ಮತ್ತೆ ವಿಪಕ್ಷ ನಾಯಕರಾಗುವರೇ ಸಿದ್ದರಾಮಯ್ಯ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.12- ದೆಹಲಿಯಲ್ಲಿಂದು ನಡೆದಿರುವ ಕಾಂಗ್ರೆಸ್ ಹೈಕಮಾಂಡ್‍ನ ಮಹತ್ವದ ಸಭೆಯಲ್ಲಿ ರಾಜ್ಯ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವ ಸಾಧ್ಯತೆಗಳಿವೆ. ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ಶಾಸಕಾಂಗ ಪಕ್ಷಗಳ ನಾಯಕರ ಸಭೆ ಕರೆದಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು ನಂತರ ಕರ್ನಾಟಕ ನಾಯಕರ ಜತೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ.

ವಿರೋಧ ಪಕ್ಷದ ನಾಯಕನ ಆಯ್ಕೆ ವಿಷಯದಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ಅವರ ಪರವಾಗಿ ಒಲವು ತೋರಿದೆ. ಆದರೆ, ಮೂಲ ಕಾಂಗ್ರೆಸಿಗರು ಪರ್ಯಾಯ ನಾಯಕತ್ವಕ್ಕೆ ಅವಕಾಶ ಕೊಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಏರಿದ್ದಾರೆ.

ವಿರೋಧ ಪಕ್ಷದ ನಾಯಕನ ಆಯ್ಕೆಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಆದರೆ ಜಾರಿ ನಿರ್ದೇಶನಾಲಯದ ಕ್ರಮದಿಂದಾಗಿ ಅವರು ಈಗ ಕಾನೂನಿನ ತೊಡಕು ಎದುರಿಸುತ್ತಿದ್ದು, ರೇಸ್‍ನಿಂದ ಹೊರ ಉಳಿಯುವಂತಾಗಿದೆ.

ಉಳಿದಂತೆ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ರಮೇಶ್‍ಕುಮಾರ್, ಡಾ.ಜಿ.ಪರಮೇಶ್ವರ್ ಅವರುಗಳು ರೇಸ್‍ನಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಹಿರಿಯ ನಾಯಕರು ಎಚ್.ಕೆ.ಪಾಟೀಲ್ ಪರವಾಗಿ ಹೈಕಮಾಂಡ್ ಮೇಲೆ ಒತ್ತಡ ಏರುತ್ತಿರುವುದಾಗಿ ತಿಳಿದು ಬಂದಿದೆ.

ಅಂತಿಮವಾಗಿ ಇಂದು ಸಂಜೆ ರಾಜ್ಯ ನಾಯಕರ ಜತೆ ಚರ್ಚಿಸಲಿರುವ ಹೈಕಮಾಂಡ್ 2-3 ದಿನಗಳ ಒಳಗಾಗಿ ವಿರೋಧ ಪಕ್ಷದ ನಾಯಕನ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅಥವಾ ಎಚ್.ಕೆ.ಪಾಟೀಲ್ ಒಬ್ಬರಿಗೆ ಅದೃಷ್ಟ ಒಲಿಯಬಹುದು ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin