“ನಾನು ದನದ ಮಾಂಸ ತಿಂತೀನಿ, ಬೇಡ ಅನ್ನೋಕೆ ನೀನು ಯಾವನು..?” : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.28- ನಾನು ದನದ ಮಾಂಸ ತಿನ್ನುತ್ತೇನೆ. ಅದನ್ನು ಬೇಡ ಎನ್ನಲು ನೀನು ಯಾವನು ಎಂದು ಪ್ರಶ್ನಿಸುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾನೂನನ್ನು ಬಲವಾಗಿ ವಿರೋಧಿಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್‍ನ 136ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ಹೊಸದಲ್ಲ.

1964ರಲ್ಲೆ ಕಾಂಗ್ರೆಸ್ ಜಾರಿಗೆ ತಂದಿತ್ತು. ಈಗ ಅದನ್ನು ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರಲು ಮುಂದಾಗಿದೆ. ಆಯ್ತಪ್ಪಾ ನಾನು ದನದ ಮಾಂಸ ತಿನ್ನುತ್ತೇನೆ. ನೀನು ಯಾವನ್ನಯ್ಯ ಕೇಳೋಕೆ. ನೀನು ತಿನ್ನು ಎಂದು ನಾನು ಬಲವಂತ ಮಾಡಲ್ಲ. ನನ್ನ ಆಹಾರ ನನ್ನ ಇಷ್ಟ. ಅದನ್ನು ಕೇಳೋಕೆ ನೀನು ಯಾರು ಎಂಬುದನ್ನು ಹೇಳೋಕೆ ಹೆಚ್ಚು ಧೈರ್ಯ ಬೇಕಿಲ್ಲ ಎಂದರು.

ಮುದಿ ಹಸು, ಎತ್ತು, ಕೋಣಗಳನ್ನು ಸಾಕಲಾಗದ ರೈತರು ಏನು ಮಾಡಬೇಕು. ಇವುಗಳನ್ನು ಸಾಕಲು ದಿನವೊಂದಕ್ಕೆ 100 ರೂಪಾಯಿ ಬೇಕು. ನಿಜ ನಾವು ಹಸುವನ್ನು ದೇವರೆಂದು ಪೂಜಿಸುತ್ತೇವೆ. ರೈತರು ಪೂಜೆ ಮಾಡುತ್ತಾರೆ ಎಂದರು. ನಾನು ಸಿದ್ಧಾಂತಕ್ಕೆ ಬದ್ಧವಾಗಿದ್ದೇನೆ. ನಾವು ನಂಬಿರುವ ಸಿದ್ಧಾಂತಗಳನ್ನು ಗಟ್ಟಿಯಾಗಿ ಹೇಳಬೇಕು. ಕಾಂಗ್ರೆಸ್‍ಗೆ ಹಿನ್ನೆಡೆಯಾದರೆ ದೇಶದ ಬಡವರಿಗೆ, ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ ಹಿನ್ನೆಡೆಯಾದಂತೆ ಎಂದು ಹೇಳಿದರು.

ಯುವಕರು ಕಾಂಗ್ರೆಸ್ ಪಕ್ಷ ಸಿದ್ದಾಂತ ಬಗ್ಗೆ ತಿಳಿದು ಕೊಳ್ಳಬೇಕು. ಸಿದ್ದಾಂತ ಗೊತ್ತಿಲ್ಲದೆ ಹೋರಾಟ ಮಾಡಿದ್ರೆ ಪ್ರಯೋಜನವಿಲ್ಲ. ಕಾಂಗ್ರೆಸ್‍ನಲ್ಲಿ ಎಷ್ಟೋ ಜನರಿಗೆ ಪಕ್ಷದ ಸಿದ್ದಾಂತವೇ ಗೊತ್ತಿಲ್ಲ. ಸಾಮಾಜಿಕ ನ್ಯಾಯದ ಬಗ್ಗೆ ಕೇಳಿದರೆ ಗೊತ್ತಿಲ್ಲ ಎನ್ನುತ್ತಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರ ಇದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಡೋಂಗಿತನ, ಸೋಗಲಾಡಿತನ ಜನರ ಮುಂದೆ ಹೇಳಬೇಕು. ನಮ್ಮ ವಿಚಾರಗಳಲ್ಲಿ ಬದ್ಧತೆ ಇರಬೇಕು ಎಂದರು.

ರಾಜ್ಯ ಸಭಾಸದಸ್ಯ ಹನುಂತಯ್ಯ ಅವರು ಮಾತನಾಡುವಾಗ, ಗಾಂಧಿಜಿ ಕಾಂಗ್ರೆಸ್ ಹುಟ್ಟಿದಾಗ ಸದಸ್ಯತ್ವ ಪಡೆದಿರಲಿಲ್ಲ ಎಂದರು. ತಮ್ಮ ಮಾತಿನಲ್ಲಿ ಹನುಮಂತಯ್ಯ ಅವರ ತಪ್ಪು ಹೇಳಿಕೆಯನ್ನು ಸಿದ್ದರಾಮಯ್ಯ ಸರಿ ಪಡಿಸಿದರು. ಗಾಂಧಿಜೀ ಹುಟ್ಟಿದ್ದು 1869ರಲ್ಲಿ, ಕಾಂಗ್ರೆಸ್ ಹುಟ್ಟಿದ್ದು 1885ರಲ್ಲಿ. ಕಾಂಗ್ರೆಸ್ ಹುಟ್ಟಿದಾಗ ಗಾಂಧಿಜೀ ಅವರಿಗೆ ಹದಿನಾರು ವರ್ಷ ಮಾತ್ರವಾಗಿತ್ತು.

