ವಿಧಾನಸಭೆಯಲ್ಲಿ ಭ್ರಷ್ಟಾಚಾರದ ಕೋಲಾಹಲ : ಬಿಎಸ್ವೈ- ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಚಾಲೆಂಜ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.26- ಬಿಡಿಎ ವಸತಿ ಸಂಕೀರ್ಣ ಗುತ್ತಿಗೆ ಕಾಮಗಾರಿಯಲ್ಲಿ ಭ್ರಷ್ಟಚಾರ ನಡೆದಿದೆ ಎಂದು ಕಾಂಗ್ರೆಸ್ ಮಾಡಿದ ಆರೋಪ ವಿಧಾನಸಭೆಯಲ್ಲಿ ಕೋಲಾಹಲದ ವಾತಾವಣ ನಿರ್ಮಿಸಿತ್ತು. ಆರೋಪ ಸಾಬೀತಾದರೆ ನಾನು ರಾಜಕೀಯವಾಗಿ ನಿವೃತ್ತನಾಗುತ್ತೇನೆ ಎಂದು ಯಡಿಯೂರಪ್ಪ ವಿಧಾನಸಭೆಯಲ್ಲಿ ಸವಾಲು ಹಾಕಿದರು, ಆರೋಪ ಸುಳ್ಳಾದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಸಿದ್ದರಾಮಯ್ಯ ಪ್ರತಿ ಸವಾಲು ಹಾಕಿದ ಪ್ರಸಂಗ ನಡೆಯಿತು.

ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಮಾಡುತ್ತಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಬಿಡಿಎನಲ್ಲಿ ಯಾವುದೇ ಟೆಂಡರ್ ಕರೆದರೂ ಅದರ ಅನುಮತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗುವುದಿಲ್ಲ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಇದ್ದಾಗಲೂ 2019ರಲ್ಲಿ ಸೆ.24ರಂದು ವಸತಿ ಯೋಜನೆ ಅಂಗೀಕಾರಗೊಂಡಿದೆ.

ಲೋಕಸಭೆ ಚುನಾವಣೆ ವೇಳೆ ಅಂಗೀಕಾರಗೊಂಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಆಗ ಬಿಡಿಎ ಆಯುಕ್ತರಾಗಿದ್ದವರು ಮುಖ್ಯಕಾರ್ಯದರ್ಶಿಗೆ 2019 ಮಾಚ್ 20ರಂದು ಒಂದು ಪತ್ರ ಬರೆದು ಬಿಡಿಎನಲ್ಲಿ ದುಡ್ಡಿಲ್ಲ. ಇರುವ ಅಪಾರ್ಟ್‌ಮೆಂಟ್‌ನ್ನೇ ತೆಗೆದುಕೊಳ್ಳುವವರಿಲ್ಲ. ಹಾಗಾಗಿ ಹೊಸ ಯೋಜನೆ ಬೇಡ. ಈಗಾಗಲೇ 26 ಯೋಜನೆಗಳ ಅಪಾರ್ಟ್‌ಮೆಂಟ್ ಖಾಲಿ ಇವೆ.

ಬಾಕಿ ಯೋಜನೆಗಳಿಗೆ ಒಂದು ಸಾವಿರ ಕೋಟಿ ಬೇಕಾಗಿದೆ. ವಿವಿಧ ಯೋಜನೆಗಳಿಂದ ಸುಮಾರು 3 ಸಾವಿರ ಕೋಟಿ ಬಾಕಿಯನ್ನು ವಿವಿಧ ಹಣಕಾಸು ಸಂಸ್ಥೆಗಳಿಗೆ ನೀಡಬೇಕಿದೆ. ಹಾಗಾಗಿ ಕೋಣದಾಸನಪುರ ವಸತಿ ಯೋಜನೆಯನ್ನು ನಿಲ್ಲಿಸುವುದು ಸೂಕ್ತ ಎಂದು ಸಲಹೆ ನೀಡುತ್ತಾರೆ. ಈ ಪತ್ರದ ನಂತರ ಆಯುಕ್ತರು ಬದಲಾಗುತ್ತಾರೆ. ಹೊಸ ಆಯುಕ್ತರು ಬಂದ ನಂತರ 2019 ಜೂನ್ 24ರಲ್ಲಿ ವರ್ಕ್ ಆರ್ಡರ್‌ಗೆ ಸಹಿ ಹಾಕುತ್ತಾರೆ. ಒಬ್ಬ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಸರಿನಲ್ಲಿ ವರ್ಕ್ ಆರ್ಡರ್ ನೀಡಲಾಗುತ್ತದೆ. ಕೆಲಸ ಪ್ರಾರಂಭವಾಗುತ್ತದೆ.

