ಯಡಿಯೂರಪ್ಪರನ್ನು ಬಿಜೆಪಿಯವರೇ ಮನೆಗೆ ಕಳುಹಿಸಿದ್ದಾರೆ: ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.7- ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಎಲ್ಲದಕ್ಕೂ ಕೊರೊನಾ ನೆಪ ಹೇಳಿ ಸರ್ಕಾರ ನುಣುಚಿಕೊಳ್ಳುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಕೃಷ್ಣಭೈರೇಗೌಡ ಅವರು ಆಯೋಜಿಸಿದ್ದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಜನ ವಾಸ್ತವತೆ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಶಾಸಕರನ್ನು ಖರೀದಿಸಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿದ ಯಡಿಯೂರಪ್ಪ ಅವರನ್ನು ಈಗ ಬಿಜೆಪಿಯವರೇ ಮನೆಗೆ ಕಳುಹಿಸಿದ್ದಾರೆ. ಯಡಿಯೂರಪ್ಪ ಅವರ ಕೈ ಜೋಡಿಸಿದ್ದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವುದರಿಂದ ನಾವು ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಕೊರೊನಾ ನಿರ್ವಹಣೆಗಾಗಿ 5 ರಿಂದ 6 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಉಳಿದ ಎಲ್ಲ ಯೋಜನೆಗಳನ್ನೂ ಸ್ಥಗಿತಗೊಳಿಸಿದ್ದಾರೆ. 1.45 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಏನು ಕೇಳಿದರೂ ಕೊರೊನಾ ಎಂದು ನೆಪ ಹೇಳುತ್ತಾರೆ ಎಂದು ಹರಿಹಾಯ್ದರು.

ಬಡವರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ನಮ್ಮ ಸರ್ಕಾರ ಇಂದಿರಾ ಕ್ಯಾಂಟಿನ್ ತೆರೆದಿತ್ತು. ಈಗ ಅದನ್ನು ಮುಚ್ಚಲು ಹೊರಟಿದ್ದಾರೆ. ಸಿ.ಟಿ.ರವಿ ಎಂಬ ವ್ಯಕ್ತಿ ಹೆಸರು ಬದಲಾವಣೆ ಮಾಡಬೇಕೆಂದು ಹೇಳುತ್ತಿದ್ದಾರೆ. ಅವರಿಗೆ ಮಾನ-ಮರ್ಯಾದೆ ಇಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಈ ವೇಳೆ ಕಾರ್ಯಕರ್ತರೊಬ್ಬರು ಅಯೋಗ್ಯ ಎಂದು ಪದಬಳಕೆ ಮಾಡಿದಾಗ ನಾನು ಆ ರೀತಿ ಹೇಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ನೀನು ಮಾಲೀಕ. ನೀನು ಹೇಳಬಹುದು ಎಂದು ಕಾರ್ಯಕರ್ತನನ್ನುದ್ದೇಶಿಸಿ ಸಿದ್ದರಾಮಯ್ಯ ಹೇಳಿದರು. ನಮ್ಮ ನಾಯಕರ ಹೆಸರಿಟ್ಟರೆ ಅವರಿಗೇಕೆ ಹೊಟ್ಟೆ ಉರಿ ಎಂದು ಪ್ರಶ್ನಿಸಿದರು.

ಆಹಾರ ಸಚಿವ ಉಮೇಶ್ ಕತ್ತಿ ಒಬ್ಬರಿಗೆ 4 ಕೆಜಿ ಅಕ್ಕಿ ಸಾಕು ಎಂದು ಹೇಳುತ್ತಿದ್ದಾರೆ. ಅವರಿಗೆ ಸಕ್ಕರೆ ಕಾಯಿಲೆ ಇರಬಹುದು. ಅವರು ನಾಲ್ಕು ಕೆಜಿಗಿಂತ ಹೆಚ್ಚು ಅಕ್ಕಿ ತಿನ್ನದೆ ಇರಬಹುದು. ಆದರೆ, ಬೇರೆಯವರಿಗೆ ಅದು ಸಾಲುವುದಿಲ್ಲ ಎಂದರು. ಆರೋಗ್ಯ ಸಚಿವರು ಕೊರೊನಾ ಸಂದರ್ಭದಲ್ಲಿ ಸೋಂಕಿತರಿಗೆ ಬೆಡ್ ಒದಗಿಸುವಲ್ಲಿ ವಿಫಲರಾದರು. ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟರೆ ಸುಳ್ಳು ಮಾಹಿತಿ ಕೊಟ್ಟು ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡರು ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ ರಾಜಕೀಯ ವಿರೋಧಿಗಳು ಸಾಕಷ್ಟು ಟೀಕೆ ಮಾಡಿದ್ದರು. ಅದಾವುದನ್ನೂ ಜನ ಲೆಕ್ಕಕ್ಕಿಟ್ಟುಕೊಳ್ಳದೆ ನಾನು ಬಿಡುಗಡೆಯಾಗಿ ಬಂದಾಗ ಅದ್ಧೂರಿ ಸ್ವಾಗತ ನೀಡಿದರು. ಅದನ್ನು ಎಂದೂ ಮರೆಯುವುದಿಲ್ಲ. ಅದರಲ್ಲೂ ಬ್ಯಾಟರಾಯನಪುರ ಕ್ಷೇತ್ರದ ಜನರ ಸ್ಪಂದನೆಯನ್ನು ಜೀವನಪೂರ್ತಿ ನೆನಪಿಟ್ಟುಕೊಳ್ಳುತ್ತೇನೆ ಎಂದರು. ಶಾಸಕರಾದ ಬೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Facebook Comments