ರೇಷ್ಮೆ ಗೂಡಿಗೆ ರಕ್ಷಣಾತ್ಮಕ ದರದ ಬದಲು ಪ್ರೋತ್ಸಾಹ ಧನ ಘೋಷಿಸಿದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರೇಷ್ಮೆ ಗೂಡಿಗೆ ರಕ್ಷಣಾತ್ಮಕ ದರದ ಬದಲು ಪ್ರೋತ್ಸಾಹ ಧನ ಘೋಷಿಸಿದ ಸರ್ಕಾರ. ಕೋವಿಡ್ 19 ಆರಂಭವಾದ ಕಾಲದಲ್ಲೂ ರೇಷ್ಮೆ ಬೆಳೆಗಾರರ ನೆರವಿಗೆ ನಿಂತಿದ್ದ ಸರ್ಕಾರ, ಈಗಲೂ ರೇಷ್ಮೆ ಬೆಳೆಗಾರರ ಹಿತ ಕಾಪಾಡಲು ಮುಂದಾಗಿದೆ.

ಕೊರೊನಾ ಕಾರಣದಿಂದ‌ ರೇಷ್ಮೆಗೂಡಿನ ಧಾರಣೆ ಕುಸಿತ ವಾಗಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣಾತ್ಮಕ ದರವನ್ನು ಘೋಷಿಸಲಾಗಿತ್ತು. ಆದರೆ ಪ್ರೋತ್ಸಾಹ ದರ ನೀಡುವಂತೆ ರೈತರು ಸಚಿವ ಡಾ| ನಾರಾಯಣ ಗೌಡ ಅವರಲ್ಲಿ ಮನವಿ ಮಾಡಿಕೊಂಡಿದ್ದರು.

ರಕ್ಷಣಾತ್ಮಕ ದರದಿಂದ ಎಲ್ಲಾ ರೇಷ್ಮೆ ಬೆಳೆಗಾರರಿಗೂ ಸಮಾನವಾಗಿ ಆರ್ಥಿಕ ನೆರವು ದೊರೆಯುವುದಿಲ್ಲ. ಹಾಗಾಗಿ ಪ್ರೋತ್ಸಾಹ ಧನ ನೀಡುವಂತೆ ರೇಷ್ಮೆ ಬೆಳೆಗಾರರು ಸಚಿವರಲ್ಲಿ ವಿನಂತಿಸಿದ್ದರು.

ಈ‌ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ಬಳಿಕ ಮುಖ್ಯಮಂತ್ರಿಗಳಲ್ಲಿ ಈ ಬಗ್ಗೆ ಚರ್ಚಿಸಿ ಆರ್ಥಿಕೆ ನೆರವಿಗೂ ಮನವಿ ಮಾಡಿದ್ದರು.

ಸಚಿವರ ಮನವಿಯನ್ನು ಆಲಿಸಿದ ಮುಖ್ಯಮಂತ್ರಿಗಳು ಪ್ರೋತ್ಸಾಹಧನ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಎಪ್ರಿಲ್ ನಿಂದ ರೇಷ್ಮೆ ಧಾರಣೆಯಲ್ಲಿ ಚೇತರಿಕೆ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಗೆ ಸಂಕಷ್ಟ ಎದುರಾಗಬಾರದು ಎಂಬ ಕಾರಣಕ್ಕೆ ಸೆಪ್ಟೆಂಬರ್‌ 2020 ರ ವರೆಗೂ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ.

ಈ‌ ಅವಧಿಯಲ್ಲಿ ಪ್ರತಿ ಕೆಜಿ ಮಿಶ್ರ ತಳಿ ರೇಷ್ಮೆ ಗೂಡಿಗೆ 30ರೂ. ಮತ್ತು ದ್ವಿತಳಿ ರೇಷ್ಮೆ ಗೂಡಿಗೆ 50ರೂ. ನಂತೆ ಪ್ರೋತ್ಸಾಹ ಧನ ನೀಡಲು ಸಚಿವರು ಸೂಚನೆ‌ ನೀಡಿದ್ದಾರೆ. ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಲು ಅಂದಾಜು 45ಕೋ.ರೂ ವೆಚ್ಚವಾಗುವ ಸಾಧ್ಯತೆ ಇದೆ.

ಈ ಸಂಬಂಧ ಆರ್ಥಿಕ ಇಲಾಖೆ ಜೊತೆಯೂ ಚರ್ಚಿಸಿ, ಪ್ರೋತ್ಸಾಹಧನ ನೀಡುವ ಸಂಬಂಧ ಘೋಷಣೆ ಮಾಡಿ ಆದೇಶವನ್ನ ಹೊರಡಿಸಿದೆ. ಇದು ರೈತರ ಖಾತೆಗೆ ನೇರವಾಗಿ ಜಮಾವಣೆ ಆಗಲಿದೆ.

Facebook Comments

Sri Raghav

Admin