ಇದಾದ ಮೇಲೆ ಖಾಸಗಿ ಚಾನೇಲ್‌ನವರು ರಹಸ್ಯ ಕಾರ್ಯಾಚರಣೆ ಮಾಡಿದ್ದಾರೆ. ಅದರಲ್ಲಿ ಟಿವಿ ಚಾನೇಲ್ ಮತ್ತು ಯಡಿಯೂರಪ್ಪ ಕುಟುಂಬದ ಒಬ್ಬ ಸದಸ್ಯರ ನಡುವೆ ಸಂಭಾಷಣೆಯ ಆಡಿಯೋ ರೆಕಾರ್ಡ್ ಆಗಿದೆ. ಆ ಆಡಿಯೋದಲ್ಲಿ ವಿಜೆಯೇಂದ್ರ ಮತ್ತು ಪವರ್ ಟಿವಿ ನಡುವೆ ಸಂಭಾಷಣೆ ದಾಖಲೆ ಇದೆ. ಇದು ನಿಜವೋ ಅಲ್ಲವೋ ಎಂಬುದು ತನಿಖೆಯಾಗಬೇಕು ಎಂದರು.

ಬಿಡಿಎ ಆಯುಕ್ತರಾಗಿದ್ದ ವ್ಯಕ್ತಿ ಕ್ರೆಸೆಂಟ್ ರಸ್ತೆಯಲ್ಲಿರುವ ಹೋಟೆಲ್‌ನ ಮಾಲೀಕ ರವಿ ಎಂಬವರ ಮೂಲಕ ಹಣ ವಸೂಲಿ ಮಾಡಿದ್ದಾರೆ. ಆಯುಕ್ತ ನನ್ನ ಜೊತೆ ಆಟ ಆಡೋದು ಬೇಡ. ನನ್ನ ಹೆಸರು ಹೇಳಿ ಹಣ ವಸೂಲಿ ಮಾಡಿದ್ದಾನೆ. ಮುಚ್ಚಿಕೊಂಡು ಹಣ ವಾಪಾಸ್ ಕೋಡೊಕೆ ಎಚ್ಚರಿಕೆ ಕೊಟ್ಟಿದ್ದೇನೆ. ಒಂದೆರಡಲ್ಲ 12 ಕೋಟಿಯನ್ನು ಸಾಹೇಬರ ಹೆಸರು ಹೇಳಿ ವಸೂಲಿ ಮಾಡಿದ್ದಾನೆ ಅಂದರೆ ಅವನಿಗೆ ಎಷ್ಟು ದೈರ್ಯ ಎಂದು ವಿಜೆಯೇಂದ್ರ ಹೇಳಿರುವ ಆಡಿಯೋ ದಾಖಲೆ ಇದೆ.

15 ಕೋಟಿ ಕೊಟ್ಟು ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಹೇಳಿಕೊಂಡು ಊರ ತುಂಬಾ ತಿರುಗುತ್ತಿದ್ದಾನೆ. ಅಷ್ಟು ದುಡ್ಡು ಕೊಡುವಾಗ ಆತ ಇನ್ನೇನು ವ್ಯವಹಾರ ಮಾಡುತ್ತಾನೆ ಎಂದು ವಿಜೆಯೇಂದ್ರ ಹೇಳಿರುವ ದಾಖಲೆ ಇದೆ ಎಂದಾಗ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದರು.

ಈ ಸದನದ ಸದಸ್ಯನಲ್ಲದ ವ್ಯಕ್ತಿಯ ಮೇಲೆ ಆರೋಪ ಮಾಡುವುದ ಸರಿಯಲ್ಲ. ನಿಯಮದ ಪ್ರಕಾರ ಆರೋಪ ಮಾಡುವ ಮೊದಲು ನೋಟಿಸ್ ನೀಡಬೇಕು, ದಾಖಲೆ ನೀಡಬೇಕು ಎಂದು ಹೇಳಿದರು. ಆಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನೀವು ಮಾಡುತ್ತಿರುವ ಆರೋಪದಲ್ಲಿ ಆಯೋಟ ಸತ್ಯಾಂಶ ಇದ್ದರೆ ನಾನು ರಾಜಕೀಯ ನಿವೃತ್ತನಾಗುತ್ತೇನೆ. ಲೋಕಾಯುಕ್ತ ಸೇರಿ ಎಲ್ಲಿ ಬೇಕಾದರೂ ಹೋಗಿ ಆರೋಪ ಸಾಬೀತು ಮಾಡಿ, ಹೈಕೋರ್ಟ್‌ನಲ್ಲಿ ಬೇಕಾದರೂ ಕೇಸು ಹಾಕಿ. ಒಂದಂಶ ಸತ್ಯವಿದ್ದರೆ ನಾನು ರಾಜಕೀಯ ನಿವೃತ್ತನಾಗುತ್ತೇನೆ. ಇಲ್ಲವಾದರೆ ನೀವು ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸವಾಲು ಹಾಕಿದರು.

ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಧ್ಯ ಪ್ರವೇಶಿಸಿ. ರಹಸ್ಯ ಕಾರ್ಯಾಚರಣೆ ಮಾಡಿದ ವ್ಯಕ್ತಿ ಮೇಲೆ ಗುತ್ತಿಗೆದಾರರು ನೀಡಿದ ದೂರಿನ ಪ್ರತಿ ನಮ್ಮ ಬಳಿ ಇದೆ. ಮುಖ್ಯಮಂತ್ರಿಯ ಮಗನಾಗಿ ವಿಜೆಯೇಂದ್ರ ಅವರು, ಅವನ್ಯಾವನೋ ನಮ್ಮಪ್ಪನ ಹೆಸರಿನಲ್ಲಿ ದುಡ್ಡು ತೆಗೆದುಕೊಂಡಿದ್ದಾನೆ. ಆ ದುಡ್ಡನ್ನು ವಾಪಾಸ್ ವಾಪಾಸ್ ಬಿಸಾಕಿ ಎಂದು ಹೇಳಿದ್ದು ತಪ್ಪಾ ಎಂದರು.

ಕೆ.ಜೆ.ಜಾರ್ಜ್ ಸಾಹೇಬರೆ ಇದು ನಿಮ್ಮ ಕೃತ್ಯ. ಯಾಕೆ ಮುಚ್ಚಿಡುತ್ತಿರಾ. ಟೆಂಡರ್ ಕರೆ ಎಂದಿದ್ದು ಯಾರು, ನೆಗೋಷಿಯೆಟ್ ಮಾಡಿದ್ದು ಯಾರು, ಬೋರ್ಡ್‌ನಲ್ಲಿ ತಡೆ ಹಿಡಿದಿದ್ದು ಯಾರು. ನೀವು ಮಾಡಿದ ಪಾಪ ಇದು. ಯಾಕೆ ಮುಚ್ಚಿಡುತ್ತಿದ್ದೀರಾ. ಆಡಿಯೋ ಮುಂದಿಟ್ಟುಕೊಂಡು ಆರೋಪ ಮಾಡಲು ಸಾಧ್ಯವೇ. ಇದು ನಿಮ್ಮ ಕೃತ್ಯ ಎಂದು ನಾನು ನೇರ ಆರೋಪ ಮಾಡುತ್ತಿದ್ದೇನೆ. ಟೆಂಡರ್ ಕರೆದಾಗಿನಿಂದ ವರ್ಕ್ ಆಡರ್ ಕೊಟ್ಟಾಗ ನೀವು ಮಂತ್ರಿಯಾಗಿದ್ದವರು ಎಂದು ಹೇಳಿದರು.
ಆಗ ಸಿದ್ದರಾಮಯ್ಯ ಅವರು ತನಿಖೆಯಾಗಲಿ, ಸತ್ಯಾಂಶ ಹೊರ ಬರಲಿ ಎಂದರು.