1918ರಲ್ಲಿ ಗಾಂಧಿಜೀ ಕಾಂಗ್ರೆಸ್ ಅಧ್ಯಕ್ಷರಾದರು ಎನ್ನುವಾಗ ಸಭೆಯಲ್ಲಿ ಹೋಗ್ಲಿ ಬಿಡಿ ಎಂಬ ಮಾತು ಕೇಳಿ ಬಂತು. ಆಗ ಗದರಿದ ಸಿದ್ದರಾಮಯ್ಯ, ಯಾರೀ ಅದು ಹೋಗ್ಲಿ ಬಿಡಿ ಎಂದಿದ್ದು. ಕಾರ್ಯಕರ್ತರಿಗೆ ತಪ್ಪು ಮಾಹಿತಿ ಹೋಗಬಾರದು ಎಂದು ಸ್ಪಷ್ಟ ಪಡಿಸಿದರು.

ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಿದ ಪಕ್ಷ ಕಾಂಗ್ರೆಸ್. ನಾವು ಪ್ರತಿದಿನ ಬಿಜೆಪಿ ವಿರುದ್ದ ಹೋರಾಟ ಮಾಡಬೇಕಿದೆ. ರಾಹುಲï ಗಾಂಧಿ , ಸಿದ್ದರಾಮಯ್ಯ ಅವರಷ್ಟೇ ಬಿಜೆಪಿ ವಿರುದ್ದ ಹೋರಾಟ ಮಾಡಿದ್ರೆ ಸಾಲದು. ಎಲ್ಲರೂ ಹೋರಾಟ ಮಾಡಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯ ಒಬ್ಬರೇ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ವಿರೋಧವನ್ನು ಕಟ್ಟಿಕೊಂಡಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲï ಗಾಂಧಿ ಒಬ್ಬರೇ ಮಾತನಾಡುತ್ತಿದ್ದಾರೆ. ಎಲ್ಲ ರಾಜ್ಯಗಳಲ್ಲೂ ಶಾಸಕಾಂಗ ಪಕ್ಷದ ನಾಯಕರು ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷರು ಮಾತನಾಡಿ ಹೋರಾಟ ನಡೆಸಿದರೆ ನರೇಂದ್ರ ಮೋದಿ ಸರ್ಕಾರ ತೆಗೆಯುವುದು ಕಷ್ಟವಲ್ಲ ಎಂದರು.

ನಾನು ಕಾಂಗ್ರೆಸ್ ಅಧ್ಯಕ್ಷ ಆಗಬೇಕು ಎಂದು ಪ್ರಯತ್ನಿಸಿದ್ದೆ. ಅದಕ್ಕೆ ಕೆಲವರು ಒಪ್ಪಲಿಲ್ಲ. ಅದನ್ನ ನಾನು ಬಹಿರಂಗವಾಗಿ ಹೇಳುವುದಿಲ್ಲ. ನಾನು ಇದೇ ಪಕ್ಷದಲ್ಲಿ ಬೆಳೆದಿದ್ದೇನೆ ಇಲ್ಲಿಯೇ ಸಾಯುತ್ತೇನೆ. ಸಿಎಂ ಯಾರಾದರೂ ಆಗಿ ಮೊದಲು ಪಕ್ಷ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.

ಕಾಂಗ್ರೆಸ್ ಹೈಕಮಾಂಡ್ ನಿಮ್ಮನ್ನ ನಂಬಿದೆ ಸಿದ್ದರಾಮಯ್ಯನವರೆ. ನೀವು ಶಿವಕುಮಾರ್ ಅವರನ್ನ ಜತೆಗೆ ಕರೆದುಕೊಂಡು ಹೋಗಿ. ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಯಾರಾದರೂ ಸಿಎಂ ಆಗ್ಲಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆದರೂ ಆಗ್ಲಿ, ಪರಮೇಶ್ವರ್ ಅವರಾದರೂ ಆಗ್ಲಿ.

ಮೊದಲು ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ. ಬುದ್ದಿ ಇಲ್ಲದ ಕೆಲವರು ಸಿದ್ದರಾಮಯ್ಯ ಸಿಎಂ ಅಂತಾರೆ, ಡಿಕೆ ಶಿವಕುಮಾರ್ ಸಿಎಂ ಅಂತಾರೆ ಇದಕ್ಕೆ ತೆರೆ ಎಳೆಯಿರಿ ಎಂದು ಸಲಹೆ ನೀಡಿದರು. ಸ್ವಾತಂತ್ರ್ಯ ಬಂದ ನಂತ್ರ ಸಿದ್ದರಾಮಯ್ಯ ರವರು ಉತ್ತಮ ಅಡಳಿತ ಕೊಟ್ಟಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಮುನಿಯಪ್ಪ ಸಿದ್ದರಾಮಯ್ಯ ಅವರನ್ನು ಹೊಗಳಿದರು.

Facebook Comments