೂ ಆರ್‍ಎಸ್‍ಎಸ್ ಕಾರಣ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇಂದು ನಾನು ಈ ಸ್ಥಾನಕ್ಕೆ ಬರಲು ಆರ್ ಎಸ್‍ಎಸ್ ಕಾರಣ. ಅದರ ಸಿದ್ಧಾಂತವನ್ನು ನಾನು ಕಲಿತಿದ್ದೇನೆ. ಅದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದರು.ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಆರ್‍ಎಸ್‍ಎಸ್ ಕೂಡ ಕಾರಣ. ಸ್ವತಃ ಮೋದಿಯವರೇ ನಾನು ಆರ್‍ಎಸ್‍ಎಸ್‍ನಿಂದ ಬಂದವನು ಎಂದು ಹೇಳಿದ್ದಾರೆ. ಮೊದಲು ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಎಂದು ಪ್ರಶ್ನಿಸಿದರು.

ನಮ್ಮ ಪಕ್ಷದ ಬಗ್ಗೆ ಮಾತನಾಡುವ ಮೊದಲು ನಿಮ್ಮ ಪಕ್ಷದಲ್ಲಿರುವ ಹುಳುಕುಗಳನ್ನು ಮುಚ್ಚಿಕೊಳ್ಳಿ. ನೀವೇ ಆತಂರಿಕ ಗೊಂದಲದಿಂದ ಮುಳುಗಿದ್ದೀರಿ. ಬೇರೆಯವರ ಬಗ್ಗೆ ನಿಮಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರೇ ವಿರೋಧ ಪಕ್ಷದ ನಾಯಕರಾಗಿದ್ದೀರಿ. ನೀವು ಹಗುರವಾಗಿ ಮಾತನಾಡಬೇಡಿ. ಆರ್‍ಎಸ್‍ಎಸ್ ಬಗ್ಗೆ ಮಾತನಾಡಿದಷ್ಟು ಅದು ಬಲಿಷ್ಠವಾಗುತ್ತದೆ. ಟೀಕೆ, ಟಿಪ್ಪಣಿ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅದಕ್ಕೂ ಇತಿಮಿತಿ ಇರಬೇಕಲ್ಲವೇ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ದೇಶವೇ ಮೆಚ್ಚಿದೆ. ಅವರು ಗಡ್ಡ ಬಿಟ್ಟಿದ್ದಾರೆ ಹಾಗೆ ಹೀಗೆ ಎಂದು ಹೇಳುತ್ತಾರೆ. ನೀವು ವಿಪಕ್ಷದ ನಾಯಕರು, ನೀವು ಹೇಳುವ ಮಾತು ಇಡೀ ಕಾಂಗ್ರೆಸ್ ಪಕ್ಷ ಹೇಳಿದಂತೆ. ನೀವು ಉತ್ತಮವಾಗಿ ನಡೆದುಕೊಳ್ಳಿ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದರು.

ಸದನದಲ್ಲಿ ಅನುಚುತವಾಗಿ ವರ್ತನೆ ಮಾಡಿದ ಕಾರಣಕ್ಕಾಗಿ ಶಾಸಕ ಬಿ.ಕೆ.ಸಂಗಮೇಶ್ ಅವರನ್ನು ಸಭಾಧ್ಯಕ್ಷರು ಅಮಾನತು ಮಾಡಿದ್ದಾರೆ. ಒಂದು ವೇಳೆ ಅವರಿಗೆ ಅನ್ಯಾಯವಾಗಿದ್ದರೆ ಸದನದಲ್ಲಿ ಚರ್ಚೆ ಮಾಡಲಿ. ಅದನ್ನು ಬಿಟ್ಟು ಅನುಚಿತವಾಗಿ ವರ್ತಿಸುವುದು ಸರಿಯಲ್ಲ ಎಂದು ಸಿಎಂ ಆಕ್ಷೇಪಿಸಿದರು.

ಒಂದು ರಾಷ್ಟ್ರ ಒಂದು ಚುನಾವಣೆ ಕುರಿತಂತೆ ಸದನ ಸಲಹಾ ಸಮಿತಿಯಲ್ಲೇ ಚರ್ಚಿಸಿ 19 ಮಂದಿ ಚರ್ಚೆಯಲ್ಲಿ ಪಾಲ್ಗೊಳ್ಳುವುದಾಗಿ ಪಟ್ಟಿಯನ್ನು ಕೊಟ್ಟಿದ್ದಾರೆ. ಈಗ ಏಕಾಏಕಿ ವಿರೋಸುವುದು ಯಾರಿಗೂ ಶೋಭೆ ತರುವುದಿಲ್ಲ. ರಮೇಶ್‍ಕುಮಾರ್ ಅವರು ಹಿಂದೆ ಸ್ಪೀಕರ್ ಆಗಿ ಕೆಲಸ ಮಾಡಿದ್ದವರು. ಅವರು ಹೇಗೆ ವರ್ತಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ಪರೋಕ್ಷವಾಗಿ ಕಿಡಿಕಾರಿದರು.

Facebook Comments

Sri Raghav

Admin