ಚಂದ್ರಕಾಂತ್ ರಾಮಲಿಂಗರಾಮ್‌ರವರು ಎಂಬುವರು ದೂರು ನೀಡಿದ್ದಾರೆ ಎಂದು ಮಾಧುಸ್ವಾಮಿ ಹೇಳುತ್ತಿದ್ದಂತೆ, ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ದೂರು ದಾಖಲಾಗಿದ್ದರೆ ಕ್ರಿಮಿನಲ್ ಕೇಸು ಹಾಕಿ, ಕ್ರಮ ಕೈಗೊಳ್ಳಿ. ನಮ್ಮ ಅಭ್ಯಂತರ ಇಲ್ಲ. ಆರೋಪದ ಮೇಲೆ ತನಿಖೆ ಮಾಡಿ. ನಮ್ಮ ಸರ್ಕಾರ ಇಲ್ಲ, ನಿಮ್ಮ ಸರ್ಕಾರ ಇದೆ. ತನಿಖೆ ಮಾಡಿಸಿ. ಸುಪ್ರೀಂಕೋರ್ಟ್‌ನ ಜಡ್ಜ್‌ನಿಂದ ತನಿಖೆ ಮಾಡಿಸಿ ಎಂದು ಒತ್ತಾಯಿಸಿದರು.

ಆಗ ಯಡಿಯೂರಪ್ಪ ಅವರು, ನಿಮಗೆ ತಲೆ ಕೆಟ್ಟಿದೆ ಎಂದು ದೂರಿದರು. ಆಗ ಸಿದ್ದರಾಮಯ್ಯ ಕೂಡ ನಿಮಗೆ ತಲೆ ಕೆಟ್ಟಿದೆ ಎಂದು ಪ್ರತಿದಾಳಿ ನಡೆಸಿದರು. ಆಗ ಯಡಿಯೂರಪ್ಪ ಅವರು, ನಾನು ರಾಜಿನಾಮೆ ಕೊಡುತ್ತೇನೆ. ಇಲ್ಲ ನೀನು ರಾಜೀನಾಮೆ ಕೊಡು. ವಿರೋಧ ಪಕ್ಷದ ನಾಯಕನಾಗಿ ನಾಚಿಕೆ ಇಲ್ಲದೆ ಮಾತನಾಡುತ್ತಿರಾ ಎಂದು ಏಕವಚನದಲ್ಲಿ ವಾಗ್ಧಾಳಿ ನಡೆಸಿದರು.
ಸಿದ್ದರಾಮಯ್ಯ ಮಾತನಾಡಿ, ನಿಮಗೆ ಮಾನಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ. ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನಿಮ್ಮ ಧಮಕಿಗೆ ಗೊಡ್ಡು ಬೆದರಿಕೆ ಹೆದರಲ್ಲ. ತನಿಖೆ ಮುಗಿಯುವವರೆಗೂ ನೀವು ರಾಜೀನಾಮೆ ನೀಡಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಆಗ ಯಡಿಯೂರಪ್ಪ ಅವರು, ಆರೋಪ ಮಾಡುತ್ತಿರುವುದು ನೀನು. ಸಾಬೀತು ಮಾಡು, ನಾನು ರಾಜಕೀಯ ನಿವೃತ್ತನಾಗುತ್ತೇನೆ. ಇಲ್ಲ ನೀನು ರಾಜೀನಾಮೆ ನೀಡು ಎಂದರು. ನೀವು ಎಲ್ಲ ಎದ್ದರೆ ನಾವು ಹೆದರಿಕೊಳ್ಳಬೇಕಾ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ನಾವು ನೀವು ಹೇಳಿದರೆ ಕೇಳಿಕೊಡು ಕೂರಬೇಕಾ. ನಿಮಗೆ ತಾಕತ್ತಿದ್ದರೆ ಕೋರ್ಟ್‌ಗೆ ಹೋಗಿ ಸಾಬೀತು ಮಾಡಿ ಎಂದು ಸಚಿವ ಮಾಧುಸ್ವಾಮಿ ಸವಾಲು ಹಾಕಿದರು. ಯಾವನೋ ಟಿವಿ ಮುಂದೆ ಏನೋ ಹೇಳಿದರೆ ಕೇಳಬೇಕಾ, ಸಭೆಯ ಮುಂದೆ ದಾಖಲೆ ಇಡಿ. ದಾರಿಯಲ್ಲಿ ಹೋಗುವವನೇಲ್ಲಾ ಹೇಳಿದರೆ ತನಿಖೆ ಮಾಡಿಸಬೇಕಾ ಎಂದು ಮಾಧುಸ್ವಾಮಿ ಪ್ರಶ್ನಿಸಿದರು.

