ಕಾಂಗ್ರೆಸ್ ಭಿನ್ನಮತ ಶಮನಕ್ಕೆ ಸಿದ್ದು ಮದ್ದು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01
ಬೆಂಗಳೂರು, ಸೆ.17-ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರ ನಿವಾಸ ಇಂದೂ ಕೂಡ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿತ್ತು. ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಮುಖಂಡರು ಸೇರಿದಂತೆ ಹಲವರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚಿಸಿದರು.

ಭಿನ್ನಮತವನ್ನು ಬಗೆಹರಿಸಲು ಅಖಾಡ ಕ್ಕಿಳಿದಿರುವ ಸಿದ್ದರಾಮಯ್ಯ ಎಲ್ಲರೊಂದಿಗೆ ಚರ್ಚಿಸಿ ಸಂಧಾನ ನಡೆಸಿರುವ ಹಿನ್ನೆಲೆಯಲ್ಲಿ ಬಿಜೆಪಿ ನಡೆಸಿರುವ ಆಪರೇಷನ್ ತಂತ್ರ ಬಹುತೇಕ ಠುಸ್ ಆಗುವ ಸಾಧ್ಯತೆ ಇದೆ ಎಂದೇ ಹೇಳಲಾಗಿದೆ. ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದ್ದ ಬಹುತೇಕ ಕಾಂಗ್ರೆಸ್‍ನ ಶಾಸಕರು ಸಿದ್ದರಾಮಯ್ಯನವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಅತೃಪ್ತರು ತಣ್ಣಗಾಗಿದ್ದಾರೆ. ಬಳ್ಳಾರಿಯ ಕೆಲವರನ್ನು ಹೊರತುಪಡಿಸಿದರೆ ಬಹುತೇಕ ಎಲ್ಲರೂ ಇಂದು ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು. ಸಚಿವ ಜಮೀರ್ ಅಹಮ್ಮದ್, ಪಿ.ಟಿ.ಪರಮೇಶ್ವರ್‍ನಾಯಕ್, ಸುಧಾಕರ್, ತನ್ವೀರ್‍ಸೇಠ್, ನರೇಂದ್ರಸ್ವಾಮಿ, ಎಂ.ಟಿ.ಬಿ.ನಾಗರಾಜ್, ಭೀಮಾನಾಯಕ್, ಮಾಜಿ ಸಚಿವ ಎಚ್.ಆಂಜನೇಯ, ಸಿ.ಎಂ.ಇಬ್ರಾಹಿಂ ಸೇರಿದಂತೆ 20ಕ್ಕೂ ಹೆಚ್ಚು ಮುಖಂಡರು ಭೇಟಿ ಮಾಡಿ ಚರ್ಚಿಸಿದರು. ಅವರೊಂದಿಗೆ ಸಿದ್ದು ಅವರು ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.  ಇದಲ್ಲದೆ, ಸಚಿವಾಕಾಂಕ್ಷಿಗಳು, ನಿಗಮ ಮಂಡಳಿಗಳ ಆಕಾಂಕ್ಷಿಗಳ ಬೆಂಬಲಿಗರು ಕೂಡ ಇಂದು ಸಿದ್ದು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಸಿದ್ದು ನಿವಾಸ ಕಾವೇರಿಯಲ್ಲಿ ಕಾವೇರಿದ ರಾಜಕೀಯ ಬೆಳವಣಿಗೆಗಳು ನಡೆದವು.  ಭಿನ್ನಮತ ಬಗೆಹರಿಯುವ ಲಕ್ಷಣಗಳು ಕಂಡುಬಂದವು. 12 ದಿನಗಳ ಕಾಲ ಯುರೋಪ್ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ನಿನ್ನೆಯಷ್ಟೆ ಹಿಂತಿರುಗಿದ್ದು, ಪಕ್ಷದ ಉಸ್ತುವಾರಿ ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವರು ನಿನ್ನೆಯಷ್ಟೆ ಸಭೆ ನಡೆಸಿದ್ದರು. ಭಿನ್ನಮತ ಬಗೆಹರಿಸುವ ಹೊಣೆಯನ್ನು ಸಿದ್ದರಾಮಯ್ಯನವರಿಗೆ ವಹಿಸಲಾಗಿತ್ತು. ಅದರಂತೆ ಇಂದು ಎಲ್ಲರೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದರು.

ಹಲವರೊಂದಿಗೆ ದೂರವಾಣಿ ಮೂಲಕವೂ ಚರ್ಚಿಸಿದರು. ಯಾವುದೇ ರೀತಿಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಮುಜುಗರವಾಗದಂತೆ ನಡೆದುಕೊಳ್ಳಿ. ಪಕ್ಷ ಬಿಡುವ ತೀರ್ಮಾನವಾಗಲಿ, ಪಕ್ಷ ವಿರೋಧಿ ಚಟುವಟಿಕೆಗಳು ನಡೆಸುವುದು ಬೇಡ. ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾಗಿದೆ. ಯಾವುದೇ ಸಮಸ್ಯೆಗಳಿದ್ದರೆ ಬಹಿರಂಗವಾಗಿ ಹೇಳುವುದು ಬೇಡ.

ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳೋಣ ಎಂದು ಸಲಹೆ ನೀಡಿದ್ದಾರೆ.  ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಅಲ್ಲದೆ, ನಿಗಮ ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಮಾಡಲಾಗುವುದು. ಆದಷ್ಟು ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.

Facebook Comments

Sri Raghav

Admin