ಆಡಿಯೋದಲ್ಲಿ ಮಾತನಾಡಿರುವುದನ್ನು ನಿಜ ಎಂದು ನೀವೇ ಒಪ್ಪಿಕೊಂಡಿದ್ದೀರಾ. ಆರ್‌ಟಿಜಿಎಸ್ ಮಾಡಿಕೊಂಡರು ಲಂಚ ಪಡೆದರು ಪ್ರತಿಪಕ್ಷದವರು ನಾವು ಸುಮ್ಮನಿರಬೇಕಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಮಾಧುಸ್ವಾಮಿ ಪ್ರತಿಕ್ರಿಯಿಸಿ, ನಮ್ಮ ಸರ್ಕಾರದ ಅಧಿಕಾರಿಗಳಾಗಲಿ, ಸಚಿವರಾಗಲಿ ಇದರಲ್ಲಿ ಭಾಗಿಯಾಗಿಲ್ಲ. ನಾವು ಯಾಕೆ ತನಿಖೆ ಮಾಡಿಸಬೇಕು. ನೀವು ಕೋರ್ಟ್ ಹೋಗಿ ಎಂದರು.

ಯಡಿಯೂರಪ್ಪ ಉದ್ರೀಕ್ತರಾಗಿ ಆವೇಶದಿಂದ ಮಾತನಾಡಿದರು, ನೀವು ಸಾಬೀತು ಮಾಡಿದರೆ ರಾಜಕೀಯ ನಿವೃತ್ತರಾಗುತ್ತೇನೆ ಎಂದು ಹೇಳಿದ್ದೇನೆ. ಬೇಜವಾಬ್ದಾರಿಯಿಂದ ಮಾತನಾಡಿ, ಮಾನ ಮರ್ಯಾದರೆ ಇಲ್ಲವಾ ಎಂದು ಕಿಡಿಕಾರಿದರು. ಇಲ್ಲಿ ನಿಂತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಗ್ಗೆ ಮಾತನಾಡಲು ಸಾಧ್ಯವಾ. ನಿಮ್ಮ ಹೆಂಡತಿ ಮಕ್ಕಳ ಬಗ್ಗೆ ಬೇಜವಾಬ್ದಾರಿಯಿಂದ ಮಾತನಾಡಿದರೆ ಕೇಳುತ್ತಿರಾ ಎಂದು ತಿರುಗೇಟು ನೀಡಿದರು.

ಆಗ ಬಿಜೆಪಿಯ ಶಾಸಕರು ಯಡಿಯೂರಪ್ಪ ಅವರ ಬಳಿ ಹೋಗಿ ಸಮಾಧಾನ ಪಡಿಸಿದರು. ನೀವು ಸುಮ್ಮನಿರಿ ನಾವು ಮಾತನಾಡುತ್ತೇವೆ ಎಂದು ಹೇಳಿದರು. ತನಿಖೆಯ ವಿಷಯವಾಗಿ ಸರ್ಕಾರ ಉತ್ತರ ಹೇಳಲಿ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು. ನಾನೀನ್ನು ನನ್ನ ಮಾತುಗಳನ್ನು ಪೂರ್ಣಗೊಳಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಆಗ ಮಾಧುಸ್ವಾಮಿ ಅವರು ಈ ಸಭೆಗೆ ನಿಯಮಗಳಿವೆ. ಯಾರ ಮೇಲಾದರೂ ಆರೋಪ ಮಾಡುವುದಾದರೆ ಮೊದಲೆ ನೋಟಿಸ್ ಕೊಡಬೇಕು. ದಾಖಲೆಗಳನ್ನು ನಾನು ಸುಮ್ಮನೇ ಜಾರ್ಜ್ ಮೇಲೆ ಯಾಕೆ ಆರೋಪ ಮಾಡಿದೆ ಎಂದರೆ ನಾನು ಯಾರ ಮೇಲಾದರೂ ಹೇಳಬಹುದು ಎಂದು ತೋರಿಸಲು ಸಾಬೀತು ಪಡಿಸಲು ಮಾತನಾಡಿದೆ ಎಂದು ಮಾಧುಸ್ವಾಮಿ ಹೇಳಿದರು.
ಯಡಿಯೂರಪ್ಪ ಅವರು ಇದರಲ್ಲಿ ಭಾಗಿಯಾಗಿಲ್ಲ. ಅವರ ಮಗ ವಯಸ್ಕನಾಗಿದ್ದಾನೆ. ಹೊರಗೆ ಆತ ಏನೇ ಮಾಡಿದರೂ ಅದಕ್ಕೆ ಯಡಿಯೂರಪ್ಪ ಹೇಗೆ ಪಾಲುದಾರರಾಗುತ್ತಾರೆ ಎಂದರು.

ಆಗ ಡಿ.ಕೆ.ಶಿವಕುಮಾರ್ ಅವರು ಮಧ್ಯ ಪ್ರವೇಶಿಸಿ, ವಿಜೆಯೇಂದ್ರ ಮಾತನಾಡಿದ್ದಾರೆ ಎಂದು ಕಾನೂನು ಸಚಿವನಾಗಿ ನೀವೇ ಒಪ್ಪಿಕೊಂಡಿದ್ದೀರಾ ಎಂದಾಗ, ನಾನು ಒಪ್ಪಿಕೊಂಡಿಲ್ಲ ಎಂದು ಮಾಧುಸ್ವಾಮಿ ವಾದಿಸಿದರು. ಕೆ.ಜೆ.ಜಾರ್ಜ್ ಮಾತನಾಡಿ, ನನ್ನ ಮೇಲೆ ಮಾಧುಸ್ವಾಮಿ ಆರೋಪ ಮಾಡಿದ್ದಾರೆ. ತನಿಖೆಯಾಗಲಿ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತನಾಗುತ್ತೇನೆ. ಈ ಮೊದಲು ಗಣಪತಿ ಹಾಗೂ ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ನನ್ನ ಹೆಸರು ಹೇಳಿದ್ದೀರಿ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈಗಲೂ ನನಗೇನು ಭಯ ಇಲ್ಲ. ತನಿಖೆ ಮಾಡಿಸಿ ಎಂದು ಸವಾಲು ಹಾಕಿದರು.

ಮಾಧುಸ್ವಾಮಿ ಮತ್ತೊಮ್ಮೆ ತಮ್ಮ ಆರೋಪವನ್ನು ಪುನರುಚ್ಚರಿಸಿದರು. ನೀವು ಹೇಳುತ್ತಿರುವುದು ಸತ್ಯವಲ್ಲ ಎಂದು ಜಾರ್ಜ್ ವಾದಿಸಿದ್ದರು. ತನಿಖೆ ಮಾಡಿಸಿ ಎಂದಾಗ ನಾವು ಯಾಕೆ ಹಾದಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಬಿಟ್ಟುಕೊಳ್ಳೋಣ. ನೀವೇ ಕೋರ್ಟ್‌ಗೆ ಹೋಗಿ ಎಂದು ಮಾಧುಸ್ವಾಮಿ ಹೇಳಿದರು. ನೀವು ತನಿಖೆ ಮಾಡಿ ಸುಳ್ಳು ಎಂದು ಸಾಬೀತು ಮಾಡಿ ನಾನು ರಾಜಿನಾಮೆ ಕೊಡಲು ಸಿದ್ದನಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಚರ್ಚೆಗೆ ಅವಕಾಶ ಕೊಡಬಾರದು ಎಂದು ಬಿಜೆಪಿ ಪಟ್ಟು ಹಿಡಿದಿತ್ತು. ಸರ್ಕಾರ ತನಿಖೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಅಧಿವೇಶನ ಸ್ಪಲ್ಪ ಕಾಲ ಮುಂದೂಡಿ ಎಂದು ಶಾಸಕ ರಮೇಶ್ ಕುಮಾರ್ ನೀಡಿದ ಸಲಹೆಯನ್ನು ಸಭಾಧ್ಯಕ್ಷರು ಪರಿಗಣಿಸಲಿಲ್ಲ.

ಬೆಂಗಳೂರು, ಸೆ.26- ಬಿಡಿಎ ವಸತಿ ಸಂಕೀರ್ಣ ನಿರ್ಮಾಣ ಯೋಜನೆಯ ಗುತ್ತಿಗೆಯಲ್ಲಿ 7 ಕೋಟಿ ರೂಪಾಯಿವರೆಗೂ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆಯಾಗಿರುವುದು ವಾಟ್ಸ್ ಚಾಟ್‌ನಲ್ಲಿ ತಿಳಿದು ಬರುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು, ವಾಟ್ಸ್‌ಅಪ್ ಚರ್ಚೆಯ ಸಂಪೂರ್ಣ ಮಾಹಿತಿ ನೀಡಿದರು. ವಿಧಾನಸಭೆಯಲ್ಲಿಂದು ತಡ ರಾತ್ರಿವರೆಗೂ ನಡೆದ ಚರ್ಚೆಯಲ್ಲಿ ರಹಸ್ಯಕಾರ್ಯಾಚರಣೆಯ ಮಾಹಿತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ.

ಇಲ್ಲವಾದರೆ ವಿಶೇಷ ತನಿಖಾ ದಳ ರಚನೆ ಮಾಡಿ, ಹೈಕೋರ್ಟ್‌ನ ಮುಖ್ಯನ್ಯಾಯಾಮೂರ್ತಿಯವ ಉಸ್ತವಾರಿಯಲ್ಲಿ ತನಿಖೆ ನಡೆಸಲಿ. ಆರೋಪ ಸಾಬೀತಾದರೆ ಯಡಿಯೂರಪ್ಪ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ, ಆರೋಪ ಸಾಬೀತಾಗದಿದ್ದರೆ ಅಧಿಕಾರದಲ್ಲಿ ಮುಂದುವರೆಯಲಿ. ನಾನು ಮಾಡಿದ ಆರೋಪ ಆಧಾರ ರಹಿತವಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.

ಆಗ ಸಚಿವ ಮಾಧುಸ್ವಾಮಿ ಅವರು, ರಹಸ್ಯ ಕಾರ್ಯಾಚರಣೆಯಲ್ಲಿ ನೀವು ಭಾಗಿಯಾಗಿದ್ದೀರಿ ಎಂದು ಆರೋಪಿಸಿದರು. ಇಲ್ಲ, ನಾನು ರಹಸ್ಯ ಕಾರ್ಯಾಚರಣೆಯಲ್ಲಿ ನನ್ನ ಪಾತ್ರ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯ ಪ್ರವೇಶ ಮಾಡಿ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೆಲವು ನಿಯಮಗಳಿವೆ. ಅವುಗಳನ್ನು ಪಾಲನೆ ಮಾಡಬೇಕಿದೆ. ನಿಮ್ಮ ಪಾಡಿಗೆ ನೀವು ಪರಸ್ಪರ ಆರೋಪ ಮಾಡುತ್ತಾ ಚರ್ಚೆ ಮಾಡುತ್ತಿದ್ದರೆ ನಾನು ಹೆಚ್ಚು ಕಾಲ ಅಧಿವೇಶನ ನಡೆಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಅವರು ತಮ್ಮ ಮಾತುಗಳನ್ನು ಮುಂದುವರೆಸಿ ನಾನು ಯಾರ ವಿರುದ್ಧವೂ ಆರೋಪ ಮಾಡಿಲ್ಲ, ಮಾನನಷ್ಟವಾಗುವಂತೆ ಮಾತನಾಡಿಲ್ಲ. ಯಡಿಯೂರಪ್ಪ, ಮಾಧುಸ್ವಾಮಿ ಲಂಚ ಪಡೆದಿದ್ದಾರೆ ಎಂದು ಹೇಳಿಲ್ಲ. ಯಾರ ವಿರುದ್ಧವೂ ಆರೋಪ ಮಾಡುವಂತಿಲ್ಲ ಎಂದರೆ ಈ ಸದನ ನಡೆಸಲು ಸಾಧ್ಯವಿಲ್ಲ. ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ಮಾತನಾಡಬೇಕು ಎಂದಾದರೆ ಭ್ರಷ್ಟಚಾರ ಕಡಿಮೆ ಆಗುವುದು ಹೇಗೆ ಎಂದು ಪ್ರಶ್ನಿಸಿದರು.

ವಿಜೆಯೇಂದ್ರ ಅವರ ಹೆಸರು ಹೇಳಿದರೆ ಆಡಳಿತ ಪಕ್ಷದಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ. ನೀವು ಆ ಹೆಸರನ್ನು ಹೇಳಬೇಡಿ ಎಂದು ರಮೇಶ್ ಕುಮಾರ್ ಸಲಹೆ ನೀಡಿದರು. ಆಡಳಿತ ಪಕ್ಷದ ಭಾಗದಲ್ಲಿ ಕೆಲವರಿಗೆ ಈ ವಿಷಯ ಇನ್ನಷ್ಟು ಚರ್ಚೆಯಾಗಬೇಕು ಎಂಬ ಭಾವನೆಯಿದೆ. ಆದರೆ ನಮಗೆ ಆ ರೀತಿ ಇಲ್ಲ ಎಂದಾಗ ಬಿಜೆಪಿ ಭಾಗದಿಂದ ಗಲಾಟೆ ಎದುರಾಯಿತು.
ಮಾಧುಸ್ವಾಮಿಯವರು ನಾಳೆಯಿಂದ ನಾವು ನಿಮ್ಮ ಮಕ್ಕಳ ಮೇಲೆ ರಹಸ್ಯ ಕಾರ್ಯಾಚರಣೆ ಮಾಡಿಸುತ್ತೇವೆ. ಅದನ್ನೆ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

ಬಿಜೆಪಿ ಸದಸ್ಯರ ಗಲಾಟೆಗೆ ಕಿಡಿಕಾರಿದ ರಮೇಶ್ ಕುಮಾರ್, ಇದೇನು ಅಧಿವೇಶನ ನಡೆಯುವ ರೀತಿಯಾ. ಪದೇ ಪದೇ ಗಲಾಟೆ ಮಾಡಿ ಅಡ್ಡಿ ಪಡಿಸುತ್ತಿದ್ದಾರೆ ಎಂದರು ಹೆಸರು ಹೇಳಬೇಡಿ ಎಂದು ರಮೇಶ್ ಕುಮಾರ್ ನೀಡಿದ ಸಲಹೆಯನ್ನು ಪರಿಗಣಿಸುವುದಾಗಿ ಹೇಳಿದ ಸಿದ್ದರಾಮಯ್ಯ ಅವರು, ಗುತ್ತಿಗೆದಾರರು ಮತ್ತು ಒಬ್ಬ ವ್ಯಕ್ತಿ ನಡುವೆ ವಾಟ್ಸ್‌ಅಪ್ ಚಾಟ್ ನಡೆದಿದೆ ಎಂದರು.

ಒಬ್ಬ ವ್ಯಕ್ತಿ ಎಂದಾಗಲು ಬಿಜೆಪಿ ಕಡೆಯಿಂದ ವಿರೋಧ ವ್ಯಕ್ತವಾದಾಗ ಎಕ್ಸ್, ವೈ ಎಂದು ಬಳಸುತ್ತೇನೆ ಎಂದ ಸಿದ್ದರಾಮಯ್ಯ ಅವರು, ಎಕ್ಸ್ ಎಂಬ ಪದ ಬಳಕೆ ಮಾಡುತ್ತಲೇ ಚರ್ಚೆ ಮುಂದುವರೆಸಿ ವಾಟ್ಸ್ ಚಾಟ್‌ನಲ್ಲಿ ನಡೆದ ಮಾಹಿತಿಯ ಸಂಪೂರ್ಣ ವಿವರ ನೀಡಿದರು.  ಚಾಟ್‌ನಲ್ಲಿ ಮಂಜು, ಉಮೇಶ್ ಎಂಬವರ ಹೆಸರು ಪ್ರಸ್ತಾಪಿಸಲಾಗಿದೆ.

Facebook Comments

Sri Raghav

Admin